ಸಂಸದ ಕೋಟ ಪತ್ರಕ್ಕೆ ಕೇಂದ್ರ ಸಚಿವರ ಸ್ಪಂದನೆ : ಸ್ಥಳೀಯ ಭಾಷಿಕರನ್ನೇ ಬ್ಯಾಂಕ್ ನೌಕರರಾಗಿ ನೇಮಿಸಲು ಸೂಚನೆ
ಉಡುಪಿ, ನ.8: ಗ್ರಾಮೀಣ ಪ್ರದೇಶ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಥಳೀಯ ಭಾಷಿಕರನ್ನೇ ಬ್ಯಾಂಕು ಉದ್ಯೋಗಕ್ಕೆ ನೇಮಿಸಬೇಕೆಂಬ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿಗೆ ಸ್ಪಂದಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಸ್ಥಳೀಯ ಭಾಷಿಗರನ್ನು ಬ್ಯಾಂಕ್ ನೌಕರಿಗೆ ನೇಮಿಸಲು ಆದೇಶಿಸಿದ್ದಾರೆ.
ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸಹಿತ ಹಲವು ರಾಜ್ಯಗಳಲ್ಲಿ ಹಿಂದಿ ಅಥವಾ ಅನ್ಯ ಭಾಷಿಕರನ್ನು ಸ್ಥಳೀಯ ಬ್ಯಾಂಕುಗಳಿಗೆ ನೌಕರಿಗೆ ನೇಮಿಸುವ ವಿರುದ್ಧ ಅನೇಕ ವರ್ಷಗಳಿಂದ ಕೂಗುಗಳು ಕೇಳಿ ಬರುತ್ತಿದ್ದವು. ಕರ್ನಾಟಕದಲ್ಲಿ ಹಿಂದಿ, ತಮಿಳು, ತೆಲುಗು, ಮಲಯಾಳಿ ಮಾತನಾಡುವ ಭಾಷಿಕರನ್ನು ಸ್ಥಳೀಯ ರಾಷ್ಟ್ರೀಕೃತ ಬ್ಯಾಂಕುಗಳಿಗೆ ನೌಕರಿಗೆ ನೇಮಿಸುವುದು ಸಾರ್ವಜನಿಕರ ಸರಳ ವ್ಯವಹಾರಕ್ಕೆ ಅಡ್ಡಿಯಾಗುತ್ತಿತ್ತು. ಈ ನಿಟ್ಟಿನಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮತ್ತು ಆರ್ಬಿಐ ಗವರ್ನರ್ ಅವರಿಗೆ ಪತ್ರದ ಮೂಲಕ ಸ್ಥಳೀಯ ಭಾಷಿಕರನ್ನು ನೌಕರಿಗೆ ನಿಯೋಜನೆ ಮಾಡುವಂತೆ ಮನವಿ ಮಾಡಿದ್ದರು.
ಈ ಬಗ್ಗೆ ಸುದೀರ್ಘವಾಗಿ ಪತ್ರ ಬರೆದಿದ್ದ ಸಂಸದ ಕೋಟ ಸ್ಥಳೀಯ ಭಾಷಿಕರು ಬ್ಯಾಂಕ್ ನೌಕರರಾದರೆ ಗ್ರಾಹಕರಿಗೆ ವ್ಯವಹರಿಸಲು ಸುಲಭವಾಗುತ್ತದೆ. ಅನ್ಯ ಭಾಷಿಕರ ನೌಕರಿಯಿಂದ ಗ್ರಾಮಾಂತರ ಜನರಿಗೆ ಮತ್ತು ಹಳ್ಳಿಯವರಿಗೆ ಬ್ಯಾಂಕ್ ವ್ಯವಹಾರ ಕಷ್ಟವಾಗುತ್ತಿದೆ. ಹೀಗಾಗಿ ಸ್ಥಳೀಯ ಭಾಷಿಕರನ್ನೇ ಬ್ಯಾಂಕುಗಳಿಗೆ ಉದ್ಯೋಗಕ್ಕೆ ನೇಮಿಸಬೇಕೆಂದು ಸಂಸದ ಕೋಟ ಮನವಿ ಮಾಡಿದ್ದರು.
ಈ ಬಗ್ಗೆ ಸ್ಪಂದಿಸಿದ ಸಚಿವೆ ನಿರ್ಮಲ ಸೀತಾರಾಮನ್ ರವರು ಸ್ಥಳೀಯ ಭಾಷಿಗರನ್ನು ಬ್ಯಾಂಕ್ ನೌಕರಿಗೆ ನೇಮಿಸಲು ಆದೇಶಿಸಿದ್ದಾರೆ. ಈ ಮೂಲಕ ಸಂಸದ ಕೋಟ ಪತ್ರಕ್ಕೆ ಸಚಿವರು ಸ್ಪಂದಿಸಿದ್ದು ಸಂಸದ ಕೋಟ ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.