×
Ad

ಎಸ್‌ಐಟಿ ರಚನೆ: ಉದ್ದೇಶವೇನು? ಸಾಧಿಸಿದ್ದೇನು?

Update: 2025-11-04 12:01 IST

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ, ಕೊಲೆ ಮತ್ತು ಸಾಮೂಹಿಕ ಹತ್ಯೆಗಳ ಆರೋಪಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ನಡೆಸುತ್ತಿದ್ದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. ಶವಗಳನ್ನು ಹೂತಿಟ್ಟ ಆರೋಪ ಪ್ರಕರಣವನ್ನು ಅರ್ಧಕ್ಕೇ ಕೈಬಿಟ್ಟು, ನಾಲ್ವರು ದೂರುದಾರರ ವಿರುದ್ಧವೇ ಪ್ರಕರಣ ದಾಖಲಿಸಿ ಎಸ್‌ಐಟಿ ನಡೆಸುತ್ತಿದ್ದ ತನಿಖೆಗೆ ನ.12ರವರೆಗೆ ಹೈಕೋರ್ಟ್ ತಡೆ ನೀಡಿದೆ. ಅಂತಿಮವಾಗಿ ಈ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಸಾಧಿಸಿದ್ದೇನು ಎಂಬುದು ಪ್ರಶ್ನೆಯೇ ಆಗಿರುವಾಗ, ರಾಜ್ಯದಲ್ಲಿ ಮತ್ತು ದೇಶದಲ್ಲಿ ಎಸ್‌ಐಟಿ ರಚನೆಯಾದ ಹಲವಾರು ಪ್ರಕರಣಗಳ ಕಡೆಗೂ ಕುತೂಹಲ ಹೊರಳುತ್ತದೆ.

ಭಾಗ - 1

ಸಾಮಾನ್ಯ ಕಾನೂನು ಜಾರಿ ಸಂಸ್ಥೆಗಳು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯವಾಗದ ಸಂಕೀರ್ಣ, ಸೂಕ್ಷ್ಮ ಅಥವಾ ಉನ್ನತ ಮಟ್ಟದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಲಾಗುತ್ತದೆ. ಒಂದು ನಿರ್ದಿಷ್ಟ ಪ್ರಕರಣದ ತನಿಖೆಗಾಗಿ ರಚಿಸಲಾದ ತಂಡ ಇದಾಗಿರುತ್ತದೆ. ಸುಪ್ರೀಂ ಕೋರ್ಟ್, ಹೈಕೋರ್ಟ್ ಅಥವಾ ಸರಕಾರ ಎಸ್‌ಐಟಿ ರಚಿಸಬಹುದು. ಒಂದು ಪ್ರಕರಣವನ್ನು ಹೈ ಪ್ರೊಫೈಲ್ ಎಂದು ಪರಿಗಣಿಸಿದಾಗ ಅಥವಾ ನಡೆಯುತ್ತಿರುವ ತನಿಖೆ ಸಮರ್ಪಕ ಪ್ರಗತಿ ಕಾಣದೇ ಇದ್ದಾಗ ಸಾಮಾನ್ಯವಾಗಿ ಎಸ್‌ಐಟಿ ರಚಿಸಲಾಗುತ್ತದೆ. ಎಸ್‌ಐಟಿ ಅನುಭವಿ ಅಧಿಕಾರಿಗಳನ್ನು ಒಳಗೊಂಡಿರುತ್ತದೆ. ಕೆಲ ಸಂದರ್ಭಗಳಲ್ಲಿ, ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಥವಾ ಇತರ ಹಿರಿಯ ಅಧಿಕಾರಿಗಳು ಕೂಡ ಎಸ್‌ಐಟಿ ನೇತೃತ್ವ ವಹಿಸುವ ಸಾಧ್ಯತೆ ಇರುತ್ತದೆ.

