×
Ad

ಭಟ್ಕಳ ಮೀಡಿಯಾ ಕಪ್: ಅಂತರಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

Update: 2025-04-26 22:39 IST

ಭಟ್ಕಳ: ಭಟ್ಕಳ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾಲ್ಲೂಕು ಕ್ರೀಡಾಂಗಣ ದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ಅಂತರಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ (ಭಟ್ಕಳ ಮೀಡಿಯಾ ಕಪ್) ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪತ್ರಕರ್ತರಲ್ಲಿ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯವನ್ನು ಬೆಸೆಯುವ ಮೂಲಕ ಗಮನ ಸೆಳೆದಿದೆ.

ಪಂದ್ಯಾವಳಿಗೆ ಚಾಲನೆ ನೀಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಿರಸಿಯ ಅಧ್ಯಕ್ಷ ಜಿ. ಸುಬ್ರಾಯ ಭಟ್ಟ ಬಕ್ಕಳ, "ಇಂತಹ ಕಾರ್ಯಕ್ರಮಗಳು ಪತ್ರಕರ್ತರ ಮಧ್ಯೆ ಒಗ್ಗಟ್ಟನ್ನು ಬಲಪಡಿಸುವುದರ ಜೊತೆಗೆ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿ. ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ರಾಜ್ಯಕ್ಕೆ ಮಾದರಿಯಾಗಿದ್ದು, ಇದರ ಕಾರ್ಯಕ್ರಮಗಳು ಶ್ಲಾಘನೀಯ" ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಾಲಿಪಟ್ಟಣ ಪಂಚಾಯತ್ ಅಧ್ಯಕ್ಷೆ ಅಪ್ಸಾ ಹುಜೈಪಾ, ಪಂದ್ಯಾವಳಿಯ ಯಶಸ್ಸಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, "ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಆಯೋಜಿತವಾದ ಈ ಅಂತರಜಿಲ್ಲಾ ಕ್ರಿಕೆಟ್ ಪಂದ್ಯಾವಳಿ ಪತ್ರಕರ್ತರ ಒಗ್ಗಟ್ಟಿಗೆ ಸಾಕ್ಷಿಯಾಗಿದೆ. ಅರ್ಬನ್ ಬ್ಯಾಂಕ್ ನಿರ್ದೇಶಕಿ ಬೀನಾ ಮಂಕಾಳ ವೈದ್ಯ ಅವರ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ನಮಗೆ ಹೆಮ್ಮೆಯ ಜೊತೆಗೆ ಗೌರವವನ್ನು ತಂದಿದೆ" ಎಂದರು. ಜೊತೆಗೆ, ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ಸರಕಾರದಿಂದ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ಟ, ಉಪಾಧ್ಯಕ್ಷ ವಿಷ್ಣು ದೇವಡಿಗ, ಜಾಲಿಪಟ್ಟಣ ಸ್ಥಾಯಿ ಸಮಿತಿಯ ಅಧ್ಯಕ್ಷ ಈಶ್ವರ ಮೊಗೇರ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಘವೇಂದ್ರ ಭಟ್ಟ, ಹಿರಿಯ ಪತ್ರಕರ್ತರಾದ ಸತೀಶಕುಮಾರ ನಾಯ್ಕ, ಶೇಷಗಿರಿ ಮುಂಡಳ್ಳಿ, ಭಟ್ಕಳ ಸ್ಪೋರ್ಟ್ಸ್‌ನ ವಸೀಮ್, ಗುರುಸುಧೀಂದ್ರ ಕಾಲೇಜಿನ ಉಪನ್ಯಾಸಕ ಕೃಷ್ಣ ಮೊಗೇರ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ ಸ್ವಾಗತಿಸಿದರೆ, ಸದಸ್ಯ ಭಾಸ್ಕರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಮೊಗೇರ ಮತ್ತು ಸಂಜನಾ ಕಾರ್ಯಕ್ರಮ ನಿರೂಪಿಸಿ ದರು. ಸಂಘದ ಖಜಾಂಚಿ ಮೋಹನ ನಾಯ್ಕ ವಂದನೆ ಸಮರ್ಪಿಸಿದರು. ಪಂದ್ಯಾವಳಿಯಲ್ಲಿ ಆರು ಪತ್ರಕರ್ತರ ತಂಡಗಳು ಭಾಗವಹಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News