×
Ad

ದಸರಾ ಆಚರಣೆಯಲ್ಲಿ ರಾಜಕೀಯ ಧ್ರುವೀಕರಣ ಸಮರ್ಥನೀಯವೇ?

Update: 2025-09-02 15:28 IST

ಮತ್ತೆ ದಸರಾ ಬರುತ್ತಿದೆ. ಈ ಸಲ ದಸರಾ ಉದ್ಘಾಟಿಸಲು ಸರಕಾರ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ, ಹೋರಾಟಗಾರ್ತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದೆ. ಧ್ರುವೀಕರಣ ರಾಜಕಾರಣದ ಮೂಲಕ ಬೇಳೆ ಬೇಯಿಸಿಕೊಳ್ಳುವ ಮಂದಿ ಇದಕ್ಕೆ ತಕರಾರು ತೆಗೆದು ಕೂಗಾಡುತ್ತಿದ್ದಾರೆ. ಬಿಜೆಪಿ ನಾಯಕರಿಂದ ಆಕ್ಷೇಪ ವ್ಯಕ್ತವಾಗಿದೆ. ತಕರಾರಿನ ಹಿಂದೆ ಇರುವುದು ದಸರಾವನ್ನು ಧರ್ಮಕ್ಕೆ ಸೀಮಿತಗೊಳಿಸುವ ಮನಸ್ಥಿತಿ ಎಂಬುದು ಸ್ಪಷ್ಟ. ಅದನ್ನು ಮೀರಿ, ದಸರಾವನ್ನು ಸಾಂಸ್ಕೃತಿಕ ವಿದ್ಯಮಾನವಾಗಿ ನೋಡುವವರಿಗೆ ಇದು ಸಮಸ್ಯೆಯಲ್ಲ. ದುಷ್ಟತನದ ವಿರುದ್ಧದ ವಿಜಯವನ್ನು ಸಂಕೇತಿಸುವ ದಸರಾಗೂ ದುಷ್ಟ ಧೋರಣೆಯ ಉರಿಗಾಳಿ ಕಾಡುವುದು ತಪ್ಪುವುದಿಲ್ಲ.

ದಸರಾ ನಾಡಹಬ್ಬವಾಗಿರುವುದರಿಂದ, ಅದು ಎಲ್ಲ ಮತಗಳನ್ನೂ ಮೀರಿದ ಮತ್ತು ಎಲ್ಲರನ್ನೂ ಜೊತೆಗೂಡಿಸುವ ವಿದ್ಯಮಾನವಾಗಬೇಕಾಗುತ್ತದೆ ಮತ್ತು ಸರಕಾರದ ನಿರ್ಧಾರಗಳು ಹಲವು ಸಲ ಅದರದೇ ಧೋರಣೆಯನ್ನು ವ್ಯಕ್ತಗೊಳಿಸುವುದು ಸಹಜ. ಹಾಗಾಗಿ ದಸರಾಗೆ ವಿವಾದ ಮೆತ್ತಿಕೊಳ್ಳುವುದರ ಹಿಂದೆ ಹಲವು ಸಲ ರಾಜಕೀಯವೇ ಇರುತ್ತದೆಂಬುದು ಬೇರೆ ಮಾತು. ಈಗ ಬಾನು ಮುಷ್ತಾಕ್ ದಸರಾ ಉದ್ಘಾಟಿಸುವ ಬಗ್ಗೆ ತಕರಾರು ಎದ್ದಂತೆಯೇ, ಹಿಂದೆಯೂ ಅನೇಕ ಬಾರಿ ಉದ್ಘಾಟಕರ ಆಯ್ಕೆಯ ಕಾರಣಕ್ಕೇ ವಿರೋಧ, ವಿವಾದ ಎದ್ದಿದ್ದಿದೆ.

ಮೈಸೂರು ದಸರಾದ ಕಥೆ ವಿಜಯನಗರ ಸಾಮ್ರಾಜ್ಯದಿಂದ ಮೈಸೂರಿಗೆ ಬಂದ ಸಾಂಸ್ಕೃತಿಕ ಸಡಗರದ ಕಥೆಯಾಗಿದೆ. ಅದು, ಮಹಾರಾಜರ ದಸರಾನಾಡಹಬ್ಬವಾದ ಕಥೆಯೂ ಹೌದು. ಅದಕ್ಕೆ, ನಾಲ್ಕು ಶತಮಾನಗಳನ್ನೂ ಮೀರಿದ ಇತಿಹಾಸವಿದೆ.

