×
Ad

ಭಟ್ಕಳ: ಜೂಜಾಟದ ಅಡ್ಡೆಗೆ ಪೊಲೀಸ್ ದಾಳಿ; ಒಬ್ಬನ ಬಂಧನ, ಏಳು ಮಂದಿ ಪರಾರಿ‌

Update: 2025-10-23 14:56 IST

ಭಟ್ಕಳ: ಭಟ್ಕಳದ ಜಾಲಿ ತೆಲಗೇರಿ ಕ್ರಿಕೆಟ್ ಮೈದಾನ ಪಕ್ಕದ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಅಂದರ್–ಬಾಹರ್ ಜೂಜಾಟ ನಡೆಯುತ್ತಿದ್ದ ಸ್ಥಳಕ್ಕೆ ಭಟ್ಕಳ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ ಒಬ್ಬನನ್ನು ಬಂಧಿಸಿದ್ದಾರೆ. ಇನ್ನೂ ಏಳು ಮಂದಿ ಪರಾರಿಯಾಗಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಅ.19ರಂದು ಸಂಜೆ ವೇಳೆ ಮೈದಾನದ ಪಕ್ಕದಲ್ಲಿ ಮೊಂಬತ್ತಿಯ ಬೆಳಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉಪನಿರೀಕ್ಷಕ ನವೀನ್ ನಾಯ್ಕ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು. ಅಲ್ಲಿ ರದ್ದಿ ಕಾಗದ ಹಾಸಿಕೊಂಡು ಕೆಲವರು ಹಣ ಮತ್ತು ಇಸ್ಪಿಟ್ ಎಲೆಗಳ ಸಹಾಯದಿಂದ ಜೂಜಾಟದಲ್ಲಿ ತೊಡಗಿಕೊಂಡಿರುವುದು ಗಮನಕ್ಕೆ ಬಂತು.

ಪೊಲೀಸರು ಅಚಾನಕ್ ದಾಳಿ ನಡೆಸಿದಾಗ, ತೆಲಗೇರಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುವ ಮಾದೇವ ಗೊಂಡ, ಹನುಮಾನ್ ನಗರದ ಶಂಕರ ನಾಯ್ಕ ಸೇರಿದಂತೆ ಏಳು ಮಂದಿ ಪರಾರಿಯಾದರೆ, ಶೇಡಕುಳಿಯ ಮೀನುಗಾರ ನಾರಾಯಣ ಗೊಂಡ ಸ್ಥಳದಲ್ಲೇ ಸಿಕ್ಕಿಬಿದ್ದರು. “ಇದು ಹಬ್ಬದ ಆಟ” ಎಂಬ ಅವರ ವಿವರಣೆ ಪೊಲೀಸರ ಮನವೊಲಿಸಲಿಲ್ಲ‌ ಎಂದು ತಿಳಿದು ಬಂದಿದೆ.

ಅಂದರ್–ಬಾಹರ್ ಆಟದಲ್ಲಿ ಬಳಸಲಾಗಿದ್ದ ಇಸ್ಪಿಟ್ ಎಲೆಗಳು, ಮೇಣದ ಬತ್ತಿಗಳು ಮತ್ತು 1,700 ರೂ. ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಪರಾರಿಯಾದವರ ಮತ್ತು ಗುರುತು ಪತ್ತೆಯಾಗದ ಮೂವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News