ಸಾಮಾನ್ಯ ಪೊಲೀಸ್ ಪಡೆಯಲ್ಲಿ ಪ್ರಭಾವಿ ವ್ಯಕ್ತಿಗಳ ಭ್ರಷ್ಟಾಚಾರ, ಪಕ್ಷಪಾತ ಅಥವಾ ಹಸ್ತಕ್ಷೇಪದ ಆರೋಪಗಳಿದ್ದಾಗ, ಅಂಥ ಪ್ರಕರಣಗಳ ತನಿಖೆಗಾಗಿ ರಚನೆಯಾಗುವ ಎಸ್‌ಐಟಿ ನಿಷ್ಪಕ್ಷವಾಗಿ ಪ್ರಕರಣವನ್ನು ನಿರ್ವಹಿಸಲು ಅವಕಾಶವಿರುತ್ತದೆ. ಸಂಕೀರ್ಣ ಪ್ರಕರಣಗಳಿಗೆ ಅಗತ್ಯವಿರುವ ನಿರ್ದಿಷ್ಟ ಸ್ಕಿಲ್ ಹೊಂದಿರುವ ವಿಧಿವಿಜ್ಞಾನ ತಜ್ಞರು, ಹಣಕಾಸು ವಿಶ್ಲೇಷಕರು ಮತ್ತು ಕಾನೂನು ಸಲಹೆಗಾರರಂತಹ ಅಧಿಕಾರಿಗಳು ಮತ್ತು ತಜ್ಞರು ಇರುವುದರಿಂದ ತನಿಖೆಗೆ ಹೆಚ್ಚು ಬಲಬರುತ್ತದೆ. ಎಸ್‌ಐಟಿ ಒಂದು ನಿರ್ದಿಷ್ಟ ಪ್ರಕರಣದ ಹಿನ್ನೆಲೆಯಲ್ಲಿನ ತಾತ್ಕಾಲಿಕ ರಚನೆಯಾಗಿರುವುದರಿಂದ, ಆ ಪ್ರಕರಣಕ್ಕಾಗಿಯೇ ಪೂರ್ತಿ ಗಮನವಿಡುವುದು ತನಿಖೆಯ ದೃಷ್ಟಿಯಿಂದ ಮಹತ್ವದ ಅಂಶವಾಗಿದೆ. ನ್ಯಾಯಾಲಯವೇ ಎಸ್‌ಐಟಿಯನ್ನು ರಚಿಸಿದ್ದರೆ, ಆಗ ಅದು ನ್ಯಾಯಾಂಗಕ್ಕೆ ನೇರವಾಗಿ ವರದಿ ಮಾಡುತ್ತದೆ. ಹಾಗಾಗಿ ನಡುವೆ ಯಾವುದೇ ಪ್ರಭಾವ, ಆದೇಶಕ್ಕೆ ಮಣಿಯುವ ಪ್ರಶ್ನೆಯಿರುವುದಿಲ್ಲ.

