ವೈದ್ಯಕೀಯ, ಶಿಕ್ಷಣ ಕ್ಷೇತ್ರಕ್ಕೆ ಡಾ. ಸುರೇಶ ನಾಯಕ್ ಕೊಡುಗೆ ಸ್ಮರಣೀಯ: ಎಂ.ಆರ್. ನಾಯ್ಕ್
ಭಟ್ಕಳ: ಡಾ. ಸುರೇಶ ವಿ. ನಾಯಕ್ ಅವರು ವೈದ್ಯಕೀಯ ಮತ್ತು ಶಿಕ್ಷಣ ಎಂಬ ಎರಡು ಮಹತ್ವದ ಕ್ಷೇತ್ರಗಳ ಮೂಲಕ ಸಮಾಜ ಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿದ್ದರು ಎಂದು ವಿಜಯ ಬ್ಯಾಂಕ್‌ನ ನಿವೃತ್ತ ಮುಖ್ಯ ವ್ಯವಸ್ಥಾಪಕ ಹಾಗೂ ಭಟ್ಕಳ ನಾಮಧಾರಿ ಸಂಘದ ಮಾಜಿ ಅಧ್ಯಕ್ಷ ಎಂ.ಆರ್. ನಾಯ್ಕ್ ಹೇಳಿದರು.
ಭಟ್ಕಳ ಎಜುಕೇಶನ್ ಟ್ರಸ್ಟ್ ವತಿಯಿಂದ ಶ್ರೀ ಗುರು ಸುಧೀಂದ್ರ ಕಾಲೇಜಿನ ಆವರಣದಲ್ಲಿ ದಿವಂಗತ ಡಾ. ಸುರೇಶ ವಿ. ನಾಯಕ್ ಅವರ ಸ್ಮರಣಾರ್ಥ ಶುಕ್ರವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಶಿಕ್ಷಣವೆಂದರೆ ಕೇವಲ ಜ್ಞಾನ ಸಂಪಾದನೆಯಲ್ಲ. ಅದು ಜವಾಬ್ದಾರಿಯುತ, ಕರುಣಾಮಯ ಹಾಗೂ ಪ್ರಬುದ್ಧ ವ್ಯಕ್ತಿತ್ವ ಗಳನ್ನು ರೂಪಿಸುವ ಶಕ್ತಿಯುತ ಸಾಧನ ಎಂಬುದನ್ನು ಡಾ. ಸುರೇಶ ನಾಯಕ್ ನಂಬಿದ್ದರು. ತಮ್ಮ ಬೋಧನೆ, ಮಾರ್ಗದರ್ಶನ ಹಾಗೂ ನಾಯಕತ್ವದ ಮೂಲಕ ಅವರು ಹಲವು ತಲೆಮಾರುಗಳ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾ ಗಿದ್ದರು. ವಿದ್ಯಾರ್ಥಿಗಳಲ್ಲಿ ದೇವರನ್ನು ಕಾಣಬೇಕು ಎಂದು ಅವರು ಸದಾ ಬೋಧಿಸುತ್ತಿದ್ದರು ಎಂದು ಅವರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆ ಹಾಗೂ ಲೈಫ್‌ಕೇರ್ ನ ಅಧ್ಯಕ್ಷ ಮುಹಮ್ಮದ್ ಯೂನಸ್ ಖಾಝಿಯಾ, ತಂಜೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಸಮಾಜ ಸೇವಕ ಹಬೀಬುಲ್ಲಾ ಮೊಹ್ತೆಶಮ್, ಲಯನ್ಸ್ ಕ್ಲಬ್ ಪ್ರತಿನಿಧಿ ಎಂ.ವಿ. ಹೆಗಡೆ, ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಶಂಭು ಹೆಗಡೆ, ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸುರೇಂದ್ರ ಶಾನುಭಾಗ್, ಉಪಾಧ್ಯಕ್ಷ ರವೀಂದ್ರ ಜಿ. ಕೊಲ್ಲೆ, ವ್ಯವಸ್ಥಾಪಕ ಟ್ರಸ್ಟಿ ರಾಜೇಶ್ ಬಿ. ನಾಯಕ್ ಹಾಗೂ ಟ್ರಸ್ಟಿ ಮ್ಯಾನೇಜರ್ ನಾಗೇಶ್ ಎಂ. ಭಟ್ ಅವರು ದಿವಂಗತ ಡಾ. ಸುರೇಶ ವಿ. ನಾಯಕ್ ಅವರ ಸಮಾಜ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಕೊಡುಗೆಗಳನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ. ಸುರೇಶ ವಿ. ನಾಯಕ್ ಅವರ ಜೀವನ ಪಯಣ, ಸಾಧನೆ ಹಾಗೂ ಸಮಾಜ ಸೇವೆಯನ್ನು ಪರಿಚಯಿಸುವ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳು, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಬೋಧಕ–ಬೋಧಕೇತರ ಸಿಬ್ಬಂದಿ, ಜಿಲ್ಲೆಯ ವೈದ್ಯರು, ಸಮಾಜ ಸೇವಕರು ಹಾಗೂ ಡಾ. ಸುರೇಶ ವಿ. ನಾಯಕ್ ಅವರ ಅಭಿಮಾನಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ದೇವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು.