ಆ.18ರಂದು ಭಟ್ಕಳದಲ್ಲಿ ರಕ್ತದಾನ ಶಿಬಿರ
ಭಟ್ಕಳ: ಜೆಸಿಐ ಭಟ್ಕಳ ಸಿಟಿ ಹಾಗೂ ಜೆಸಿಐ ಅಲುಮ್ನಿ ಕ್ಲಬ್, ಲೈಫ್‌ಕೇರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಅಗಲಿದ ವೈದ್ಯ ಡಾ. ಸುರೇಶ ನಾಯಕ್ ಅವರ ಸ್ಮರಣಾರ್ಥ ಆಗಸ್ಟ್ 18ರಂದು ರಕ್ತದಾನ ಶಿಬಿರ ಆಯೋಜಿಸ ಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ಲೈಫ್‌ಕೇರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜೆಸಿಐ ಸೆನೆಟರ್ ಹಾಗೂ ಪಿಡಿಎಂ, ಝೋನ್ ಚೇರ್‌ಮನ್ ಅಬ್ದುಲ್ ಜಬ್ಬಾರ್, ಲೈಫ್‌ಕೇರ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಸಲ್ಮಾನ್ ಅಹ್ಮದ್ ಜುಬಾಪು, ಡಾ. ನೌಶಾದ್ ಹಾಗೂ ವೈದ್ಯಕೀಯ ನಿರ್ದೇಶಕ ಡಾ. ನವಾಬ್ ಅವರು, ರಕ್ತದಾನದ ಮಹತ್ವವನ್ನು ವಿವರಿಸಿದರು.
ಆಗಸ್ಟ್ 18ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಜಾಲಿ ರಸ್ತೆಯಲ್ಲಿರುವ ಲೈಫ್‌ಕೇರ್ ಸ್ಪೆಷಾಲಿಟಿ ಆಸ್ಪತ್ರೆ ಯಲ್ಲಿ ಶಿಬಿರ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಯಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ರಕ್ತವು ಮಾನವನ ದೇಹದಲ್ಲಿರುವ ಅತ್ಯಂತ ಅಮೂಲ್ಯವಾದ ಜೀವದ್ರವ್ಯವಾಗಿದ್ದು, ಅಪಘಾತಗಳು, ಶಸ್ತ್ರಚಿಕಿತ್ಸೆ, ಹೆರಿಗೆ ಸಂದರ್ಭಗಳು, ರಕ್ತಹೀನತೆ, ಕ್ಯಾನ್ಸರ್ ಹಾಗೂ ವಿವಿಧ ತುರ್ತು ಚಿಕಿತ್ಸಾ ಸಂದರ್ಭಗಳಲ್ಲಿ ಅನೇಕ ರೋಗಿ ಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ರಕ್ತ ದೊರೆಯುವುದು ಹಲವು ಜೀವಗಳನ್ನು ಉಳಿಸಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ರಕ್ತದಾನ ಮಾಡುವುದರಿಂದ ಅಗತ್ಯವಿರುವ ರೋಗಿಗಳಿಗೆ ನೆರವಾಗುವುದರ ಜತೆಗೆ, ದಾನಿಯ ಆರೋಗ್ಯದ ಮೇಲೂ ಕೆಲವು ಸಕಾರಾತ್ಮಕ ಪರಿಣಾಮಗಳಿವೆ. ಆರೋಗ್ಯವಂತ ವ್ಯಕ್ತಿಗಳು ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಬಹುದು ಎಂದು ವೈದ್ಯರು ಮಾಹಿತಿ ನೀಡಿದರು.
‘ರಕ್ತದಾನ ಮಾಡಿ, ಜೀವ ಉಳಿಸಿ’ ಎಂಬ ಸಂದೇಶದೊಂದಿಗೆ ಆಯೋಜಿಸಿರುವ ಈ ಶಿಬಿರವು ಅಗಲಿದ ಡಾ. ಸುರೇಶ ನಾಯಕ್ ಅವರ ಸೇವಾ ಮನೋಭಾವಕ್ಕೆ ಸಲ್ಲಿಸುವ ಗೌರವವೂ ಆಗಿದೆ ಎಂದು ಸಂಘಟಕರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಸಿಐ ಭಟ್ಕಳ ಸಿಟಿ ಅಧ್ಯಕ್ಷ ಮುಹಮ್ಮದ್ ಅಝೀಮ್, ಜುಷದಿ ಹಾಗೂ ಜೆಸಿಐನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.