×
Ad

ಭಟ್ಕಳ| ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ: ಓರ್ವ ಆರೋಪಿಗೆ ಮರಣದಂಡನೆ, ಇನ್ನೋರ್ವನಿಗೆ ಜೀವಾವಧಿ ಶಿಕ್ಷೆ

Update: 2025-05-13 21:48 IST

ಭಟ್ಕಳ: ಹಾಡುವಳ್ಳಿ ಗ್ರಾಮದಲ್ಲಿ 2023ರ ಫೆ.24ರಂದು ನಡೆದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಸೆಷನ್ಸ್ ಕೋರ್ಟ್ ಮೇ 13ರಂದು ಮಹತ್ವದ ತೀರ್ಪು ಪ್ರಕಟಿಸಿದೆ.

ಈ ಘೋರ ಅಪರಾಧದಲ್ಲಿ ಓರ್ವ ಆರೋಪಿಗೆ ಮರಣದಂಡನೆ ಮತ್ತು ಇನ್ನೋರ್ವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಶಂಭು ವೆಂಕಟರಾಮ ಭಟ್ (65), ಪತ್ನಿ ಮಾಧವಿ ಭಟ್ (58), ಮಗ ರಾಘವೇಂದ್ರ ಅಲಿಯಾಸ್ ರಾಜೀವ್ ಭಟ್ (40) ಮತ್ತು ಸೊಸೆ ಕುಸುಮ ರಾಘವೇಂದ್ರ ಭಟ್ (32) ತಮ್ಮ ಮನೆಯಲ್ಲಿ ಕೊಲೆಯಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಕೃತ್ಯದ ಹಿಂದಿನ ಕಾರಣ ದೀರ್ಘಕಾಲದ ಆಸ್ತಿ ವಿವಾದ ಎಂದು ವರದಿಯಾಗಿದೆ.

ಪೊಲೀಸ್ ತನಿಖೆಯ ಬಳಿಕ ಮೂವರು ಆರೋಪಿಗಳಾದ ವಿದ್ಯಾ ಭಟ್ (ಕೊಲೆಯಾದವರ ಸೊಸೆ), ಅವರ ಸಹೋದರ ವಿನಯ್ ಭಟ್ ಮತ್ತು ಅವರ ತಂದೆ ಶ್ರೀಧರ್ ಭಟ್ ಅವರನ್ನು ಬಂಧಿಸಲಾಯಿತು. ವಿದ್ಯಾ ಭಟ್ ಸುಮಾರು ಒಂದು ತಿಂಗಳ ಕಾಲ ಕಸ್ಟಡಿಯಲ್ಲಿದ್ದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದರು.

ಮೇ 2ರಂದು ನಡೆದ ವಿಚಾರಣೆಯಲ್ಲಿ ಕೋರ್ಟ್ ವಿನಯ್ ಭಟ್ ಮತ್ತು ಶ್ರೀಧರ್ ಭಟ್ ಅವರನ್ನು ದೋಷಿಗಳೆಂದು ಘೋಷಿಸಿತು, ಆದರೆ ವಿದ್ಯಾ ಭಟ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿ ಸಿತು. ಶಿಕ್ಷೆಯ ಘೋಷಣೆಯನ್ನು ಮೇ 13ಕ್ಕೆ ಮೀಸಲಿಡಲಾಗಿತ್ತು.

ಮಂಗಳವಾರ ಪ್ರಕಟವಾದ ತೀರ್ಪಿನಲ್ಲಿ, ಕೋರ್ಟ್ ವಿನಯ್ ಭಟ್‌ಗೆ ಮರಣದಂಡನೆ ವಿಧಿಸಿತು. ಶ್ರೀಧರ್ ಭಟ್‌ಗೆ ಜೀವಾವಧಿ ಶಿಕ್ಷೆಯ ಜೊತೆಗೆ 2 ಲಕ್ಷ ರೂ. ದಂಡ ವಿಧಿಸಲಾಯಿತು.

ಈ ಪ್ರಕರಣದ ತನಿಖೆಯನ್ನು ಆಗಿನ ಉತ್ತರ ಕನ್ನಡ ಎಸ್‌ಪಿ ವಿಷ್ಣು ವರ್ಧನ್ ಮತ್ತು ಅಡಿಷನಲ್ ಎಸ್‌ಪಿ ಸಿ.ಟಿ. ಜಯಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಇನ್‌ಸ್ಪೆಕ್ಟರ್ ಚಂದನ್ ಗೋಪಾಲ್ ಮತ್ತು ಅವರ ತಂಡ ನಡೆಸಿತು. ತನಿಖೆಯ ಬಳಿಕ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಯಿತು. ಪೊಲೀಸ್ ಮೂಲಗಳ ಪ್ರಕಾರ, ವಿಚಾರಣೆಯ ಸಂದರ್ಭದಲ್ಲಿ ಒಟ್ಟು 71 ಸಾಕ್ಷಿಗಳನ್ನು ಹಾಜರುಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News