ಭಟ್ಕಳದಲ್ಲಿ ಸರ್ವೆ ಕಾರ್ಯಕ್ಕೆ ಅಡೆತಡೆ : ಶಿಕ್ಷಕರ ಸಂಘಗಳ ಬಹಿಷ್ಕಾರ ಘೋಷಣೆ
ಭಟ್ಕಳ: ತಾಲೂಕಿನಲ್ಲಿ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸರ್ವೆ – 2025 ಕಾರ್ಯದಲ್ಲಿ ಅನೇಕ ತೊಂದರೆಗಳು ಎದುರಾಗುತ್ತಿವೆ. ಸಮಸ್ಯೆಗಳನ್ನು ಬಗೆಹರಿಸುವವರೆಗೂ ಪಾಲ್ಗೊಳ್ಳುವುದಿಲ್ಲವೆಂದು ಶಿಕ್ಷಕರ ಸಂಘಗಳು ಸ್ಪಷ್ಟಪಡಿಸಿವೆ.
ಕರ್ನಾಟಕ ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಭಟ್ಕಳ ಶಾಖೆಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿ, ಮನೆಪಟ್ಟಿ ನೀಡದೇ ನಿಯೋಜನೆ, 150ಕ್ಕೂ ಹೆಚ್ಚು ಮನೆಗಳ ಹಂಚಿಕೆ, ಗಣತಿ ಆಪ್‌ನಲ್ಲಿ ತೊಂದರೆ, ಅಗತ್ಯ ಪರಿಕರಗಳ ಕೊರತೆ, ಅಪರಿಚಿತ ಪ್ರದೇಶಗಳಲ್ಲಿ ಮಹಿಳಾ ಶಿಕ್ಷಕರ ನಿಯೋಜನೆ ಮುಂತಾದ ನ್ಯೂನ್ಯತೆಗಳನ್ನು ಎತ್ತಿ ತೋರಿಸಿವೆ.
ವೈಯಕ್ತಿಕ ಆದೇಶ ನೀಡಬೇಕು ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮಹಿಳಾ ಶಿಕ್ಷಕರಿಗೆ ಸಹಾಯಕ ಸಿಬ್ಬಂದಿ ಒದಗಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿದ್ದು, ಸಮಸ್ಯೆ ಬಗೆಹರಿಸಿದ ಬಳಿಕವೇ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತವೆ ಎಂದು ಸಂಘಟನೆಗಳು ಘೋಷಿಸಿವೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ್ ನಾಯ್ಕ ಹಾಗೂ ನೂರಾರು ಶಿಕ್ಷಕರು ಹಾಜರಿದ್ದರು.