ಮಂಕಿ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿಗೆ ಬಹುಮತ
ಕಾರವಾರ: ಹೊನ್ನಾವರ ತಾಲೂಕಿನ ನೂತನ ಮಂಕಿ ಪಟ್ಟಣ ಪಂಚಾಯತ್ ಗೆ ನಡೆದ ಚೊಚ್ಚಲ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಬೇರಿ ಬಾರಿಸಿದ್ದಾರೆ. 2020ರಲ್ಲಿ ರಚನೆಯಾದ ಈ ಪಟ್ಟಣ ಪಂಚಾಯತ್ ಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದ್ದು, ಮೊದಲ ಪ್ರಯತ್ನದಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಒಟ್ಟು 20 ವಾರ್ಡ್ ಗಳ ಪೈಕಿ ಎರಡು ವಾರ್ಡ್ ಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 18 ವಾರ್ಡ್ ಗಳಿಗೆ ಡಿಸೆಂಬರ್ 21ರಂದು ಮತದಾನ ನಡೆದಿತ್ತು. ಇಂದು ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 12 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಕೇವಲ ಆರು ಸ್ಥಾನಗಳನ್ನು ಗೆಲ್ಲಲಷ್ಟೇ ಶಕ್ತರಾಗಿದ್ದು, ಅವಿರೋಧ ಆಯ್ಕೆ ಸೇರಿದಂತೆ ಒಟ್ಟು 8 ಸ್ಥಾನಗಳಿಗೆ ಕಾಂಗ್ರೆಸ್ ತೃಪ್ತಿಪಟ್ಟುಕೊಳ್ಳಬೇಕಾಗಿದೆ.
ಈ ಫಲಿತಾಂಶವು ಸ್ಥಳೀಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ತವರು ನೆಲದಲ್ಲೇ ಕಾಂಗ್ರೆಸ್ಗೆ ಹಿನ್ನಡೆಯಾಗಿರುವುದು ಎದ್ದು ಕಾಣುತ್ತಿದೆ. ಸಚಿವರ ಪ್ರಭಾವದ ನಡುವೆಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಮುನ್ನಡೆ ಸಾಧಿಸಿರುವುದು ರಾಜಕೀಯ ವಿಶ್ಲೇಷಕರ ಗಮನ ಸೆಳೆದಿದೆ.
ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಮಂಕಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಿಸಿದ್ದಾರೆ. ವಿಜಯೋತ್ಸವ ಆಚರಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚುವ ಮೂಲಕ ಸಂಭ್ರಮ ಹಂಚಿಕೊಂಡರು. ಈ ಗೆಲುವು ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬಲಿದೆ ಎಂದು ಸ್ಥಳೀಯ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ.