×
Ad

ಮುಸ್ಲಿಮರು ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣಕ್ಕೆ ದಾಳವಾಗುತ್ತಿದ್ದಾರೆ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

Update: 2024-07-10 22:22 IST

ಭಟ್ಕಳ: ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಅದರ ದಾಳಕ್ಕೆ ಅವರು ಬಲಿಯಾಗುತ್ತಿದ್ದಾರೆ, ಮುಸ್ಲಿಮರು ಬಿಜೆಪಿ ವಿರುದ್ಧ ಮತ ಚಲಾಯಿಸುವ ಮಾನಸಿಕತೆಯಿಂದ ಹೊರಬರಬೇಕು ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಇಲ್ಲಿನ ಆಸರಕೇರಿ ತಿರುಮಲ ವೆಂಕಟ್ರಮಣ ಸಭಾಭವನದಲ್ಲಿ ಬಿಜೆಪಿ ಭಟ್ಕಳ ಮಂಡಲ ವತಿಯಿಂದ ಮಂಗಳವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಆಭಿನಂದನೆ ಸ್ವೀಕರಿಸಿ ಮಾತನಾಡಿದರು.

ಮುಸ್ಲಿಮರು ಒಂದು ಪಕ್ಷವನ್ನು ನೆಚ್ಚಿಕೊಂಡು ಕಡೆ ಮತ ಚಲಾಯಿಸುವ ಮನಸ್ಥಿತಿ ಹೊಂದಿದ್ದು ಇದು ಸರಿಯಲ್ಲ. ಅಲ್ಪ ಸಂಖ್ಯಾತರು ಸರಿ ತಪ್ಪಿನ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾಂಗ್ರೆಸ್ಸಿನ ಷಡ್ಯಂತ್ರಕ್ಕೆ ಒಳಗಾಗ ಬಾರದು ಎಂದು ಕರೆ ನೀಡಿದ ಅವರು ಒಂದೇ ಕಡೆ ಮತ ಚಲಾಯಿಸುವ ನಿಮ್ಮ ಮನಸ್ಥಿತಿಯಿಂದ ಮುಂದೆ ಅಪಾಯ ಆಗುವ ಸಾಧ್ಯತೆ ಇದ್ದು, ಈಗಿಂದಲೇ ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಭಟ್ಕಳ ಕ್ಷೇತ್ರದಲ್ಲಿ ಮಾಜಿ ಶಾಸಕ ಸುನೀಲ್ ನಾಯ್ಕ ತಂದ ಅಭಿವೃದ್ಧಿ ಕಾಮಗಾರಿಗಳನ್ನೇ ಸಚಿವ ಮಂಕಾಳ ವೈದ್ಯ ಮುಂದುವರಿಸಿದ್ದಾರೆ. ಇದನ್ನು ಬಿಟ್ಟು ಸಚಿವರು ಅವರ ಸರಕಾರದಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ತಂದಿಲ್ಲ ಎಂದರು.

ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಸಂಚಾಲಕ ಗೋವಿಂದ ನಾಯ್ಕ, ಜಿಲ್ಲಾ ಅಧ್ಯಕ್ಷ ಎನ್ ಎಸ್ ಹೆಗಡೆ, ಡಾ. ಜಿ ಜಿ ಹೆಗಡೆ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ ಭಟ್ಕಳ, ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಈಶ್ವರ ಎನ್ ನಾಯ್ಕ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸುಬ್ರಾಯ ದೇವಡಿಗಮ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಈಶ್ವರ ನಾಯ್ಕ ಮಾತನಾಡಿದರು.

ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಹೇಮಂತ ಗಾಂವಕರ್ ಮುಂತಾದವರಿದ್ದರು.

ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಧನ್ಯಕುಮಾರ ಜೈನ್ ನಿರೂಪಿಸಿದರು. ಬಿಜೆಪಿ ಮಂಡಲ ಸೇರಿದಂತೆ ವಿವಿಧ ಮೋರ್ಚಾ, ಸಂಘ ಸಂಸ್ಥೆಗಳಿಂದ ಸಂಸದ ಕಾಗೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News