15ನೇ ಶತಮಾನದಲ್ಲಿ ವಿಜಯನಗರದಲ್ಲಿ ವೈಭವದ ದಸರಾ ಆಚರಿಸಲಾಗುತ್ತಿತ್ತು. ಅದಕ್ಕಾಗಿಯೇ ಮಹಾನವಮಿ ದಿಬ್ಬವನ್ನು ನಿರ್ಮಿಸಲಾಗಿತ್ತು. ದಸರಾ ವೈಭವ ಕಣ್ತುಂಬಿಕೊಳ್ಳಲು ದೇಶದ ಮೂಲೆಮೂಲೆಯಿಂದಲೂ ಜನ ಬರುತ್ತಿದ್ದುದು ಶ್ರೀಕೃಷ್ಣದೇವರಾಯನ ಆಡಳಿತ ಕಾಲದ ವಿಶೇಷವೂ ಆಗಿತ್ತು ಎಂಬ ಉಲ್ಲೇಖಗಳು ಸಿಗುತ್ತವೆ.

ವಿಜಯನಗರ ಸಾಮ್ರಾಜ್ಯ ಪತನದ ಬಳಿಕ ಸಿಂಹಾಸನ ಮೈಸೂರು ಸಂಸ್ಥಾನದ ಅರಸರಿಗೆ ಬಂದಿತ್ತು. ಆಗಿನಿಂದಲೇ ಒಡೆಯರ್ ದಸರಾ ಆಚರಣೆ ಶುರುವಾಗಿತ್ತು. 1610ರಲ್ಲಿ ಮೈಸೂರಿನ ಅರಸರಾಗಿದ್ದ 1ನೇ ರಾಜ ಒಡೆಯರ್ ಅವರು ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು. ಆಗ, ಶ್ರೀರಂಗಪಟ್ಟಣ ಮೈಸೂರು ಸಂಸ್ಥಾನದ ರಾಜಧಾನಿಯಾಗಿತ್ತು. ಬಳಿಕ 1799ರಲ್ಲಿ ಮೈಸೂರು ರಾಜ್ಯದ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಮೈಸೂರನ್ನು ರಾಜಧಾನಿಯನ್ನಾಗಿ ಘೋಷಿಸಿದ ಪರಿಣಾಮ, ದಸರಾ ಕೂಡಾ ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬಂತು. 1610ರಿಂದ ಇಲ್ಲಿಯವರೆಗೆ ಲೆಕ್ಕ ಹಾಕಿದರೆ, 415 ವರ್ಷಗಳಿಂದಲೂ ಮೈಸೂರು ದಸರಾ ಸಾಗಿಬಂದಿದೆ. ಮೈಸೂರು ಸಂಸ್ಥಾನದ ಕಡೆಯ ಅರಸ ಜಯಚಾಮರಾಜ ಒಡೆಯರ್ 1969ರವರೆಗೂ ದಸರಾ ಆಚರಿಸಿದ್ದರು. ಅದೇ ಒಡೆಯರ್ ಆಚರಣೆಯ ಕೊನೆಯ ದಸರಾವಾಯಿತು. 1969ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಮಾಜಿ ಮಹಾರಾಜರಿಗೆ ನೀಡುತ್ತಿದ್ದ ರಾಜಧನವನ್ನು ಸ್ಥಗಿತಗೊಳಿಸಿದ್ದರು. ಆಗ ಅದನ್ನು ವಿರೋಧಿಸದೆ, ಸ್ವತಂತ್ರ ಭಾರತದಲ್ಲಿ ತಾವೂ ಒಬ್ಬ ಸಾಮಾನ್ಯ ಪ್ರಜೆ ಎಂದು ಪ್ರತಿಪಾದಿಸಿದ್ದವರು ಜಯಚಾಮರಾಜ ಒಡೆಯರ್. 1970ರಲ್ಲಿ ಜಯಚಾಮರಾಜ ಒಡೆಯರ್ ತಾವಿನ್ನು ಸಿಂಹಾಸನದ ಮೇಲೆ ಕುಳಿತು ದಸರಾ ನಡೆಸುವುದಿಲ್ಲ ಎಂದು ಘೋಷಿಸಿದರು.

