ಮುರುಡೇಶ್ವರ: ಸಮುದ್ರದ ಅಲೆಗೆ ಸಿಲುಕಿ 8 ವರ್ಷದ ಬಾಲಕ ಮೃತ್ಯು
ಸಾಂದರ್ಭಿಕ ಚಿತ್ರ PC: nativeplanet.com
ಭಟ್ಕಳ: ಸಮುದ್ರದ ಭಾರೀ ಅಲೆಗಳ ಅಬ್ಬರಕ್ಕೆ ಎಂಟು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರ ಬೀಚ್‌ನಲ್ಲಿ ಸೋಮವಾರ ನಡೆದಿದೆ.
ಬೆಂಗಳೂರಿನ ಬಿದರಹಳ್ಳಿಯ ನಿವಾಸಿ ಕೆ. ರವಿ ರೆಡ್ಡಿ ಅವರ ಕಿರಿಯ ಮಗ ಕೃತಿಕ್ (8) ಮೃತಪಟ್ಟ ಬಾಲಕ. ರವಿ ರೆಡ್ಡಿ ಅವರು ತಮ್ಮ ಕುಟುಂಬ ಸಮೇತ ರವಿವಾರ ರಾತ್ರಿ ಮುರುಡೇಶ್ವರಕ್ಕೆ ಆಗಮಿಸಿ ತಂಗಿದ್ದರು. ಸೋಮವಾರ ಬೆಳಿಗ್ಗೆ ದೇವಸ್ಥಾನದ ಎಡಬದಿಯ ಕಡಲ ತೀರದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಅನಿರೀಕ್ಷಿತವಾಗಿ ದೊಡ್ಡ ಅಲೆಯೊಂದು ಅಪ್ಪಳಿಸಿದೆ ಎಂದು ತಿಳಿದು ಬಂದಿದೆ.
ಅಲೆಯ ಸೆಳೆತಕ್ಕೆ ಇಬ್ಬರು ಸಮುದ್ರಕ್ಕೆ ಕೊಚ್ಚಿಹೋಗಿದ್ದರು. ಅಲೆಯಲ್ಲಿ ಸಿಲುಕಿ ಅಸ್ವಸ್ಥಗೊಂಡ ವಸಂತಾ ಕೆ. (27) ಅವರು ಆರ್.ಎನ್.ಎಸ್. ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಕೃತಿಕ್ ಅವರು ಮುಳುಗಿ ಸಾವನ್ನಪ್ಪಿದ್ದಾರೆ.
ಘಟನೆಯ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸಮುದ್ರ ತೀರದಲ್ಲಿ ಆಟವಾಡುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.