×
Ad

ಮುರುಡೇಶ್ವರ | ಸಮುದ್ರದಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿನಿಯರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ

Update: 2024-12-11 13:58 IST

ಸಿಎಂ ಸಿದ್ದರಾಮಯ್ಯ

ಭಟ್ಕಳ : ಮುರುಡೇಶ್ವರದಲ್ಲಿ ಮಂಗಳವಾರ ಸಂಜೆ ಸಮುದ್ರಪಾಲಾಗಿದ್ದ ಕೋಲಾರದ ಮೂವರು ವಿದ್ಯಾರ್ಥಿನಿಯರ ಮೃತದೇಹಗಳು ಬುಧವಾರ ಪತ್ತೆಯಾಗಿವೆ.

ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನ ಎಂ.ಕೊತ್ತೂರು ಗ್ರಾಮದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರಾದ ದೀಕ್ಷಾ ಜೆ. (15), ಲಾವಣ್ಯಾ (15), ಮತ್ತು ವಂದನಾ (15) ಮೃತಪಟ್ಟಿದ್ದಾರೆ.

ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಕಣ್ಮರೆಯಾಗಿದ್ದ ವಿದ್ಯಾರ್ಥಿನಿಯರ ಪತ್ತೆಗಾಗಿ ಕರಾವಳಿ ಕಾವಲು ಪೊಲೀಸ್ ಪಡೆಯು ಸ್ಥಳೀಯ ಮೀನುಗಾರರ ಸಹಕಾರದಲ್ಲಿ ಇಂದು ಮುಂಜಾನೆಯಿಂದ ಶೋಧ ಮುಂದುವರಿಸಿದ್ದರು. ಈ ವೇಳೆ ಮೂವರ ಮೃತದೇಹ ಪತ್ತೆಯಾಗಿದೆ. ಇವರೊಂದಿಗೆ ಸಮುದ್ರಪಾಲಾಗಿದ್ದ ಇನ್ನೋರ್ವ ವಿದ್ಯಾರ್ಥಿನಿ ಶ್ರಾವಂತಿ ಗೋಪಾಲಪ್ಪ(15) ನಿನ್ನೆ ಮೃತಪಟ್ಟಿದ್ದಳು. 

ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಆಟವಾಡುವ ವೇಳೆ ಅಲೆಗಳ ಹೊಡೆತಕ್ಕೆ 7 ವಿದ್ಯಾರ್ಥಿನಿಯರು ನೀರುಪಾಲಾಗಿದ್ದರು. ಈ ಪೈಕಿ ಮೂವರನ್ನು ರಕ್ಷಣೆ ಮಾಡಲಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.

 ವಿದ್ಯಾರ್ಥಿಗಳ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸರಕಾರ

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆಂದು ಹೋದ ಸಂದರ್ಭದಲ್ಲಿ ಮುರುಡೇಶ್ವರ ಬಳಿಯ ಸಮುದ್ರದಲ್ಲಿ ನೀರುಪಾಲಾದ ಸುದ್ದಿ ತಿಳಿದು ಆಘಾತವಾಯಿತು. ಮೃತ ಮಕ್ಕಳ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಮಕ್ಕಳ ದುಃಖತಪ್ತ ಪೋಷಕರಿಗೆ ನನ್ನ ಸಂತಾಪಗಳು.

ಈ ದುರ್ಘಟನೆಯಲ್ಲಿ ಮಡಿದ ನಾಲ್ವರು ವಿದ್ಯಾರ್ಥಿಗಳ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು. ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಮೃತ ದೇಹಗಳನ್ನು ಹುಟ್ಟೂರಿಗೆ ತಲುಪಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ.

ಪ್ರವಾಸದ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚು ಜಾಗೃತೆ ವಹಿಸಬೇಕು. ಅಪಾಯಕಾರಿ ಸ್ಥಳಗಳಿಗೆ ಭೇಟಿನೀಡುವಾಗ ಮಕ್ಕಳ ಮೇಲೆ ನಿಗಾ ಇಡಬೇಕು. ಮಕ್ಕಳನ್ನು ಕಳೆದುಕೊಂಡ ಹೆತ್ತವರ ನೋವು ಸಂಕಟವನ್ನು ನಾನು ಅರ್ಥೈಸಿಕೊಳ್ಳಬಲ್ಲೆ, ಇಂತಹ ಅವಘಡಗಳು ಮತ್ತೆಂದೂ ಸಂಭವಿಸದಿರಲಿ ಎಂದು ಪ್ರಾರ್ಥಿಸುತ್ತೇನೆ.

ಸಿದ್ದರಾಮಯ್ಯ, ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News