ಮೈಸೂರಿನ ನಾಡಿಮಿಡಿತದ ಭಾಗವಾಗಿದ್ದ ದಸರಾ ಹೀಗೆ ಇದ್ದಕ್ಕಿದ್ದಂತೆ ನಿಲ್ಲಬಾರದು ಎಂದು ಕೆಲವು ಗಣ್ಯರೇ ಸೇರಿ ಮರದ ಅಂಬಾರಿಯನ್ನು ಆನೆಯ ಮೇಲಿಟ್ಟು ಮೆರವಣಿಗೆ ನಡೆಸುವ ಮೂಲಕ ದಸರಾವನ್ನು ಆಚರಿಸಿದ್ದರು. ಹೀಗೆ 1970ರಲ್ಲಿ ಮೊದಲ ಬಾರಿಗೆ ದಸರಾ ಜನರಿಂದಲೇ ನಾಡಹಬ್ಬವಾಗಿ ಆಚರಣೆಗೊಂಡಿತು. ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದಸರಾ ಪರಂಪರೆ ಮುಂದುವರಿಸುವುದಕ್ಕೆ ಒತ್ತು ನೀಡಲಾಯಿತು ಮತ್ತು ದಸರಾ ನಾಡಹಬ್ಬವಾಗುವುದಕ್ಕೆ ಅರಸು ಅವರೇ ಮುನ್ನುಡಿ ಬರೆದರು. ದಸರಾವನ್ನು ನಾಡಹಬ್ಬವೆಂದು 1973ರಲ್ಲಿ ದೇವರಾಜ ಅರಸು ಘೋಷಿಸಿದರು. ಮಹಾರಾಜರಿಂದ ಚಿನ್ನದ ಅಂಬಾರಿ ಪಡೆಯಲಾಯಿತು. ಗಜಪಡೆಯನ್ನೂ ದಸರಾ ಮೆರವಣಿಗೆಯ ಭಾಗವಾಗಿ ಉಳಿಸಿಕೊಳ್ಳಲಾಯಿತು. ಅಂಬಾರಿಯಲ್ಲಿ ಚಾಮುಂಡೇಶ್ವರಿಯ ವಿಗ್ರಹ ಪ್ರತಿಷ್ಠಾಪಿಸುವ ನಿರ್ಧಾರವೂ ಆಯಿತು. ಚೋಳ ಶೈಲಿಯಲ್ಲಿ ಚಾಮುಂಡೇಶ್ವರಿಯ ವಿಗ್ರಹ ರೂಪಿಸಲಾಯಿತು. ಚಾಮುಂಡೇಶ್ವರಿಯ ವಿಗ್ರಹ ಹೊತ್ತ ಚಿನ್ನದ ಅಂಬಾರಿಯೊಂದಿಗೆ ಎಲ್ಲ ಸಾಂಸ್ಕೃತಿಕ ಮೆರುಗನ್ನು ಕೂಡಿಸಿಕೊಂಡು ಅರಮನೆ ಅಂಗಳದಿಂದ ಬನ್ನಿಮಂಟಪಕ್ಕೆ ಜಂಬೂಸವಾರಿ ಹೊರಟಿತು. ಬನ್ನಿಪೂಜೆಯೂ ನಡೆಯಿತು. ಅರಮನೆಯ ದರ್ಬಾರ್ ಹಾಲ್‌ನಲ್ಲಿಯೇ ಸರಕಾರದ ವತಿಯಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿ ದೇವರಾಜ ಅರಸು ಭಾಗಿಯಾಗುವುದರೊಂದಿಗೆ, ನಾಡಹಬ್ಬದ ಹೊಸ ಸಂಪ್ರದಾಯವೊಂದು ಮೊದಲಾಯಿತು.

ಆನಂತರ 1990ರ ದಶಕದಲ್ಲಿ ಚಾಮುಂಡೇಶ್ವರಿಯ ವಿಗ್ರಹವನ್ನು ಚೋಳ ಶೈಲಿಯಿಂದ ಹೊಯ್ಸಳ ಶೈಲಿಗೆ ಬದಲಿಸಲಾಗಿದ್ದು, ಆಗಿನಿಂದ ಹೊಸ ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ. ಮಹಾರಾಜರ ದಸರಾದ ಆವತ್ತಿನದೇ ವೈಭವ, ವಿಜೃಂಭಣೆ ಈಗಲೂ ಇದೆ. ದಸರಾದ ಜೊತೆಗಿನ ನಾಡಜನರ ಭಾವನಾತ್ಮಕ ನಂಟು ಕುಂದಿಲ್ಲದೆ ಮುಂದುವರಿದಿದೆ. ವಿಶ್ವವಿಖ್ಯಾತಿಯೂ ಮೈಸೂರು ದಸರಾಗೆ ಸಿಕ್ಕಿದೆ. ಆವತ್ತಿನಿಂದ ಇವತ್ತಿನವರೆಗೂ ದಸರಾದ ದೊಡ್ಡ ಆಕರ್ಷಣೆಯೆಂದರೆ, ಜಂಬೂಸವಾರಿ. ಸಿಂಗಾರಗೊಂಡ ಗಜಪಡೆಯ ನಡುವೆ ಚಿನ್ನದ ಅಂಬಾರಿ ಹೊರುವ ಆನೆಗೆ ವಿಶೇಷ ಮಾನ್ಯತೆ.

ಸರಕಾರಗಳು ನಾಡಹಬ್ಬ ದಸರಾವನ್ನು ಆಚರಿಸಿಕೊಂಡು ಬರುತ್ತಿರುವಾಗ, ಅವುಗಳದ್ದೇ ರಾಜಕೀಯ ನಿಲುವಿನ ಪ್ರದರ್ಶನವಾಗುವುದು ಕೂಡ ನಡೆಯುತ್ತಿದೆ. ರಾಜಕೀಯ ಭಿನ್ನಮತ ಅನೇಕ ಸಲ ವಿವಾದವನ್ನೂ ಸೃಷ್ಟಿಸುತ್ತಿದೆ. ಈ ಸಲದ ದಸರಾ ವಿವಾದ ಕೂಡ ಇಂಥದೇ ರಾಜಕೀಯ ಭಿನ್ನಮತದ ಜೊತೆಗೆ ಧಾರ್ಮಿಕ ಸಂಕುಚಿತ ಮನಸ್ಥಿತಿಯ ಕಾರಣದಿಂದ ಹುಟ್ಟಿಕೊಂಡಿದೆ.

ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸಲಿರುವ ವಿಷಯವನ್ನು ಬಿಜೆಪಿ ವಿವಾದವನ್ನಾಗಿಸಿದೆ. ಮತ್ತೆ ಧರ್ಮವನ್ನು ಎಳೆದು ತರಲಾಗಿದ್ದು, ಅವರು ದಸರಾ ಉದ್ಘಾಟಿಸುವುದು ಸರಿಯಲ್ಲ ಎಂದು ಆಕ್ಷೇಪ ಎತ್ತಲಾಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಪ್ರತಾಪ ಸಿಂಹ ಥರದವರು ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟಿಸುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡ ಭುವನೇಶ್ವರಿ ವಿಷಯವಾಗಿ ಬಾನು ಮುಷ್ತಾಕ್ ಅವರು ಹಿಂದೊಮ್ಮೆ ಮಾತಾಡಿದ್ದರ ವೀಡಿಯೊವನ್ನು ಬಿಜೆಪಿಯವರು ಮುಖ್ಯವಾಗಿ ಪ್ರಸ್ತಾಪಿಸುತ್ತಿದ್ದಾರೆ. ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದವರು, ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿಕೊಂಡು ಪುಷ್ಪಾರ್ಚನೆ ಮಾಡುತ್ತಾರೆಯೇ ಎಂದು ಕೇಳಿದ್ದಾರೆ.

‘‘ಕನ್ನಡವನ್ನು ಕನ್ನಡ ಭುವನೇಶ್ವರಿಯಾಗಿ ಮಾಡಿಬಿಟ್ಟಿರಿ. ಕೆಂಪು, ಹಳದಿ, ಅರಿಶಿಣ, ಕುಂಕುಮದ ಬಾವುಟ ಹಾಕಿ, ಅರಿಶಿನಕುಂಕುಮ ಲೇಪಿಸಿ ಭುವನೇಶ್ವರಿಯಾಗಿ ಮಂದಾಸನದ ಮೇಲೆ ಕೂರಿಸಿ ಬಿಟ್ಟಿರಿ. ನಾನೆಲ್ಲಿ ನಿಲ್ಲಬೇಕು, ನಾನೇನನ್ನು ನೋಡಲಿ, ನಾನೆಲ್ಲಿ ತೊಡಗಿಕೊಳ್ಳಬೇಕು?’’ ಎಂದು ಬಾನು ಅವರು ಪ್ರಶ್ನಿಸಿದ್ದು ಆ ವೀಡಿಯೊದಲ್ಲಿದೆ. ಅವರ ಇದೇ ಮಾತನ್ನು ನೆಪವಾಗಿಸಿಕೊಂಡು, ಕನ್ನಡ ಭುವನೇಶ್ವರಿಯನ್ನು ಸಹಿಸಲಾಗದವರು ಚಾಮುಂಡಿ ತಾಯಿಯ ವೈಭವಕ್ಕೆ ತಲೆಬಾಗಲು ಒಪ್ಪಿದ್ದಾದರೂ ಏಕೆ ಎಂದು ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದ್ದಾರೆ. ಆದರೆ ಈ ಹೊತ್ತಲ್ಲಿ, ಹೆಣ್ಣಿಗೆ ಹೆಸರಿಗಷ್ಟೇ ದೇವತೆಯ ಸ್ಥಾನ ಕೊಟ್ಟು, ಅವಳನ್ನು ತುಳಿಯುವ ಕೆಲಸ ನಿರಂತರವಾಗಿ ಸಾಗಿರುವುದರ ಬಗ್ಗೆ ಬಾನು ಮುಷ್ತಾಕ್ ಅವರು ಹೇಳಿರುವುದನ್ನು ಇದೇ ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿಯೇ ಮರೆಯುತ್ತಿದ್ದಾರೆ. ಮಹಿಳೆಯನ್ನು ಮಂದಾಸನದ ಮೇಲೆ ಕೂರಿಸಿದಾಕ್ಷಣ ದೇವತೆಗಳು ಸಂತುಷ್ಟರಾಗುತ್ತಾರೆ. ಇಲ್ಲೂ ಕನ್ನಡಮ್ಮನ ದೇವಸ್ಥಾನದಲ್ಲಿ ಮಂದಾಸನದ ಮೇಲೆ ಕೂರಿಸಿ ಮಹಿಳೆಯನ್ನು ಹೇಗೆ ತುಳಿಯುತ್ತಾ ಇದ್ದೀರೋ, ದೌರ್ಜನ್ಯ ಮಾಡುತ್ತಿದ್ದೀರೋ, ಹಿಂಸೆ ಮಾಡುತ್ತಿದ್ದೀರೋ ಕನ್ನಡ ಭಾಷೆ ಮೇಲೆ ಕೂಡ ನೀವು ದೌರ್ಜನ್ಯ ಮಾಡುತ್ತಿದ್ದೀರಿ ಎಂದು ಬಾನು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದರೊಂದಿಗೆ, ಕನ್ನಡವನ್ನು ಧರ್ಮಕ್ಕೆ ಸೀಮಿತ ಮಾಡಿದ್ದ ಹಾಗೆ, ಚಾಮುಂಡಿ ಮತ್ತು ದಸರಾವನ್ನು ಕೂಡ ಧರ್ಮಕ್ಕೆ ಸೀಮಿತವಾಗಿಸಿ, ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸುವುದಕ್ಕೆ ಆಕ್ಷೇಪ ಎತ್ತಲಾಗುತ್ತಿದೆ. ಒಬ್ಬ ಹೋರಾಟಗಾರ್ತಿಯಾಗಿ ಬಾನು ಮುಷ್ತಾಕ್ ಅವರು ದೇವತೆಯನ್ನು ವಿರೋಧಿಸಲಿಲ್ಲ, ಬದಲು ಆ ಹೆಸರಿನಲ್ಲಿ ನಾಟಕವಾಡುವ ಬೂಟಾಟಿಕೆಯನ್ನು ಮತ್ತು ಹೆಣ್ಣನ್ನು ತುಳಿಯುತ್ತಲೇ ಇರುವ ವ್ಯವಸ್ಥೆಯನ್ನು ಮಾತ್ರವೇ ಅವರು ಪ್ರಶ್ನಿಸಿದ್ದರು. ಆದರೆ, ಅದನ್ನೀಗ, ದೇವತೆಯನ್ನು ಒಪ್ಪದವರು ಎಂದು ತಮಗೆ ಬೇಕಾದಂತೆ ವ್ಯಾಖ್ಯಾನಿಸುವ ಹಳೇ ಚಾಳಿಯನ್ನೇ ಇಲ್ಲಿಯೂ ಬಿಜೆಪಿ ಮತ್ತೊಮ್ಮೆ ತೋರಿಸಿದೆ. ಒಂದು ಸಾಂಸ್ಕೃತಿಕ ವಿದ್ಯಮಾನವಾಗಿರುವ ದಸರಾ ಹಬ್ಬವನ್ನು ಧರ್ಮದ ಚೌಕಟ್ಟಿನಲ್ಲಿ ಸೀಮಿತಗೊಳಿಸುವ ಯತ್ನ ನಡೆದಿದೆ.