ಕರ್ನಾಟಕದಲ್ಲಿ ಎಸ್‌ಐಟಿ ರಚನೆಯಾದ ಪ್ರಮುಖ ಪ್ರಕರಣಗಳನ್ನು ಗಮನಿಸುವುದಾದರೆ,

ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಎಸ್‌ಐಟಿ ರಚಿಸಿತು. ದೂರುದಾರ ಗುರುತಿಸಿರುವ ಸ್ಥಳಗಳಲ್ಲಿ ಅಗೆದು ಶೋಧಿಸುವ ಕೆಲಸ ಹಲವು ದಿನಗಳವರೆಗೆ ನಡೆಯಿತು. ಕೆಲವೆಡೆ ಏನೂ ಸಿಕ್ಕಿಲ್ಲ, ಕೆಲವೆಡೆ ಅಸ್ಥಿಪಂಜರಗಳು ಸಿಕ್ಕಿವೆ ಎಂದು ಹೇಳಲಾಯಿತು. ಅವನ್ನು ಎಫ್‌ಎಸ್‌ಎಲ್ ಪರೀಕ್ಷೆಗೂ ಕಳಿಸಲಾಯಿತು. ಅದರ ವರದಿ ಎಸ್‌ಐಟಿ ಕೈಸೇರಿದ್ದು, ಸಮಗ್ರ ವರದಿ ಶೀಘ್ರವೇ ಸಲ್ಲಿಕೆಯಾಗಲಿದೆ ಎನ್ನಲಾಗಿದೆ. ಇಲ್ಲಿ ಒಂದು ಹಂತದಲ್ಲಿ ತನಿಖೆ ಸಾಮೂಹಿಕ ಸಮಾಧಿ ವಿಷಯದಿಂದ ಹೊರಳಿ, ಅದರ ಬಗ್ಗೆ ದೂರು ಕೊಟ್ಟವರ ವಿರುದ್ಧವೇ ತಿರುಗಿತು. ಮೂವರು ಸಾಮಾಜಿಕ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಟಿ. ಜಯಂತ್ ಮತ್ತು ಗಿರೀಶ್ ಮಟ್ಟಣ್ಣನವರ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಇದನ್ನು ಪ್ರಶ್ನಿಸಿ ದೂರುದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಹೈಕೋರ್ಟ್ ದೂರುದಾರರ ವಿರುದ್ಧದ ಪ್ರಕರಣಕ್ಕೆ ನವೆಂಬರ್ 12 ರವರೆಗೆ ತಡೆ ನೀಡಿದೆ. ಅಲ್ಲದೆ, ಶವ ಹೂತಿಟ್ಟ ಪ್ರಕರಣದ ತನಿಖೆಗೂ ತಡೆ ನೀಡಲಾಗಿದೆ. ಈ ಪ್ರಕರಣದಲ್ಲಿ ಧಾರ್ಮಿಕ ನೆಪ ಮುಂದಾಗಿ, ಕಡೆಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಸಂಘರ್ಷವೇ ಏರ್ಪಟ್ಟಿದೆ. ಎಸ್‌ಐಟಿ ತನಿಖೆ ನಡೆಯುವುದು ಎಷ್ಟೋ ರಾಜಕೀಯ ನಾಯಕರಿಗೇ ಬೇಕಿರಲಿಲ್ಲ. ಈಗ ಅದು ಅಂತಿಮ ಹಂತದಲ್ಲಿದ್ದರೂ, ಒಂದು ತಾರ್ಕಿಕ ಅಂತ್ಯ ಮುಟ್ಟದೇ ಉಳಿಯುತ್ತದೆಯೇ ಎಂಬ ಅನುಮಾನವಿದೆ.

