×
Ad

ಭಟ್ಕಳ: ಪ್ರವಾಸಿಗರ ಮೇಲೆ ಹಲ್ಲೆ; ದಂಪತಿಗೆ ಗಾಯ, ಪ್ರಕರಣ ದಾಖಲು

Update: 2025-10-07 12:18 IST

ಭಟ್ಕಳ: ಪಿಕ್ನಿಕ್ ತೆರಳಿದ್ದ ಭಟ್ಕಳದ ಕುಟುಂಬವೊಂದರ ಸದಸ್ಯರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಸೋಮವಾರ ಸಂಜೆ ಕುಂಟುವಾಣಿ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಈ ಘಟನೆಯಲ್ಲಿ ದಂಪತಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಘಟನೆ ವಿವಿರ:

ಭಟ್ಕಳದ ಫಾರೂಖಿ ಸ್ಟ್ರೀಟ್ ನಿವಾಸಿ ಫುಜೈಲ್ ಅರ್ಮಾರ್ ಅವರು ಸುಮಾರು 25 ಮಂದಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸೋಮವಾರ ಬೆಳಿಗ್ಗೆ ಹಾಡವಳ್ಳಿ ಪಂಚಾಯತ್ ವ್ಯಾಪ್ತಿಯ ಆಗಾ ಗ್ರಾಮಕ್ಕೆ ಪಿಕ್ನಿಕ್‌ಗೆ ತೆರಳಿದ್ದರು. ಸಂಜೆ 5.30ರ ಸುಮಾರಿಗೆ ಹಿಂದಿರುಗುವಾಗ, ಕುಂಟುವಾಣಿಯಲ್ಲಿ ಚಹಾ ಮತ್ತು ಉಪಹಾರಕ್ಕಾಗಿ ವಾಹನ ನಿಲ್ಲಿಸಿದ್ದರು. ಕೆಲವು ಸಮಯದ ನಂತರ ಇತರ ವಾಹನಗಳು ಭಟ್ಕಳದತ್ತ ತೆರಳಿದರೂ, ಫುಜೈಲ್ ಅವರ ಕಾರಿನಲ್ಲಿ ಬಂದಿದ್ದವರು ಮತ್ತು ಬೈಕ್‌ನಲ್ಲಿ ಬಂದಿದ್ದ ಸ್ನೇಹಿತ ಜಿಯಾ ಮತ್ತು ಅವರ ಪತ್ನಿ ಅಲ್ಲಿ ಉಳಿದಿದ್ದರು.

ಕೆಲ ಹೊತ್ತಿನ ಬಳಿಕ ಫುಜೈಲ್ ಅವರು ಕಾರು ಸ್ಟಾರ್ಟ್ ಮಾಡಲು ಸಿದ್ಧವಾಗುತ್ತಿದ್ದಂತೆಯೇ, ಒಬ್ಬ ಯುವಕ ಅವರೊಂದಿಗೆ ವಾಗ್ವಾದ ಪ್ರಾರಂಭಿಸಿ, “ನೀವು ಸಾಫ್ಟ್ ಡ್ರಿಂಕ್ ಬಾಟಲಿಗಳನ್ನು ರಸ್ತೆಯ ಬದಿಯಲ್ಲಿರುವ ಬ್ಯಾನರ್ ಕೆಳಗೆ ಎಸೆದಿದ್ದೀರಿ” ಎಂದು ಆರೋಪಿಸಿದ. ಫುಜೈಲ್ ಅವರು “ಅವು ನಮ್ಮವರು ಹಾಕಿಲ್ಲ” ಎಂದು ಸ್ಪಷ್ಟಪಡಿಸಿದರೂ, ವಿಷಯ ಮುಗಿಸಲು ತಾವೇ ಬಾಟಲಿಗಳನ್ನು ತೆಗೆದು ಹಾಕಿದರು. ಆದರೂ ಆ ಯುವಕ ನಿಂದನೆ ಮಾಡತೊಡಗಿದನು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಯತ್ನಿಸುತ್ತಿದ್ದಾಗ ಮತ್ತೊಬ್ಬ ವ್ಯಕ್ತಿ ಹಠಾತ್ ಹಿಂಬದಿ ಯಿಂದ ಬಂದು ಫುಜೈಲ್ ಮೇಲೆ ಹಲ್ಲೆ ನಡೆಸಿದ. ಬಳಿಕ ಅಲ್ಲಿ ಇನ್ನೂ ಹಲವರು ಸೇರಿ ಕಾರಿನಲ್ಲಿದ್ದ ಮಹಿಳೆಯರು ಮತ್ತು ಮಕ್ಕಳನ್ನು ಅಸಭ್ಯ ಶಬ್ದಗಳನ್ನು ಬಳಸಿ ನಿಂದಿಸಿದರು ಎಂದು ಆರೋಪಿಸಲಾಗಿದೆ.

ಈ ವೇಳೆ  ಜಿಯಾ ಮತ್ತು ಅವರ ಪತ್ನಿ ವಿಚಾರವನ್ನು ತಿಳಿಯಲು ಮುಂದೆ ಬಂದಾಗ, ಸುಮಾರು 15 ಮಂದಿ ಒಳಗೊಂಡ ಗುಂಪೊಂದು ಅವರ ಮೇಲೂ ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ. ಈ ವೇಳೆ ಆರೋಪಿಗಳು ಜಿಯಾ ಅವರ ಪತ್ನಿಯ ಕೈ ಹಿಡಿದು ಎಳೆದಿದ್ದು, ಅವರು ನೆಲಕ್ಕೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದೆ. ಏನೇನೋ ಪ್ರಯತ್ನ ಮಾಡಿ ಅಲ್ಲಿಂದ ಪಾರಾದರೂ, ಸಾಗರ ರಸ್ತೆಯ ಬಸ್ ಡಿಪೋ ಹತ್ತಿರ ತಲುಪುತ್ತಿದ್ದಂತೆಯೇ, ಆಟೋ ಹಾಗೂ ಬೈಕ್‌ನಲ್ಲಿ ಬಂದ ಕೆಲವರು ಅವರನ್ನು ಹಿಂಬಾಲಿಸಿ ಬೈಕ್‌ಗೆ ಢಿಕ್ಕಿ ಹೊಡೆದು ಕೆಳಗೆ ಬೀಳಿಸಿ ಮತ್ತೆ ಹಲ್ಲೆ ನಡೆಸಿದರು ಎನ್ನಲಾಗಿದೆ.

ನಂತರ ಜಿಯಾ ಅವರು ತಮ್ಮ ಸ್ನೇಹಿತ ಫುಜೈಲ್ ಅವರಿಗೆ ಮಾಹಿತಿ ನೀಡಿದ್ದು, ಅವರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಜಿಯಾ ಹಾಗೂ ಅವರ ಪತ್ನಿಯನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಪ್ರಾಥಮಿಕ ಚಿಕಿತ್ಸೆ ಬಳಿಕ ಇಬ್ಬರನ್ನೂ ಲೈಫ್ ಕೇರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಜಿಯಾ ಅವರ ಪತ್ನಿಯ ತಲೆಯ ಕೆಳಭಾಗದಲ್ಲಿ ರಕ್ತ ಹೆಪ್ಪು ಗಟ್ಟಿದ್ದು, ಕೈ ಮೂಳೆ ಮುರಿದಿದೆ. ಜಿಯಾ ಅವರ ಕೈ ಮತ್ತು ಕಾಲಿಗೆ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಯ ಮಾಹಿತಿ ದೊರೆತ ಕೂಡಲೇ ಡಿ.ವೈ.ಎಸ್.ಪಿ ಮಹೇಶ್, ವೃತ್ತ ನಿರೀಕ್ಷಕ ಮಂಜುನಾಥ ಲಿಂಗಾರೆಡ್ಡಿ ಹಾಗೂ ಇತರ ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಂದ ವಿವರಗಳನ್ನು ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಭಟ್ಕಳ ಮುಸ್ಲಿಂ ಯೂತ್ ಫೆಡರೇಷನ್ ಪರವಾಗಿ ಅಡ್ವ. ಆಫಾಕ್ ಕೋಲಾ, ಮಜ್ಲಿಸ್ ಇಸ್ಲಾಹ್ ವ ತಂಝೀಮ್ ಸಂಸ್ಥೆಯ ಪ್ರತಿನಿಧಿಗಳಾದ ಇರ್ಷಾದ್ ಗವಾಯಿ, ಅಝೀಝುರ್ರಹ್ಮಾನ್, ರುಕ್ನುದ್ದೀನ್ ನದ್ವಿ, ಸೈಯದ್ ಅಲಿ, ಇರ್ಷಾದ್ ಸಿದ್ದೀಕಿ ಮತ್ತು ಅನೇಕ ಯುವಕರು ಉಪಸ್ಥಿತರಿದ್ದರು.

ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News