ಬಿಜೆಪಿ ಸಂಸದ ಯದುವೀರ್ ಒಡೆಯರ್ ಮೊದಲು ಸರಕಾರದ ನಿರ್ಧಾರ ಸ್ವಾಗತಿಸಿದ್ದವರು ಈಗ ಬೇರೆಯದೇ ರಾಗ ತೆಗೆದಿದ್ದಾರೆ. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಬಾನು ಮುಷ್ತಾಕ್ ಅವರ ಕೊಡುಗೆ ಅಪಾರವಾಗಿದ್ದು, ಅದನ್ನು ಗೌರವಿಸುವುದಾಗಿ ಹೇಳಿದ್ದ ಅವರು, ಬಾನು ಮುಷ್ತಾಕ್ ಆಯ್ಕೆಗೆ ತಮ್ಮ ಭಿನ್ನಾಭಿಪ್ರಾಯವಿಲ್ಲ ಎಂದಿದ್ದರು. ಈಗ, ‘‘ಕನ್ನಡಾಂಬೆ ಕುರಿತ ಹೇಳಿಕೆಗೆ ಬಾನು ಮುಷ್ತಾಕ್ ಮೊದಲು ಸ್ಪಷ್ಟನೆ ಕೊಡಲಿ. ಸ್ಪಷ್ಟೀಕರಣ ನೀಡದಿದ್ದರೆ ಅವರು ದಸರಾ ಉದ್ಘಾಟಿಸುವುದಕ್ಕೆ ನನ್ನ ವಿರೋಧವಿದೆ’’ ಎಂದಿದ್ದಾರೆ. ಅವರ ಈ ಹೇಳಿಕೆ ಯಾಕೆ ಬಂದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ ಮತ್ತು ಈ ಹೇಳಿಕೆಯೊಂದಿಗೆ, ಅವರು ಕೂಡ ಯತ್ನಾಳ್, ಪ್ರತಾಪ ಸಿಂಹ ಅವರ ಸಾಲಿನಲ್ಲೇ ನಿಂತು, ಬಿಜೆಪಿಯ ಅಸಲೀ ಬಣ್ಣ ತೋರಿಸಿದ್ದಾರೆ.