ಪ್ರಜ್ವಲ್ ರೇವಣ್ಣ ಪ್ರಕರಣ

ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಯಾಗುವಲ್ಲಿ ಎಸ್‌ಐಟಿ ತನಿಖೆಯ ಪಾತ್ರ ಬಹಳ ಮಹತ್ವದ್ದಾಗಿದೆ. ಪ್ರಕರಣದ ತನಿಖೆಗೆ ಹೆಚ್ಚುವರಿ ಡಿಜಿಪಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚನೆಯಾಯಿತು. ಅದು ಈ ಪ್ರಕರಣದ ತನಿಖೆಯಲ್ಲಿ ಬಹಳ ದೊಡ್ಡ ಹೆಜ್ಜೆ ತೆಗೆದುಕೊಂಡಿತು. ಅಸಾಂಪ್ರದಾಯಿಕವಾದ ಮತ್ತು ವೈಜ್ಞಾನಿಕ ಮಾರ್ಗಗಳ ಮೂಲಕ ಹೋದದ್ದು ಅದಕ್ಕೆ ಅಷ್ಟೇ ದೊಡ್ಡ ಗೆಲುವು ತಂದುಕೊಟ್ಟಿತು. ತುರ್ಕಿಯ ಮತ್ತು ಜಪಾನ್‌ನಲ್ಲಿ ಇಂಥ ಪ್ರಕರಣಗಳ ತನಿಖೆಗೆ ಬಳಸಲಾಗುವ ತಂತ್ರಗಳನ್ನು ಇಲ್ಲಿ ಅನುಸರಿಸಲಾಯಿತು. ಇದರಲ್ಲಿ ಅಪರಾಧಿಯ ಮುಖ ಕಾಣದೇ ಇದ್ದರೂ, ಆತನ ದೇಹದ ವಿವಿಧ ಭಾಗಗಳದ್ದೇ ಚಿತ್ರಗಳನ್ನಿಟ್ಟುಕೊಂಡು ಹೋಲಿಸುವ ಮೂಲಕ ಪತ್ತೆ ಮಾಡಲಾಗುತ್ತದೆ. ಹಾಗೆ ದೇಹದ ಭಾಗಗಳ ಹೊಂದಾಣಿಕೆಯ ತಂತ್ರಗಳನ್ನು ಯಶಸ್ವಿಯಾಗಿ ಬಳಸಲಾಯಿತು. ಎಸ್‌ಐಟಿ ತನಿಖಾಧಿಕಾರಿಗಳು ವೀಡಿಯೊಗಳಿಂದ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡು ಅವುಗಳನ್ನು ಪ್ರಜ್ವಲ್ ದೇಹದ ಛಾಯಾಚಿತ್ರಗಳೊಂದಿಗೆ ಹೋಲಿಸಿದರು. ಇದನ್ನು ಸಿಆರ್‌ಪಿಸಿಯ ಸೆಕ್ಷನ್ 53 ಎ ಮೂಲಕ ನ್ಯಾಯಾಂಗದ ಅನುಮೋದನೆಯೊಂದಿಗೆ ಮಾಡಲಾಯಿತು. ಪ್ರಜ್ವಲ್ ಆರಂಭದಲ್ಲಿ ಈ ಛಾಯಾಚಿತ್ರಗಳನ್ನು ತನ್ನದೆಂದು ಒಪ್ಪಿರಲಿಲ್ಲ. ವೈದ್ಯರು ಕೂಡ ದೃಢಪಡಿಸಲು ಹಿಂಜರಿದಿದ್ದರು. ಆದರೆ ಕೋರ್ಟ್ ಅನುಮತಿ ನಂತರ, ಹೋಲಿಕೆ ಪ್ರಾರಂಭವಾಯಿತು. ಹತ್ತು ವಿಶಿಷ್ಟ ಗುರುತುಗಳ ಮೇಲೆ ಗಮನ ಕೊಡಲಾಯಿತು. ಆತನ ಎಡಗೈ ಮಧ್ಯದ ಬೆರಳಿನ ಮೇಲೆ ಮಚ್ಚೆ, ಎಡಗೈಯಲ್ಲಿನ ಗಾಯದ ಗುರುತು, ಕಾಲ್ಬೆರಳುಗಳ ಬಾಗಿರುವಿಕೆ ಇವೆಲ್ಲವೂ ವೀಡಿಯೊಗಳಲ್ಲಿನ ದೇಹದ ಭಾಗಗಳೊಂದಿಗೆ ನಿಖರವಾಗಿ ಹೊಂದಿಕೆಯಾಗುವುದು ದೃಢಪಟ್ಟಿತು. ಚರ್ಮರೋಗ, ಮೂಳೆಚಿಕಿತ್ಸೆ ಮತ್ತು ಮೂತ್ರಶಾಸ್ತ್ರದ ತಜ್ಞರನ್ನು ಒಳಗೊಂಡ ವಿಧಿವಿಜ್ಞಾನ ತಂಡ ಅಂತಿಮವಾಗಿ ವಿಡಿಯೋದಲ್ಲಿರುವುದು ಪ್ರಜ್ವಲ್ ರೇವಣ್ಣ ಎಂಬುದನ್ನು ದೃಢಪಡಿಸಿತು. ಮತ್ತೊಂದು ಅತ್ಯಂತ ನಿರ್ಣಾಯಕ ಪುರಾವೆಯಾಗಿ ಸಿಕ್ಕಿದ್ದು ಅತ್ಯಾಚಾರ ನಡೆದಿದ್ದ ತೋಟದ ಮನೆಯಲ್ಲಿನ ಕಪಾಟಿನಲ್ಲಿದ್ದ ಸಂತ್ರಸ್ತೆಯ ಪೆಟ್ಟಿಕೋಟ್. ತನಿಖಾಧಿಕಾರಿಗಳು ಅದನ್ನು ವಶಪಡಿಸಿಕೊಂಡಿದ್ದರು. ಮೂರು ವರ್ಷಗಳ ನಂತರವೂ ಅದರ ಮೇಲಿದ್ದ ವೀರ್ಯದ ಕುರುಹುಗಳು ಹಾಳಾಗದೆ ಉಳಿದಿದ್ದವು. ಅದು ಪ್ರಜ್ವಲ್‌ನ ಡಿಎನ್‌ಎಗೆ ಹೊಂದಿಕೆಯಾಗುವುದರೊಂದಿಗೆ, ದೊಡ್ಡ ಪುರಾವೆಯೊಂದು ಸಿಕ್ಕಿದಂತಾಗಿತ್ತು. ತನಿಖಾಧಿಕಾರಿಗಳು ಅಲ್ಲಿಗೇ ನಿಲ್ಲಲಿಲ್ಲ. ಅವರು ವೀಡಿಯೊಗಳಲ್ಲಿನ ದೃಶ್ಯಗಳನ್ನು ಪ್ರಜ್ವಲ್ ತೋಟದ ಮನೆ ಮತ್ತು ಬೆಂಗಳೂರಿನ ಮನೆಯ ಒಳಾಂಗಣಗಳೊಂದಿಗೆ ಹೋಲಿಸಿದರು. ನೆಲದ ಟೈಲ್ಸ್, ಪೀಠೋಪಕರಣಗಳು, ಒಂದು ಕಾಲದಲ್ಲಿ ವಸ್ತುಗಳು ಇದ್ದ ಗೋಡೆಗಳ ಮೇಲಿನ ಗುರುತುಗಳು ಸಹ, ವೀಡಿಯೊಗಳಲ್ಲಿ ಇದ್ದುದರೊಂದಿಗೆ ಸಂಪೂರ್ಣವಾಗಿ ಹೋಲುತ್ತಿದ್ದವು. ಇದಲ್ಲದೆ, ವೀಡಿಯೊಗಳಲ್ಲಿ ಸಣ್ಣ ಸ್ವರದಲ್ಲಿ ಮಾತಾಡುತ್ತಿರುವ ಗಂಡಸಿನ ಧ್ವನಿ ಪ್ರಜ್ವಲ್ ಧ್ವನಿ ಮಾದರಿಗೆ ಹೊಂದಿಕೆಯಾಗುತ್ತದೆ ಎಂದು ಧ್ವನಿ ವಿಶ್ಲೇಷಣೆಯಿಂದ ಸಾಬೀತಾಯಿತು. ಹೀಗೆ ಎಲ್ಲ ಮಗ್ಗಲುಗಳಿಂದ ಅತ್ಯಂತ ಯಶಸ್ವಿ ತನಿಖೆ ನಡೆಸಿ, ಆತ ಅಪರಾಧಿಯೆಂಬುದನ್ನು ಈ ಪ್ರಕರಣದಲ್ಲಿ ಎಸ್‌ಐಟಿ ತೋರಿಸಿತು.

