×
Ad

ವಳಚ್ಚಿಲ್| ಚೂರಿಯಿಂದ ಇರಿದು ವ್ಯಕ್ತಿಯ ಕೊಲೆ; ಆರೋಪಿ ಸೆರೆ

Update: 2025-05-23 07:23 IST

ಆರೋಪಿ ಮುಸ್ತಫಾ | ಮೃತ ಸುಲೈಮಾನ್

ಮಂಗಳೂರು: ನಗರ ಹೊರವಲಯದ ವಳಚ್ಚಿಲ್ ಎಂಬಲ್ಲಿ ವ್ಯಕ್ತಿಯೊಬ್ಬರನ್ನು ಚೂರಿಯಿಂದ ಕುತ್ತಿಗೆಗೆ ಇರಿದು ಕೊಲೆಗೈದ ಘಟನೆ ಗುರುವಾರ ರಾತ್ರಿ ನಡೆದಿದೆ.

ವಾಮಂಜೂರು-ಪಿಲಿಕುಳ ಸಮೀಪದ ಎದುರುಪದವು ನಿವಾಸಿ ಸುಲೈಮಾನ್ (50) ಕೊಲೆಯಾದ ವ್ಯಕ್ತಿ. ಇವರ ಪತ್ನಿಯ ಅಕ್ಕನ ಪುತ್ರ, ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಮುಸ್ತಫಾ (30) ಕೊಲೆಗೈದ ಆರೋಪಿಯಾಗಿದ್ದಾನೆ.

ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಸುಲೈಮಾನ್ ತನ್ನ ಮೂವರು ಮಕ್ಕಳು ಮತ್ತು ಸಂಬಂಧಿ ಯುವಕನ ಜೊತೆ ವಳಚ್ಚಿಲ್ ಪದವಿನ ಮನೆಗೆ ಗುರುವಾರ ರಾತ್ರಿ ತೆರಳಿದ್ದರು. ಈ ಸಂದರ್ಭ ಮಾತಿಗೆ ಮಾತು ಬೆಳೆದಿದೆ. ಆರೋಪಿ ಮುಸ್ತಫಾ ಸುಲೈಮಾನ್‌ರ ಕುತ್ತಿಗೆಗೆ ಚೂರಿಯಿಂದ ಇರಿದಿದ್ದು, ತಡೆಯಲು ಬಂದ ಸುಲೈಮಾನ್‌ರ ಪುತ್ರರಾದ ಸಿಯಾಬ್‌ನ ಎದೆಗೆ ಮತ್ತು ರಿಯಾಬ್‌ನ ಕೈಗೆ ಚೂರಿಯಿಂದ ಗಾಯಗೊಳಿಸಿದ್ದಾನೆ. ಮತ್ತೊಬ್ಬ ಪುತ್ರ ಹಾಗೂ ಸಂಬಂಧಿ ಯುವಕ ಸ್ಥಳದಿಂದ ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ.

ಗುರುವಾರ ರಾತ್ರಿ ಸುಮಾರು 9:30ಕ್ಕೆ ಈ ಘಟನೆ ನಡೆದಿದೆ. ತಕ್ಷಣ ಮೂವರನ್ನೂ ಪಡೀಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಸುಲೈಮಾನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಿಯಾಬ್‌ಗೆ ಗಂಭೀರ ಮತ್ತು ರಿಯಾಬ್‌ಗೆ ಸಾಮಾನ್ಯ ಗಾಯವಾಗಿದೆ.

ಸುಲೈಮಾನ್ ಮದುವೆ ದಳ್ಳಾಲಿ ಕೆಲಸ ಮಾಡಿಕೊಂಡಿದ್ದರು. ಎಂಟು ತಿಂಗಳ ಹಿಂದೆ ವಳಚ್ಚಿಲ್‌ನ ಮುಸ್ತಫಾ ಮದುವೆಗೆ ಸುಲೈಮಾನ್ ದಲ್ಲಾಳಿ ಕೆಲಸ ಮಾಡಿದ್ದರು. ಮುಸ್ತಫಾ ಮತ್ತು ಆತನ ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಸ್ತಫಾ ತನ್ನ ತಾಯಿಯ ತಂಗಿಯ ಪತಿ (ಚಿಕ್ಕಪ್ಪ)ಯಾಗಿರುವ ಸುಲೈಮಾನ್‌ಜೊತೆ ಆಗಾಗ ವಾಗ್ವಾದ ನಡೆಸುತ್ತಿದ್ದ ಎನ್ನಲಾಗಿದೆ. ಗುರುವಾರ ಈ ವಿಚಾರಕ್ಕೆ ಸಂಬಂಧಿಸಿ ಸುಲೈಮಾನ್ ತನ್ನ ಮಕ್ಕಳೊಂದಿಗೆ ಮುಸ್ತಫಾನ ಮನೆಗೆ ಹೋಗಿದ್ದರು. ಈ ಸಂದರ್ಭ ಸುಲೈಮಾನ್ ಮತ್ತು ಮುಸ್ತಫಾರ ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಹಾಗೇ ಅಲ್ಲಿಂದ ಮರಳುವಾಗ ಆರೋಪಿ ಮುಸ್ತಫಾನು ಸುಲೈಮಾನ್‌ರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ತಡೆಯಲು ಹೋದ ಸಿಯಾಬ್ ಮತ್ತು ರಿಯಾಬ್‌ಗೂ ಗಾಯಗೊಳಿಸಿದ್ದಾನೆ ಎಂದು ಪ್ರಕರಣ ದಾಖಲಿಸಿರುವ ಮಂಗಳೂರು ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.

ಪತ್ನಿಯ ಮನೆಯವರೇ ಪೊಲೀಸರಿಗೆ ಒಪ್ಪಿಸಿದರು:

ಕೃತ್ಯ ನಡೆದ ಬಳಿಕ ಆರೋಪಿ ಮುಸ್ತಫಾ ತನ್ನ ಪತ್ನಿಯ ಮನೆಗೆ ತೆರಳಿ ವಿಷಯ ತಿಳಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪತ್ನಿಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಒಪ್ಪಿಸಿದರು ಎಂದು ಮೂಲಗಳು ತಿಳಿಸಿವೆ.

ಎದುರುಪವಿನ ಹಯಾತುಲ್ ಇಸ್ಲಾಂ ಬದ್ರಿಯಾ ಜುಮಾ ಮಸೀದಿ-ಮದ್ರಸದ ಆವರಣದಲ್ಲಿ ಶುಕ್ರವಾರ ದಫನ ಕ್ರಿಯೆ ನಡೆಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News