‘‘ದಸರಾ ನಾಡ ಹಬ್ಬ. ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಲ್ಲ. ಒಂದು ಧರ್ಮವನ್ನು ಹೊರಗಿಟ್ಟು ದಸರಾ ಮಾಡಲು ಸಾಧ್ಯವೆ? ಮಿರ್ಜಾ ಇಸ್ಮಾಯೀಲ್ ದಿವಾನರಾಗಿ ದಸರಾ ಮಾಡಿದ್ದರಲ್ಲವೆ? ನಿಸಾರ್ ಅಹಮದ್ ದಸರಾ ಉದ್ಘಾಟಿಸಿದ್ದರಲ್ಲವೆ? ಇದಕ್ಕೆಲ್ಲಾ ತಕರಾರು ತೆಗೆಯಬಾರದು. ಊರ ಹಬ್ಬವನ್ನು ಎಲ್ಲರೂ ಸೇರಿಯೇ ಮಾಡಬೇಕು’’ ಎಂದು ಗೃಹಸಚಿವ ಪರಮೇಶ್ವರ್ ಹೇಳಿದ್ದಾರೆ.

ದಸರಾ ಉದ್ಘಾಟನೆಗೆ ಅತಿಥಿಗಳನ್ನು ಆಹ್ವಾನಿಸುವ ಪರಿಪಾಠ ಶುರುವಾದದ್ದು ಯಾವಾಗ ಎಂಬುದನ್ನು ನೋಡಬೇಕು. 1993ರಲ್ಲಿ ಮಹಾರಾಷ್ಟ್ರದ ಲಾತೂರ್‌ನಲ್ಲಿ ಭೂಕಂಪವಾದಾಗ, ದಸರಾ ಆಚರಣೆ ಬೇಡ ಎಂಬ ಕೂಗು ಕೇಳಿಬಂದಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯ್ಲಿಯವರು ವರನಟ ಡಾ. ರಾಜ್‌ಕುಮಾರ್ ಅವರನ್ನೇ ಉದ್ಘಾಟಕರನ್ನಾಗಿ ಆಹ್ವಾನಿಸಿ ವಿರೋಧ ತಣ್ಣಗಾಗಿಸಿದ್ದರು. ದಸರಾ ಉದ್ಘಾಟನೆಗೆ ಅತಿಥಿಗಳನ್ನು ಆಹ್ವಾನಿಸುವುದು ಅಲ್ಲಿಂದ ಶುರುವಾಯಿತು. ಈಗ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡುವುದರೊಂದಿಗೆ, ಐದನೇ ಸಲ ಮಹಿಳೆಗೆ ಅವಕಾಶ ಸಿಕ್ಕಂತಾಗಿದೆ. ಈ ಹಿಂದೆ 2022ರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ದಸರಾಗೆ ಚಾಲನೆ ನೀಡಿದ್ದರು. 2018ರಲ್ಲಿ ಸುಧಾ ಮೂರ್ತಿ ದಸರಾ ಉದ್ಘಾಟಿಸಿದ್ದರು. 2001ರಲ್ಲಿ ನಟಿ ಬಿ. ಸರೋಜಾದೇವಿ ಉದ್ಘಾಟಿಸಿದ್ದರು. 1999 ರಲ್ಲಿ ಗಂಗೂಬಾಯಿ ಹಾನಗಲ್ ಅವರು ದಸರಾ ಉದ್ಘಾಟಿಸಿದ್ದರು.

ಈಗ ಬಾನು ಮುಷ್ತಾಕ್ ಅವರ ವಿಷಯದಲ್ಲಿ ತಕರಾರು ಬಂದಂತೆಯೇ ಈ ಹಿಂದೆಯೂ ಕೆಲವು ಸಲ ಉದ್ಘಾಟಕರ ಆಯ್ಕೆ ವಿಚಾರದಲ್ಲಿ ಆಕ್ಷೇಪ, ವಿವಾದ ಎದ್ದಿದೆ. ಸಾಮಾನ್ಯವಾಗಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷ ಇಂಥ ನಿರ್ಧಾರಗಳಲ್ಲಿ ತನ್ನ ನಿಲುವನ್ನು ಪ್ರದರ್ಶಿಸುವುದಿದೆ. ತನ್ನ ಮನೋಭಾವಕ್ಕೆ ಅನುಗುಣವಾಗಿ ಅಂಥ ಹಿನ್ನೆಲೆಯವರನ್ನೇ ಆಯ್ಕೆ ಮಾಡಿದಾಗ ಅದು ಮತ್ತೊಂದು ಕಡೆಯವರ ವಿರೋಧಕ್ಕೆ ಕಾರಣವಾಗುತ್ತದೆ. ಕಳೆದ ಹಲವು ವರ್ಷಗಳಲ್ಲಿ ಈ ನಿಲುವು ದಸರಾ ಉದ್ಘಾಟಕರ ಆಯ್ಕೆಯಲ್ಲಿ ಹೇಗೆ ವ್ಯಕ್ತವಾಗಿದೆ ಎಂಬುದನ್ನು ಗಮನಿಸಬಹುದು.

