×
Ad

ಮೀನುಗಾರರ ಪ್ಲಾಟ್‌ಫಾರ್ಮ್ ದುರಸ್ತಿ: ಕಾಮಗಾರಿಗೆ ಸಚಿವ ಮಂಕಾಳ್ ವೈದ್ಯ ಚಾಲನೆ

ಅಳವೆಕೋಡಿ ಬಂದರು ಅಭಿವೃದ್ಧಿಗೆ 100 ಕೋಟಿ ರೂ. ಘೋಷಣೆ

Update: 2025-09-28 21:07 IST

ಭಟ್ಕಳ: ಭಟ್ಕಳ ತಾಲೂಕಿನ ತೆಂಗಿನಗುಂಡಿ ಮೀನುಗಾರಿಕಾ ಬಂದರಿನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಇಡಲಾಗಿದೆ. ಕುಸಿದಿದ್ದ ಕಾಂಕ್ರೀಟ್ ಪ್ಲಾಟ್‌ಫಾರ್ಮ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ 9.5 ಕೋಟಿ ರೂ. ವೆಚ್ಚದ ಡಯಾಫ್ರಾಮ್ ವಾಲ್ ನಿರ್ಮಾಣ ಕಾಮಗಾರಿಗೆ ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಭೂಮಿ ಪೂಜೆ ನೆರವೇರಿಸಿ ಅಧಿಕೃತ ಚಾಲನೆ ನೀಡಿದರು.

ಮೀನುಗಾರರು ಎದುರಿಸುತ್ತಿದ್ದ ತೊಂದರೆಗಳನ್ನು ಉಲ್ಲೇಖಿಸಿದ ಸಚಿವರು, “ಸಮುದ್ರದ ಏರಿಳಿತಕ್ಕೆ ತಕ್ಕಂತೆ ಮೀನುಗಾರರ ಬದುಕು ಸಾಗುತ್ತದೆ. ಶಿಕಾರಿ ಸಿಕ್ಕರೆ ಜೀವನ ಸುಗಮ, ಇಲ್ಲದಿದ್ದರೆ ಕಷ್ಟಕರ. ಇಂತಹ ಸಾವಿರಾರು ಕುಟುಂಬಗಳಿಗೆ ಸರ್ಕಾರ ಅಗತ್ಯ ಮೂಲಸೌಕರ್ಯ ಒದಗಿಸುವ ಜವಾಬ್ದಾರಿ ಹೊತ್ತಿದೆ. ಅದೇ ಸಮಯದಲ್ಲಿ ಇದು ನನ್ನ ವೈಯಕ್ತಿಕ ಬದ್ಧತೆಯೂ ಹೌದು” ಎಂದು ಹೇಳಿದರು.

ಅವರು ಮುಂದಿನ ದಿನಗಳಲ್ಲಿ ಮೀನುಗಾರಿಕೆಗೆ ಹೆಚ್ಚಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಅಳವೆಕೋಡಿ ಬಂದರನ್ನು 100 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ಘೋಷಣೆ ಮಾಡಿದರು.

ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಸ್ಥಳೀಯ ಮೀನುಗಾರರ ಮುಖಂಡರು, ಮಹಿಳೆಯರು, ಪಕ್ಷದ ಕಾರ್ಯಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News