ಮಂಕಾಳ ವೈದ್ಯರಿಗೆ ಸೂಕ್ತ ಸ್ಥಾನ ನೀಡದಿದ್ದರೆ ‘ತಕ್ಕ ಉತ್ತರ’: ಮೀನುಗಾರರ ಎಚ್ಚರಿಕೆ
ಭಟ್ಕಳ: ಮಾಜಿ ಸಚಿವ ಹಾಗೂ ಭಟ್ಕಳ ಶಾಸಕ ಮಂಕಾಳ ಎಸ್. ವೈದ್ಯ ಅವರಿಗೆ ರಾಜ್ಯ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡದಿದ್ದರೆ ಮೀನುಗಾರ ಸಮುದಾಯದಿಂದ ‘ತಕ್ಕ ಉತ್ತರ’ ನೀಡಬೇಕಾಗುತ್ತದೆ ಎಂದು ವಿವಿಧ ಮೀನುಗಾರರ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಭಟ್ಕಳದಲ್ಲಿ ಪರ್ಸ್‌ಸೀನ್ ದೋಣಿ ಮಾಲೀಕರ ಸಂಘ, ನಾಡದೋಣಿ ಮೀನುಗಾರರ ಸಂಘ, ಭಟ್ಕಳ ತಾಲ್ಲೂಕು ಮೊಗೇರ ಸಮಾಜ ಸೇರಿದಂತೆ ವಿವಿಧ ಮೀನುಗಾರರ ಸಂಘಟನೆಗಳ ವತಿಯಿಂದ ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮುಖಂಡರು ಈ ಎಚ್ಚರಿಕೆ ನೀಡಿದರು.
ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ ಮಾತನಾಡಿ, ‘ಮಂಕಾಳ ವೈದ್ಯರು ಸಚಿವರಾಗಿದ್ದ ಅವಧಿಯಲ್ಲಿ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸಿ ಹಲವು ಕ್ರಮಗಳನ್ನು ಕೈಗೊಂಡಿದ್ದರು. ಸಾಂಪ್ರದಾಯಿಕ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ದೊರೆಯುವಂತೆ ಮಾಡಿದ್ದರು’ ಎಂದು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಗಳಿಗೆ ಬಾಕಿ ಉಳಿದಿದ್ದ ಪರಿಹಾರ ವನ್ನು ಬಿಡುಗಡೆ ಮಾಡಿಸುವಲ್ಲಿ ವೈದ್ಯರು ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಪರಿಹಾರದ ಮೊತ್ತವನ್ನು 10 ಲಕ್ಷಕ್ಕೆ ಹೆಚ್ಚಿಸುವ ಕ್ರಮವೂ ಅವರ ಅವಧಿಯಲ್ಲಿ ನಡೆದಿತ್ತು ಎಂದು ಅವರು ತಿಳಿಸಿದರು.
ಹಲವು ಮೀನುಗಾರಿಕಾ ಬಂದರುಗಳಲ್ಲಿ ಹೂಳೆತ್ತುವ ಕಾಮಗಾರಿ ನಡೆಸಲು ವೈದ್ಯರು ಕ್ರಮ ಕೈಗೊಂಡಿದ್ದು, ಇದ ರಿಂದ ಮೀನುಗಾರರಿಗೆ ಅನುಕೂಲವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಿದ ಶಾಸಕರಿಗೆ ಸಚಿವ ಸ್ಥಾನ ನೀಡದಿ ರುವುದು ಸರಿಯಲ್ಲ. ಇದಕ್ಕೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಬೆಲೆ ತೆರಬೇಕಾಗುತ್ತದೆ ಎಂದು ಅಣ್ಣಪ್ಪ ಮೊಗೇರ ಹೇಳಿದರು.
ಮೀನುಗಾರರ ಮುಖಂಡ ವಿಠ್ಠಲ ದೈಮನೆ ಮಾತನಾಡಿ, ‘ಮಂಕಾಳ ವೈದ್ಯರು ಮೀನುಗಾರಿಕೆ ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತಂದು, ಮೀನುಗಾರ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ’ ಎಂದರು.
‘ಹಿಂದುಳಿದ ವರ್ಗದವರನ್ನು ಕಡೆಗಣಿಸಿ ಮೇಲ್ವರ್ಗದ ಕುಟುಂಬಕ್ಕೆ ಸೇರಿದ ವ್ಯಕ್ತಿಗೆ ಸಚಿವ ಸ್ಥಾನ ನೀಡಿರುವ ಮೂಲಕ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ ಅವಮಾನ ಮಾಡಿದೆ’ ಎಂದು ಅವರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರತ್ನಾಕರ ಖಾರ್ವಿ, ವೆಂಕಟರಮಣ ಸನ್ನಿಮನೆ, ಭಾಸ್ಕರ ಮೊಗೇರ, ಶಂಕರ ಹೆಬ್ಬಾರ್, ರಾಜೇಂದ್ರ ಖಾರ್ವಿ, ಗೋಪಾಲ ಮೊಗೇರ, ಪರಮೇಶ್ವರ ಮೊಗೇರ ಸೇರಿದಂತೆ ಹಲವು ಮೀನುಗಾರರ ಮುಖಂಡರು ಉಪಸ್ಥಿತರಿದ್ದರು.