ಸಾಮಾನ್ಯವಾಗಿ ಬಿಜೆಪಿ ಅಧಿಕಾರದಲ್ಲಿದ್ದಾಗ ಧಾರ್ಮಿಕ ವಲಯದವರನ್ನು ಹಾಗೂ ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಚಿಂತಕರು ಮತ್ತು ಬರಹಗಾರರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದನ್ನು ನೋಡುತ್ತೇವೆ. ಬಿಜೆಪಿ ಅಧಿಕಾರದಲ್ಲಿದ್ದ ಸಮಯವನ್ನೇ ಗಮನಿಸಿದರೆ, 2008ರಲ್ಲಿ ಮೈಸೂರು ದಸರಾ ಉದ್ಘಾಟಿಸಿದವರು ತುಮಕೂರು ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ. 2009ರಲ್ಲಿ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ, 2010ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು, 2011ರಲ್ಲಿ ಪೇಜಾವರ ಮಠಾಧೀಶರಾಗಿದ್ದ ವಿಶ್ವೇಶತೀರ್ಥ ಸ್ವಾಮೀಜಿಯವರು, 2012ರಲ್ಲಿ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಯವರು, 2019ರಲ್ಲಿ ಸಾಹಿತಿ ಎಸ್.ಎಲ್. ಭೈರಪ್ಪ, 2020ರಲ್ಲಿ ಜಯದೇವ ಆಸ್ಪತ್ರೆ ನಿರ್ದೇಶಕರಾಗಿದ್ದ ಡಾ. ಸಿ.ಎನ್. ಮಂಜುನಾಥ್ ಮತ್ತು 2021ರಲ್ಲಿ ಮಾಜಿ ಸಿಎಂ ಎಸ್.ಎಂ. ಕೃಷ್ಣರವರು.

ಇನ್ನು ಕಾಂಗ್ರೆಸ್ ಅವಧಿಯಲ್ಲಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವ ಸಮಯದಲ್ಲಿ ಆಯ್ಕೆಯಾದವರನ್ನು ನೋಡುವುದಾದರೆ, 2013ರಲ್ಲಿ ಮೈಸೂರು ದಸರಾ ಉದ್ಘಾಟಿಸಿದವರು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಚಂದ್ರಶೇಖರ ಕಂಬಾರ. 2014ರಲ್ಲಿ ಉದ್ಘಾಟಿಸಿದವರು ನಾಟಕಕಾರ ಗಿರೀಶ್ ಕಾರ್ನಾಡ್. 2015ರಲ್ಲಿ ಉದ್ಘಾಟಿಸಿದವರು ಪ್ರಗತಿಪರ ರೈತ, ಮೈಸೂರು ಜಿಲ್ಲೆ ಹೆಗ್ಗಡೆಕೋಟೆ ತಾಲೂಕಿನ ಪುಟ್ಟಯ್ಯ. 2016ರಲ್ಲಿ ಉದ್ಘಾಟಿಸಿದವರು ಕವಿ ಚೆನ್ನವೀರ ಕಣವಿ. 2017ರಲ್ಲಿ ಉದ್ಘಾಟಿಸಿದವರು ಕೆ.ಎಸ್. ನಿಸಾರ್ ಅಹಮದ್. 2023ರಲ್ಲಿ ಉದ್ಘಾಟಿಸಿದವರು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ. 2024ರಲ್ಲಿ ಉದ್ಘಾಟಿಸಿದವರು ಸಾಹಿತಿ ಹಂಪನಾ ಮತ್ತು ಈಗ, 2025ರಲ್ಲಿ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ.

