ಮುರುಡೇಶ್ವರ| ಚಾಕುವಿನಿಂದ ದಾಳಿ ಪ್ರಕರಣ: ಐವರು ಆರೋಪಿಗಳ ಬಂಧನ

Update: 2026-08-13 19:22 IST

ಭಟ್ಕಳ: ಮುರುಡೇಶ್ವರದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ಮೂವರ ಮೇಲೆ ನಡೆದ ಚಾಕು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮುರುಡೇಶ್ವರ ನಿವಾಸಿಗಳಾದ ರಾಜು ಮಾಧವ ನಾಯ್ಕ್ ಅಲಿಯಾಸ್ ಕಡ್ಡಿ ರಾಜು, ಹೃತಿಕ್ ಮಾಧವ ನಾಯ್ಕ್, ಮದನ್ ನಾಯ್ಕ್, ಯೋಗೇಶ್ ನಾಯ್ಕ್ ಮತ್ತು ದರ್ಶನ್ ನಾಯ್ಕ್ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಳಿಕ ಅವರನ್ನು ಕಾರವಾರ ಜೈಲಿಗೆ ಕಳುಹಿಸಲಾಗಿದೆ.

ಆಗಸ್ಟ್ 8 ಮತ್ತು 9ರ ಮಧ್ಯರಾತ್ರಿ ಮುರುಡೇಶ್ವರ ನಾಕಾ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಕೆಲವರು ಮನೋಜ್ ನಾಯ್ಕ್ ಎಂಬುವವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದರು.

ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ವಿನಾಯಕ ಶೆಟ್ಟಿ ಮತ್ತು ಸಂಗಪ್ಪ ಹರಿಜನ ಅವರಿಗೆ ಗಲಾಟೆ ಕುರಿತು ಮಾಹಿತಿ ಲಭ್ಯವಾಗಿದ್ದು, ಸ್ಥಳಕ್ಕೆ ತೆರಳಿ ಮನೋಜ್ ನಾಯ್ಕ್ ಅವರನ್ನು ರಕ್ಷಿಸಲು ಮಧ್ಯಪ್ರವೇಶಿಸಿದ್ದರು. ಈ ವೇಳೆ ಆರೋಪಿಗಳು ಇಬ್ಬರು ಪೊಲೀಸ್ ಸಿಬ್ಬಂದಿಯ ಮೇಲೂ ಚಾಕುವಿನಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಮನೋಜ್ ನಾಯ್ಕ್ ಸೇರಿದಂತೆ ಮೂವರು ಗಾಯಗೊಂಡಿದ್ದರು.

ಗಾಯಗೊಂಡ ಪೊಲೀಸ್ ಸಿಬ್ಬಂದಿಗೆ ಮುರುಡೇಶ್ವರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪೂರ್ಣಗೊಂಡ ಬಳಿಕ ಇಬ್ಬರೂ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮುರುಡೇಶ್ವರ ಪೊಲೀಸರು ರಾಜು ನಾಯ್ಕ್ ಅಲಿಯಾಸ್ ಕಡ್ಡಿ ರಾಜು, ಹೃತಿಕ್ ನಾಯ್ಕ್, ಮದನ್ ನಾಯ್ಕ್, ಯೋಗೇಶ್ ನಾಯ್ಕ್, ದರ್ಶನ್ ನಾಯ್ಕ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆರೋಪಿಗಳ ಬಂಧನಕ್ಕೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಘಟನೆಯ ಮರುದಿನ ರವಿವಾರ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಬಳಿಕ ಮಂಗಳವಾರ ನಾಲ್ಕನೇ ಆರೋಪಿಯನ್ನು ಹಾಗೂ ಬುಧವಾರ ಐದನೇ ಹಾಗೂ ಕೊನೆಯ ಆರೋಪಿಯನ್ನು ಬಂಧಿಸುವ ಮೂಲಕ ಪ್ರಕರಣದ ಎಲ್ಲ ಐವರು ಆರೋಪಿಗಳನ್ನು ಬಂಧಿಸಿದಂತಾಗಿದೆ.

ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಹಾಗೂ ಕೊಲೆಗೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುರುಡೇಶ್ವರ ಠಾಣೆಯ ಪಿಎಸ್‌ಐ ಲೋಕನಾಥ ರಾಥೋಡ್ ಮತ್ತು ಪಿಎಸ್‌ಐ ಹನುಮಂತ ಬಿರಾದಾರ್ ತನಿಖೆ ನಡೆಸುತ್ತಿದ್ದು, ಭಟ್ಕಳ ಡಿವೈಎಸ್‌ಪಿ ಗಿರೀಶ್ ಹಾಗೂ ಮುರುಡೇಶ್ವರ ವೃತ್ತ ನಿರೀಕ್ಷಕ ಜಗದೀಶ್ ಹಂಚಿನಾಳ ಅವರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News