ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯಿಂದ ಹಣ ವರ್ಗಾವಣೆ; ಮೂವರ ವಿರುದ್ಧ ಪ್ರಕರಣ ದಾಖಲು

ಜನಧನ ಯೋಜನೆ ಹೆಸರಿನಲ್ಲಿ 68.58 ಲಕ್ಷ ರೂ. ವಂಚನೆ

Update: 2026-07-23 21:50 IST

ಭಟ್ಕಳ: ಪ್ರಧಾನ ಮಂತ್ರಿ ಜನಧನ ಯೋಜನೆಯಡಿ ಕಡಿಮೆ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಿಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ 68.58 ಲಕ್ಷ ರೂ. ಪಡೆದು ವಂಚಿಸಿರುವ ಆರೋಪದಡಿ ಮೂವರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಹಳ್ಳಿಕೇರಿ–ಕೋಟಖಂಡ ಮಾರುಕೇರಿ ನಿವಾಸಿ ಹರೀಣಿ ಗಜಾನನ ಹೆಬ್ಬಾರ ಅವರು ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಜೆ.ಪಿ.ನಗರ ನಿವಾಸಿಗಳಾದ ನವೀನ್ ಕುಮಾರ, ಪ್ರಕಾಶ್ ಕುಮಾರ ಹಾಗೂ ಲಕ್ಷ್ಮೀ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನ ಪ್ರಕಾರ, 2024ರ ಫೆಬ್ರುವರಿ 19ರಂದು ಆರೋಪಿಗಳು ಮೊಬೈಲ್ ಕರೆ ಮಾಡಿ, ತಾವು ಪ್ರಧಾನ ಮಂತ್ರಿ ಜನಧನ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ವಾಟ್ಸ್‌ಆಪ್ ಮೂಲಕ ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಿ, ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಮೊತ್ತದ ಸಾಲ ಮಂಜೂರು ಮಾಡಿಕೊಡುವುದಾಗಿ ನಂಬಿಸಿದ್ದಾರೆ.

ಆರಂಭದಲ್ಲಿ ಪ್ರಕ್ರಿಯಾ ಶುಲ್ಕದ ಹೆಸರಿನಲ್ಲಿ 94,644 ಪಾವತಿಸುವಂತೆ ಸೂಚಿಸಿದ ಆರೋಪಿಗಳು, ನಂತರ ಜಿಎಸ್‌ಟಿ, ಭದ್ರತಾ ಠೇವಣಿ, ವಿಮೆ, ಎನ್‌ಒಸಿ, ದಾಖಲೆ ಪರಿಶೀಲನೆ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ಹಂತ ಹಂತವಾಗಿ ಹಣ ಪಾವತಿಸುವಂತೆ ಒತ್ತಾಯಿಸಿದ್ದಾರೆ.

ಆರೋಪಿಗಳ ಮಾತನ್ನು ನಂಬಿದ ಹರೀಣಿ ಅವರು 2024ರ ಫೆಬ್ರುವರಿ 20ರಿಂದ 2026ರ ಜನವರಿ 25ರವರೆಗೆ ವಿವಿಧ ಕಂತುಗಳಲ್ಲಿ ಕರ್ನಾಟಕ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಖಾತೆಗಳಿಗೆ ಒಟ್ಟು 68,58,754 ವರ್ಗಾವಣೆ ಮಾಡಿದ್ದಾರೆ. ಆದರೆ, ಇಷ್ಟೊಂದು ಹಣ ಪಡೆದಿದ್ದರೂ ಸಾಲ ಮಂಜೂರು ಮಾಡದೇ, ಪಾವತಿಸಿದ ಹಣವನ್ನೂ ಹಿಂತಿರುಗಿಸದೇ ಆರೋಪಿಗಳು ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ವಂಚನೆಗೊಳಗಾಗಿರುವುದು ಖಚಿತವಾದ ಬಳಿಕ ಹರೀಣಿ ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳು ಹಾಗೂ ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಅಪರಿಚಿತ ವ್ಯಕ್ತಿಗಳ ಕರೆ, ಸಾಮಾಜಿಕ ಜಾಲತಾಣಗಳ ಸಂದೇಶಗಳು ಅಥವಾ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ನೀಡುವ ಆಮಿಷಗಳನ್ನು ಸಾರ್ವಜನಿಕರು ನಂಬಬಾರದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News