ಭಟ್ಕಳ: ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ಹೆಲ್ಮೆಟ್ ಸುರಕ್ಷತೆ, ಟ್ರಾಫಿಕ್ ಶಿಸ್ತಿನ ಜಾಗೃತಿ ಕಾರ್ಯಕ್ರಮ
ಭಟ್ಕಳ: ಸವಾರರು ದಂಡ ತಪ್ಪಿಸಲು ಅಲ್ಲ, ತಮ್ಮ ಜೀವದ ರಕ್ಷಣೆಗೆ ಹೆಲ್ಮೆಟ್ ಧರಿಸಬೇಕು ಎಂದು ಭಟ್ಕಳ ತಹಶೀಲ್ದಾರ್ ನಾಗೇಂದ್ರ ಕೊಲಶೆಟ್ಟಿ ಕರೆ ನೀಡಿದರು.
ಅವರು ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ಕಂಪ್ಯೂಟರ್ ಅಪ್ಲಿಕೇಶನ್ಸ್ (AIMCA) ನಲ್ಲಿ ಬುಧವಾರ ನಡೆದ ‘ಹೆಲ್ಮೆಟ್ ಸುರಕ್ಷತೆ ಮತ್ತು ಟ್ರಾಫಿಕ್ ಶಿಸ್ತಿನ’ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಕಾರ್ಯಕ್ರಮವನ್ನು ಮಜ್ಲಿಸ್-ಇ-ಇಸ್ಲಾಹ್ ವ ತಂಝೀಮ್, ಅಂಜುಮಾನ ಹಾಮಿ-ಇ-ಮುಸ್ಲೀಮೀನ್ ಹಾಗೂ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಯಿತು.
ತಹಶೀಲ್ದಾರ್ ಕೊಲಶೆಟ್ಟಿ ಅವರು, “ತಲೆಗೆ ಗಾಯವಾಗುವುದು ಜೀವಕ್ಕೆ ಅಪಾಯ ತಂದೊಡಬಹುದು. ISI ಗುರುತಿನ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಬಳಕೆಯು ಅಪಘಾತದ ತೀವ್ರತೆಯನ್ನು ತಗ್ಗಿಸುತ್ತದೆ,” ಎಂದು ತಿಳಿಸಿದರು.
ಭಟ್ಕಳ ಟೌನ್ ಪೊಲೀಸ್ ವೃತ್ತಾಧಿಕಾರಿ ದಿವಾಕರ್ ಎಂ., ಹಾಗೂ PSI ನವೀನ್, ಯುವಕರಿಗೆ ಟ್ರಾಫಿಕ್ ನಿಯಮ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಾಗೂ ಸುರಕ್ಷತಾ ಸಾಧನಗಳನ್ನು ಧರಿಸಲು ಸಲಹೆ ನೀಡಿದರು. ಪೋಷಕರು ಅಪ್ರಾಪ್ತ ಮಕ್ಕಳಿಗೆ ವಾಹನ ನೀಡದಂತೆ ಎಚ್ಚರಿಕೆ ನೀಡಲಾಯಿತು.
ಮಜ್ಲಿಸ್-ಇ-ಇಸ್ಲಾಹ್ ವ ತಂಝೀಮ್ ಅಧ್ಯಕ್ಷ ಇನಾಯತುಲ್ಲಾಹ್ ಶಾಬಂದ್ರಿ ಅಧ್ಯಕ್ಷತೆ ವಹಿಸಿದ್ದರು.
AIMCA ಪ್ರಾಂಶುಪಾಲ ಮೊಹಮ್ಮದ್ ಮೊಹ್ಸಿನ್ ಕೆ. ಸ್ವಾಗತಿಸಿದರು ಮತ್ತು ಅಂಜುಮಾನ ಪ್ರೊಫೆಷನಲ್ ಕಾಲೇಜಸ್ ಕಾರ್ಯದರ್ಶಿ ಅಹಿದ ಮೊಹತೆಶಂ ಧನ್ಯವಾದ ಸಲ್ಲಿಸಿದರು.
ವೇದಿಕೆಯಲ್ಲಿ ಸಯ್ಯದ್ ಇಮ್ರಾನ್ ಲಂಕಾ, ಅಝೀಜುರ್ ರಹ್ಮಾನ್, ಮುಬಷಿರ್ ಹಲ್ಲಾರೆ, ಅನ್ಸಾರ್ ದಾಮದಾ ಅಬು, ಸಾದುಲ್ಲಾಹ್ ರುಕ್ನುದ್ದೀನ್, ಮತ್ತು ಯಾಸೀನ್ ಅಸ್ಕೇರಿ ಇದ್ದರು.