ಭಟ್ಕಳ| ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಖಾಲಿದ್ ಸೈಫುಲ್ಲಾ ರಹಮಾನಿ ಭೇಟಿ

Update: 2026-08-11 20:40 IST

ಭಟ್ಕಳ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಅಧ್ಯಕ್ಷ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಹಾಗೂ ಪ್ರಧಾನ ಕಾರ್ಯದರ್ಶಿ ಮೌಲಾನಾ ಫಜ್ಲುರ್ ರಹೀಮ್ ಮುಜದ್ದಿದಿ ಅವರು ಭಟ್ಕಳಕ್ಕೆ ಭೇಟಿ ನೀಡಿ, ಸಮುದಾಯದ ಪ್ರಮುಖರು ಹಾಗೂ ಕೊಲ್ಲಿ ರಾಷ್ಟ್ರಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜಮಾಅತ್‌ಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಫಜ್ಲುರ್ ರಹೀಮ್ ಮುಜದ್ದಿದಿ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪ್ರಮುಖ ಉದ್ದೇಶಗಳಾದ ಶರಿಯತ್ ರಕ್ಷಣೆ, ಶರಿಯತ್ ಬಗ್ಗೆ ಅರಿವು ಮೂಡಿಸುವುದು ಮತ್ತು ಶರಿಯತ್‌ನ್ನು ಜೀವನದಲ್ಲಿ ಅನುಷ್ಠಾನಗೊಳಿಸುವ ಕುರಿತು ವಿವರಿಸಿದರು.

ಮುಸ್ಲಿಮರಲ್ಲಿ, ಅದರಲ್ಲೂ ಯುವಕರು ಮತ್ತು ಮಹಿಳೆಯರಲ್ಲಿ ಶರಿಯತ್‌ನ ಬೋಧನೆಗಳು ಹಾಗೂ ತತ್ವಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಶರಿಯತ್‌ನ ಕುರಿತು ಸಮಾಜದಲ್ಲಿಯೂ ಸರಿಯಾದ ತಿಳುವಳಿಕೆ ಮೂಡಿಸಬೇಕು ಎಂದರು.

ಶರಿಯತ್‌ನ್ನು ರಕ್ಷಿಸುವುದು ಮತ್ತು ಅದರ ಬಗ್ಗೆ ಜನರಿಗೆ ತಿಳಿಸುವುದರ ಜತೆಗೆ, ಮುಸ್ಲಿಮರು ತಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಅದರ ಬೋಧನೆಗಳನ್ನು ಪಾಲಿಸುವಂತೆ ಪ್ರೋತ್ಸಾಹಿಸುವ ಕೆಲಸವೂ ನಡೆಯಬೇಕು ಎಂದು ಅವರು ಹೇಳಿದರು.

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಡೆಸುತ್ತಿರುವ ವಿವಿಧ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳ ಕುರಿತು ಅವರು ಮಾಹಿತಿ ನೀಡಿದರು. ಮಂಡಳಿಯ ಉದ್ದೇಶಗಳನ್ನು ಮುಂದುವರಿಸುವಲ್ಲಿ ಸಮುದಾಯದ ಸಂಘಟನೆಗಳು ಮತ್ತು ಜಮಾಅತ್‌ಗಳ ಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

AIMPLBಯ ಭಟ್ಕಳದ ಸದಸ್ಯರಾದ ಮೌಲಾನಾ ಮುಹಮ್ಮದ್ ಇಲ್ಯಾಸ್ ನದ್ವಿ, ಮೌಲಾನ ಅಬ್ದುಲ್ ಅಲೀಂ ಖಾಸ್ಮಿ, ಮೌಲಾನಾ ಮಕ್ಬೂಲ್ ಕೊಬಟ್ಟೆ ನದ್ವಿ ಹಾಗೂ ರಾಬಿತಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ಅತೀಕುರ್ ರಹ್ಮಾನ್ ಮುನೀರಿ, ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರ.ಕಾ. ಮೌಲಾನ ಅಝೀಝುರ್‍ರಹ್ಮಾನ್ ರುಕ್ನುದ್ದೀನ್ ನದ್ವಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News