×
Ad

ಭಟ್ಕಳ: ರಸ್ತೆ ಅಪಘಾತ; ಯುವಕ ಮೃತ್ಯು

Update: 2025-04-19 22:38 IST

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಮುರ್ಡೇಶ್ವರ ಸಮೀಪ ಶನಿವಾರ ಬೆಳಗ್ಗೆ ಸುಮಾರು 6:45ರ ಸಮಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 24 ವರ್ಷದ ಬೈಕ್ ಸವಾರ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬೈಕ್ ಸವಾರನು ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿರುವುದು ಅಪಘಾತಕ್ಕೆ ಕಾರಣವಾಗಿದೆ.

ಮೃತ ಯುವಕನನ್ನು ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ನಿವಾಸಿ ಮಲ್ಲಪ್ಪ ರಮೇಶ್ ಚಲವಾದಿ ಎಂದು ಗುರುತಿಸಲಾಗಿದೆ. ಈತ ಮಂಗಳೂರು ವಿಮಾನ ನಿಲ್ದಾಣ ರಸ್ತೆಯ ಸಮೀಪ ವಾಸವಾಗಿದ್ದ ಎನ್ನಲಾಗಿದೆ.

ಮೂಲಗಳ ಪ್ರಕಾರ, ಲಾರಿ ಮತ್ತು ಬೈಕ್ ಎರಡೂ ಹೊನ್ನಾವರದಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದವು. ಮುರ್ಡೇಶ್ವರದ ಪೆಟ್ರೋಲ್ ಪಂಪ್ ಸಮೀಪ ಲಾರಿಯು ಒಮ್ಮೆಲೇ ವೇಗ ಕಡಿಮೆ ಮಾಡಿದಾಗ, ಹಿಂದಿನಿಂದ ಬಂದ ಬೈಕ್ ಸವಾರನಿಗೆ ಸಮಯಕ್ಕೆ ಬ್ರೇಕ್ ಹಾಕಲು ಸಾಧ್ಯವಾಗದೆ, ಲಾರಿಗೆ ಜೋರಾಗಿ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಮುರ್ಡೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ಕಾನೂನು ಕಾರ್ಯವಿಧಾನಕ್ಕಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News