'ನಾನು ಕಳೆದ ಜನ್ಮದಲ್ಲಿ ಕನ್ನಡಿಗನಾಗಿದ್ದೆʼ : ಕಾರವಾರ ಕರಾವಳಿ ಉತ್ಸವದಲ್ಲಿ ಗಾಯಕ ಸೋನು ನಿಗಮ್ ಮನದಾಳದ ಮಾತು
ಕಾರವಾರ: ನಗರದ ಟ್ಯಾಗೋರ್ ಕಡಲ ತೀರದಲ್ಲಿ ಆಯೋಜಿಸಲಾಗಿರುವ ಕರಾವಳಿ ಉತ್ಸವ ಸಪ್ತಾಹದ ಮೂರನೇ ದಿನದಂದು ಖ್ಯಾತ ಗಾಯಕ ಸೋನು ನಿಗಮ್ ತಮ್ಮ ಸುಮಧುರ ಧ್ವನಿಯ ಮೂಲಕ ನೆರೆದಿದ್ದ ಸಾವಿರಾರು ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದರು. ಮಯೂರ ವರ್ಮ ವೇದಿಕೆಯ ಮೇಲೆ ಹಾಡುತ್ತಲೇ ಕನ್ನಡಿಗರೊಂದಿಗಿನ ತಮ್ಮ ಅವಿನಾಭಾವ ಸಂಬಂಧವನ್ನು ಮೆಲುಕು ಹಾಕಿದ ಅವರು, ತಾವು ಹಿಂದಿ ಭಾಷಿಕರಾಗಿದ್ದರೂ ತಮ್ಮ ಅಂತರಾತ್ಮದಲ್ಲಿ ಕನ್ನಡ ಮನೆ ಮಾಡಿದೆ ಎಂದು ಭಾವುಕರಾಗಿ ನುಡಿದರು.
ನಾನು ಈ ಜನ್ಮದಲ್ಲಿ ಹಿಂದಿ ಭಾಷಿಕನಾಗಿರಬಹುದು, ಆದರೆ ನನ್ನ ಭಾವನೆಗಳನ್ನು ಗಮನಿಸಿದರೆ ಕಳೆದ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ ಎನಿಸುತ್ತದೆ. ಇದೇ ಕಾರಣಕ್ಕೆ ಕನ್ನಡ ಹಾಡುಗಳನ್ನು ಹಾಡುವಾಗ ಸಾಹಿತ್ಯಕ್ಕೆ ತಕ್ಕಂತೆ ಸಹಜವಾಗಿಯೇ ನನ್ನಲ್ಲಿ ಭಾವನೆಗಳು ಸ್ಫುರಿಸುತ್ತವೆ ಎಂದು ಅವರು ವೇದಿಕೆಯ ಮೇಲೆ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಆರಂಭದಲ್ಲಿ ಸತತ ಎಂಟು ಹಿಂದಿ ಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿದ ಸೋನು ನಿಗಮ್, ನಂತರ ಕನ್ನಡಿಗರ ನೆಚ್ಚಿನ ʼಈ ಸಂಜೆ ಯಾಕಾಗಿದೆ..ʼ ಹಾಡನ್ನು ಪ್ರಾರಂಭಿಸಿದರು.
ಕಾರ್ಯಕ್ರಮದುದ್ದಕ್ಕೂ 'ನೀ ಸನಿಹಕೆ ಬಂದರೆ', 'ಪರವಶನಾದೆನು', 'ಮಿಂಚಾಗಿ ನೀ ಬರಲು' ಸೇರಿದಂತೆ ಹಲವು ಜನಪ್ರಿಯ ಕನ್ನಡ ಗೀತೆಗಳನ್ನು ಹಾಡಿದರು. ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಟ್ಯಾಗೋರ್ ಕಡಲತೀರದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಜಮಾಯಿಸಿದ್ದರು.