×
Ad

ಮತ್ತೊಂದು ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ

Update: 2025-07-03 07:57 IST

PC: /x.com/mathrubhumieng

 ಹೊಸದಿಲ್ಲಿ: ಐಪಿಎಲ್ ನಲ್ಲಿ ದಾಖಲೆ ಸೃಷ್ಟಿಸುವ ಮೂಲಕ ಬೆಳಕಿಗೆ ಬಂದ ಹದಿಹರೆಯದ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿ ಗುರುವಾರ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ. 19 ವರ್ಷ ವಯೋಮಿತಿಯ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 14 ವರ್ಷದ ಪೋರ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಿ ಎರಡನೇ ಅತಿವೇಗದ ಅರ್ಧಶತಕ ದಾಖಲಿಸಿದರು. ಒಟ್ಟು ಆರು ಬೌಂಡರಿ ಮತ್ತು ಒಂಬತ್ತು ಸಿಕ್ಸರ್ ಸಿಡಿಸಿ 40 ಓವರ್‌ಗಳ ಪಂದ್ಯದಲ್ಲಿ 269 ರನ್ ಕಲೆಹಾಕಲು ನೆರವಾದರು.

19ರ ವಯೋಮಿತಿಯ ಏಕದಿನ ಪಂದ್ಯಗಳ ಇತಿಹಾಸದಲ್ಲಿ ರಿಷಭ್ ಪಂತ್, 2016ರಲ್ಲಿ ನೇಪಾಳ ವಿರುದ್ಧ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದು, ಅತಿವೇಗದ ಅರ್ಧಶತಕ ಎನಿಸಿದೆ.

ಯುವ ಏಕದಿನ ಪಂದ್ಯದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಗೂ ಸೂರ್ಯವಂಶಿ ಪಾತ್ರರಾದರು. 2009ರಲ್ಲಿ ಆಸ್ಟ್ರೇಲಿಯಾದ ವಿರುದ್ಧ ಮನ್‌ದೀಪ್ ಸಿಂಗ್ 9 ಸಿಕ್ಸರ್ ಸಿಡಿಸಿದ ದಾಖಲೆಯನ್ನು ಸೂರ್ಯವಂಶಿ ಅಳಿಸಿಹಾಕಿದರು. ಭಾರತದ 19ರ ವಯೋಮಿತಿ ತಂಡ ಇಂಗ್ಲೆಂಡ್ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿತು.

ಇಡೀ ಸರಣಿಯಲ್ಲಿ ಸೂರ್ಯವಂಶಿ ಅದ್ಭುತ ಪ್ರದರ್ಶನ ತೋರುತ್ತಿದ್ದು, ಆರಂಭಿಕ ಪಂದ್ಯದಲ್ಲಿ 19 ಎಸೆತಗಳಲ್ಲಿ 48 ರನ್ ಸಿಡಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎರಡನೇ ಪಂದ್ಯದಲ್ಲಿ 34 ಎಸೆತಗಳಲ್ಲಿ 45 ರನ್ ಗಳಿಸಿದರೂ, ಇಂಗ್ಲೆಂಡ್ ಒಂದು ವಿಕೆಟ್‌ನ ರೋಚಕ ಜಯ ಸಾಧಿಸಿ ಐದು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿತು.

ಮೂರನೇ ಪಂದ್ಯದಲ್ಲಿ ದೊಡ್ಡ ಮೊತ್ತವನ್ನು ಬೆನ್ನಟ್ಟುವ ವೇಳೆ ಸೂರ್ಯವಂಶಿ ಅದ್ಭುತ ಬ್ಯಾಟಿಂಗ್ ಕೌಶಲ ಪ್ರದರ್ಶಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸರಣಿಯ ಮೂರು ಪಂದ್ಯಗಳಿಂದ ಸೂರ್ಯವಂಶಿ 179 ರನ್ ಕಲೆ ಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News