ಭಟ್ಕಳ: ಎಸ್‌ಐಆರ್ ಪ್ರಕ್ರಿಯೆ ವಿಳಂಬ ಮಾಡದಂತೆ ಮತದಾರರಿಗೆ ತಂಝೀಮ್ ಮನವಿ
ಭಟ್ಕಳ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್)–2026ರ ಪ್ರಕ್ರಿಯೆಯನ್ನು ಅರ್ಹ ಮತದಾರರು ವಿಳಂಬ ಮಾಡದೆ ಶೀಘ್ರ ಪೂರ್ಣಗೊಳಿಸಿ, ಎನ್ಯುಮರೇಷನ್ ಫಾರ್ಮ್‌ಗಳನ್ನು ಆದಷ್ಟು ಬೇಗ ಸಲ್ಲಿಸಬೇಕು ಎಂದು ಮಜ್ಲಿಸ್-ಎ-ಇಸ್ಲಾಹ್ ವ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮನವಿ ಮಾಡಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಸ್ಪಷ್ಟೀಕರಣದಂತೆ ಎನ್ಯುಮರೇಷನ್ ಫಾರ್ಮ್ ಸಲ್ಲಿಸುವ ಸಂದರ್ಭದಲ್ಲಿ 2002ರ ಸ್ವಂತ ಅಥವಾ ಪೋಷಕರ ವಿವರಗಳನ್ನು ಭರ್ತಿ ಮಾಡುವುದು ಕಡ್ಡಾಯವಲ್ಲ. ಹೀಗಾಗಿ ಆ ಮಾಹಿತಿ ಇಲ್ಲ ಎಂಬ ಕಾರಣಕ್ಕೆ ಫಾರ್ಮ್ ಸಲ್ಲಿಕೆಯನ್ನು ಮುಂದೂಡಬಾರದು ಎಂದು ತಿಳಿಸಿದರು.
ಇನ್ನೂ ಎನ್ಯುಮರೇಷನ್ ಫಾರ್ಮ್ ಪಡೆಯದ ಮತದಾರರು ತಮ್ಮ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಅವರನ್ನು ಸಂಪರ್ಕಿಸಿ ಫಾರ್ಮ್ ಪಡೆಯಬೇಕು. ಈಗಾಗಲೇ ಫಾರ್ಮ್ ಪಡೆದಿರುವವರು ಅದನ್ನು ಸರಿಯಾಗಿ ಭರ್ತಿ ಮಾಡಿ ಬಿಎಲ್‌ಒ ಅಥವಾ ಬೂತ್ ಮಟ್ಟದ ಏಜೆಂಟ್ (ಬಿಎಲ್‌ಎ) ಅವರಿಗೆ ಶೀಘ್ರ ಸಲ್ಲಿಸಬೇಕು ಎಂದು ಅವರು ಕೋರಿದರು.
ತಂಝೀಮ್ ಎಸ್‌ಐಆರ್ ಸಮಿತಿ ಅಧ್ಯಕ್ಷ ಮುಬಶ್ಶಿರ್ ಹಳ್ಳಾರೆ ಮಾತನಾಡಿ, ಬಂದರ್ ರಸ್ತೆಯಲ್ಲಿರುವ ತಂಝೀಮ್ ಎಸ್‌ಐಆರ್ ಸಹಾಯ ಕೇಂದ್ರ ಕಳೆದ ಒಂದು ತಿಂಗಳಿನಿಂದ ಸಾರ್ವಜನಿಕರಿಗೆ ಉಚಿತ ಸೇವೆ ನೀಡುತ್ತಿದ್ದು, ಜುಲೈ 26ರಿಂದ ಹೊಸ ಮತದಾರರ ನೋಂದಣಿಗೆ ಸಂಬಂಧಿಸಿದ ಫಾರ್ಮ್–6 ಸೇವೆಯನ್ನೂ ಆರಂಭಿಸಲಾಗುವುದು ಎಂದು ತಿಳಿಸಿದರು.
ಸಹಾಯ ಕೇಂದ್ರದಲ್ಲಿ ಎಸ್‌ಐಆರ್ ಎನ್ಯುಮರೇಷನ್ ಫಾರ್ಮ್ ಭರ್ತಿ, ಫಾರ್ಮ್–6 ನೋಂದಣಿ, ಅಗತ್ಯ ದಾಖಲೆ ಗಳ ಕುರಿತು ಮಾರ್ಗದರ್ಶನ ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಕೆ ಸೇರಿದಂತೆ ವಿವಿಧ ಸೇವೆಗಳು ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಅವರು ಮನವಿ ಮಾಡಿದರು.
'ಲಾಠಿಚಾರ್ಜ್' ಖಂಡನೆ
ನವದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಶಾಂತಿಯುತ ಪ್ರತಿಭಟನಾಕಾರರ ಮೇಲೆ ನಡೆದಿರುವುದಾಗಿ ಆರೋಪಿಸಲಾದ ಲಾಠಿಚಾರ್ಜ್ ಅನ್ನು ತಂಝೀಮ್ ಪ್ರಧಾನ ಕಾರ್ಯದರ್ಶಿ ಅಜೀಜುರ್ ರಹ್ಮಾನ್ ರುಕ್ನುದ್ದೀನ್ ಖಂಡಿಸಿದರು.
ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಹಕ್ಕಾಗಿದ್ದು, ಅದನ್ನು ಗೌರವಿಸಬೇಕು. ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅವರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಂಝೀಮ್ ಉಪಾಧ್ಯಕ್ಷ ಕಮರ್ ಸದಾ ಉಪಸ್ಥಿತರಿದ್ದರು.