ಆಳಂದ ಮತಗಳ್ಳತನ ಪ್ರಕರಣ

ಕರ್ನಾಟಕದ ಆಳಂದ ವಿಧಾನಸಭೆ ಕ್ಷೇತ್ರದಲ್ಲಿ 2023 ರಲ್ಲಿ 6,018 ಮತದಾರರ ಹೆಸರು ಅಳಿಸಲು ನಡೆದ ಯತ್ನಕ್ಕೆ ಸಂಬಂಧಿಸಿ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಮಹತ್ವದ ಅಂಶವನ್ನು ಹೊರತೆಗೆದಿದೆ. ಪ್ರತೀ ಮತದಾರರ ಅಳಿಸುವಿಕೆಗೆ 80ರೂ. ನೀಡಲಾಗಿತ್ತು ಎಂಬ ವಿಷಯ ಎಸ್‌ಐಟಿ ತನಿಖೆಯಿಂದ ಬಹಿರಂಗಗೊಂಡಿದೆ. ಅಂದಾಜು 4.8 ಲಕ್ಷ ರೂ.ಗಳ ಪಾವತಿಯಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. 6,018 ಮತಗಳನ್ನು ಅಳಿಸಲಾಗಿದ್ದು, ಅದರ ಹಿಂದೆ ಸ್ಥಳೀಯ ಡೇಟಾ ಸೆಂಟರ್ ಮತ್ತು ಬಿಜೆಪಿ ನಾಯಕನ ಸಹಾಯಕರು ಇದ್ದಾರೆಂದು ಹೇಳಲಾಗಿದೆ. 2023ರ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ ಮತಗಳವು ಯತ್ನ ನಡೆದಿತ್ತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಆಕಸ್ಮಿಕವಾಗಿ ಅಲ್ಲಿ ಮತಗಳವು ಯತ್ನ ಬಯಲಿಗೆ ಬಂದಿತ್ತು. ಎಸ್‌ಐಟಿ ಸೆಪ್ಟಂಬರ್ 26ರಂದು ಔಪಚಾರಿಕವಾಗಿ ಸಿಐಡಿಯ ಸೈಬರ್ ಅಪರಾಧ ಘಟಕದಿಂದ ತನಿಖೆಯನ್ನು ವಹಿಸಿಕೊಂಡಿತು. ಕಲಬುರಗಿ ಜಿಲ್ಲಾ ಕೇಂದ್ರದಲ್ಲಿರುವ ಡೇಟಾ ಸೆಂಟರ್‌ನಿಂದ ಈ ಅಳಿಸುವಿಕೆ ಅರ್ಜಿಗಳನ್ನು ಕಳಿಸಲಾಗಿದೆ ಎಂದು ಎಸ್‌ಐಟಿ ಪತ್ತೆಮಾಡಿದೆ. ಅಕ್ಟೋಬರ್ 17ರಂದು ಎಸ್‌ಐಟಿ ಬಿಜೆಪಿ ನಾಯಕ್ ಸುಭಾಷ್ ಗುತ್ತೇದಾರ್, ಅವರ ಪುತ್ರರಾದ ಹರ್ಷಾನಂದ ಮತ್ತು ಸಂತೋಷ್ ಮತ್ತು ಅವರ ಚಾರ್ಟರ್ಡ್ ಅಕೌಂಟೆಂಟ್ ಮಲ್ಲಿಕಾರ್ಜುನ್ ಮಹಾಂತಗೋಲ್ ಅವರ ನಿವಾಸಗಳಲ್ಲಿ ಶೋಧ ನಡೆಸಿತು. ದಾಳಿಯ ವೇಳೆ ಅಧಿಕಾರಿಗಳು 7 ಲ್ಯಾಪ್‌ಟಾಪ್‌ಗಳು ಮತ್ತು ಹಲವಾರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮತ ಅಳಿಸುವಿಕೆಗಾಗಿ ನೀಡಲಾಗಿರುವ ಹಣದ ಮೂಲದ ಬಗ್ಗೆ ಪತ್ತೆಹಚ್ಚಲಾಗುತ್ತಿದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಪ್ರಕರಣಗಳು

ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ತನಿಖೆಗಾಗಿ ಎಸ್‌ಐಟಿ ಸ್ಥಾಪಿಸಲಾಗಿತ್ತು. ಅವಿಭಜಿತ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 2006ರಿಂದ 2010ರವರೆಗೆ ನಡೆದಿದ್ದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಎಸ್‌ಐಟಿ 2011ರಿಂದ 2024ರ ವರೆಗೆ 109 ಪ್ರಕರಣಗಳನ್ನು ದಾಖಲಿಸಿಕೊಂಡಿತ್ತು. ಅವುಗಳಲ್ಲಿ ಹಲವಾರು ಪ್ರಕರಣಗಳ ವಿಚಾರಣೆ, ತನಿಖೆ ಬಾಕಿಯಿದೆ. 62 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. 29 ಪ್ರಕರಣಗಳಲ್ಲಿ ಎಸ್‌ಐಟಿ ಬಿ ರಿಪೋರ್ಟ್ ಸಲ್ಲಿಸಿದ್ದು, ಬಿ ರಿಪೋರ್ಟ್ ವಾಪಸ್ ಪಡೆಯುವ ಬಗ್ಗೆ ಮೊನ್ನೆ ಆಗಸ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹಾಗಾಗಿ ಗಣಿ ಅಕ್ರಮದ ತನಿಖೆಗೆ ಮರುಜೀವ ಬರುವ ಸುಳಿವುಗಳಿವೆ. ತನಿಖೆಗೆ ಒಳಪಡದ ಪ್ರಕರಣಗಳಿಗಾಗಿ ಹೊಸ ಎಸ್‌ಐಟಿ ರಚಿಸುವಂತೆಯೂ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಮುಖ್ಯಮಂತ್ರಿಗೆ ಪತ್ರ ಬರೆದು ಆಗ್ರಹಿಸಿದ್ದರು. ಸಿಬಿಐನಿಂದ 10 ವರ್ಷಗಳ ನಂತರವೂ ತನಿಖೆ ನಡೆಯದ ಪ್ರಕರಣಗಳನ್ನು ಎಸ್‌ಐಟಿ ಮೂಲಕ ತನಿಖೆ ನಡೆಸಲು ಅಗತ್ಯ ಪ್ರಕ್ರಿಯೆಗೆ ಮುಂದಾಗಲಿರುವ ಬಗ್ಗೆಯೂ ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕದಲ್ಲಿ ಇತ್ತೀಚೆಗೆ ಭಾರೀ ಸದ್ದು ಮಾಡಿದ ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ರಾಜ್ಯದ ಆಡಳಿತ ವ್ಯವಸ್ಥೆಯನ್ನೇ ಅಲುಗಾಡಿಸಿತ್ತು. ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಈ ಹಗರಣದಲ್ಲಿ, ಪರೀಕ್ಷಾ ಅಕ್ರಮಗಳು, ಒಎಂಆರ್ ಶೀಟ್‌ಗಳ ತಿದ್ದುವಿಕೆ ಮತ್ತು ಹಣದ ವ್ಯವಹಾರದಂತಹ ಗಂಭೀರ ಆರೋಪಗಳು ಕೇಳಿಬಂದಿದ್ದವು. ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಪ್ರಭಾವಿಗಳು ಭಾಗಿಯಾಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎಸ್‌ಐಟಿ ರಚಿಸಿತು.

ಹಾಗೆಯೇ, ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಬಿಟ್‌ಕಾಯಿನ್ ಹಗರಣದ ತನಿಖೆಗೂ ಎಸ್‌ಐಟಿ ರಚಿಸಲಾಗಿತ್ತು. ಈ ಪ್ರಕರಣದ ತಾಂತ್ರಿಕ ಸಂಕೀರ್ಣತೆ ಮತ್ತು ಇದರಲ್ಲಿ ಪ್ರಭಾವಿ ವ್ಯಕ್ತಿಗಳ ಪಾತ್ರದ ಆರೋಪಗಳಿದ್ದ ಕಾರಣ, ಸಮಗ್ರ ತನಿಖೆಗಾಗಿ ಎಸ್‌ಐಟಿಯನ್ನು ನಿಯೋಜಿಸಲಾಗಿತ್ತು. ಈ ಎರಡೂ ಪ್ರಕರಣಗಳು, ಆರ್ಥಿಕ ಮತ್ತು ವ್ಯವಸ್ಥಿತ ಅಪರಾಧಗಳನ್ನು ಭೇದಿಸುವಲ್ಲಿ ಎಸ್‌ಐಟಿಯ ಪಾತ್ರವನ್ನು ಮತ್ತಷ್ಟು ಗಟ್ಟಿಗೊಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News