ಎರಡೂ ಸರಕಾರಗಳ ಅವಧಿಯಲ್ಲಿನ ಆಯ್ಕೆಯ ಹಿಂದಿನ ನಿಲುವಿನಲ್ಲಿರುವ ವ್ಯತ್ಯಾಸ ಬಹಳ ಸ್ಪಷ್ಟವಾಗಿದೆ. ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖ್ಯಮಂತ್ರಿಗಳ ಅವಧಿಯಲ್ಲಿ ಆಯ್ಕೆಯಾದವರೆಲ್ಲ ಧಾರ್ಮಿಕ ಕ್ಷೇತ್ರದವರು ಎನ್ನುವುದರ ಜೊತೆಗೇ, ಬಿಜೆಪಿ ನಿಲುವನ್ನು ಒಪ್ಪುವಂಥವರಾಗಿದ್ದಾರೆ. ಯಡಿಯೂರಪ್ಪ ಅವಧಿಯಲ್ಲಿ ಆಯ್ಕೆಯಾಗಿದ್ದ ಸಾಹಿತಿ ಎಸ್.ಎಲ್. ಭೈರಪ್ಪ ಕೂಡ ಸಂಘ ಪರಿವಾರದ ನಿಲುವನ್ನು ಬೆಂಬಲಿಸುವವರೆಂಬುದನ್ನು ನೋಡಿದರೆ ಇದು ಹೆಚ್ಚು ಸ್ಪಷ್ಟವಾಗುತ್ತದೆ. ಬಿಜೆಪಿ ಕಾಲದ ಆಯ್ಕೆಗೆ ತದ್ವಿರುದ್ಧವಾಗಿ ಕಾಂಗ್ರೆಸ್ ಅವಧಿಯಲ್ಲಿ ಆಯ್ಕೆಯಾದವರೆಲ್ಲರೂ ಪ್ರಗತಿಪರ ಮನೋಧರ್ಮದ ಚಿಂತಕರು. ಚಿಂತಕರ ಬಗ್ಗೆ ಬಿಜೆಪಿಗೆ ಯಾವತ್ತೂ ಪೂರ್ವಾಗ್ರಹ ಇದ್ದೇ ಇದೆ. ಅದು ಅನೇಕ ಸಲ ಕಾಂಗ್ರೆಸ್ ಆಯ್ಕೆ ಮಾಡಿರುವ ಅತಿಥಿಗಳ ವಿಷಯದಲ್ಲಿ ತಕರಾರು ತೆಗೆದಿದೆ, ಅಪಸ್ವರ ಎತ್ತಿದೆ. ಎಲ್ಲದರಲ್ಲೂ ಧರ್ಮವನ್ನು ತರುವುದು, ಎಲ್ಲವನ್ನೂ ಕೋಮು ಮನಸ್ಥಿತಿಯಿಂದ ನೋಡುವುದು ಬಿಜೆಪಿಯ ಜಾಯಮಾನವೇ ಆಗಿಬಿಟ್ಟಿದೆ. ಹಾಗಾಗಿಯೇ ಸಾಂಸ್ಕೃತಿಕ ವಿದ್ಯಮಾನವಾಗಿರುವ ದಸರಾವನ್ನೂ ಧರ್ಮದ ದೃಷ್ಟಿಗೆ ಅದು ಸೀಮಿತಗೊಳಿಸುತ್ತದೆ. ಎಲ್ಲರ ಹಬ್ಬವಾಗಬೇಕಿರುವ ದಸರಾದಲ್ಲೂ ಹಿಂದೂ ಮುಸ್ಲಿಮ್ ಎಂಬ ಒಡಕು ತರುತ್ತದೆ.

ಈ ಹಿಂದೆ ಕೆ.ಎಸ್. ನಿಸಾರ್ ಅಹಮದ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದಾಗ ಬಿಜೆಪಿ ತೀರಾ ತಕರಾರು ಎತ್ತಿರಲಿಲ್ಲವಾದರೂ, ಮುಸ್ಲಿಮ್ ಎಂಬ ಕಾರಣಕ್ಕಾಗಿ ಕೆಲ ಅಪಸ್ವರಗಳು ಆಗಲೂ ಎದ್ದಿದ್ದವು. ಧರಂಸಿಂಗ್ ಅವಧಿಯಲ್ಲಿ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ದಸರಾ ಉದ್ಘಾಟಿಸಿದ್ದರು. ಅವರು ಯಾವುದೇ ಧಾರ್ಮಿಕ ಆಚರಣೆ ಮಾಡದೆ ದಸರಾಗೆ ಚಾಲನೆ ನೀಡಿದ್ದರು. ಆದರೆ, ದೀಪ ಬೆಳಗುವುದನ್ನು ಬೆಂಕಿ ಹಚ್ಚುವುದು ಎಂಬರ್ಥದಲ್ಲಿ ಅವರು ಮಾತಾಡಿದ್ದಾರೆಂದು ತಕರಾರು ಎದ್ದಿತ್ತು. ಸಾಂಪ್ರದಾಯಿಕವಾಗಿ ದೀಪ ಬೆಳಗುವುದನ್ನು ಧಿಕ್ಕರಿಸುವ ಮೂಲಕ ಅವರು ಹಿಂದೂಗಳ ಭಾವನೆಗೆ ನೋವುಂಟು ಮಾಡಿದ್ದಾರೆ ಎಂದು ಕೂಗಾಡಿದ್ದೂ ಆಯಿತು. ಸಂಗೀತ ನಿರ್ದೇಶಕ ಹಂಸಲೇಖ ಅವರ ಆಯ್ಕೆಯ ಬಗ್ಗೆಯೂ ಅಪಸ್ವರಗಳಿದ್ದವು. ಅವರು ವಿವಿಧ ವೇದಿಕೆಗಳಲ್ಲಿ ಹಿಂದೂಗಳಿಗೆ ನೋವಾಗುವ ಹಾಗೆ ಮಾತಾಡುತ್ತಾರೆ ಮತ್ತು ಅಂಥವರಿಂದ ದಸರಾ ಉದ್ಘಾಟನೆ ಮಾಡಿಸಲಾಯಿತು ಎಂಬ ಕೋಪತಾಪ ಅಲ್ಲಲ್ಲಿ ವ್ಯಕ್ತವಾಗುತ್ತಲೇ ಇತ್ತು.

ಹೀಗೆ ದಸರಾ ಎಂದರೆ ಹಿಂದೂಗಳ ಹಬ್ಬ ಎಂದು ನೋಡುವ, ಇತರ ಧರ್ಮದವರನ್ನು ದೂರವಿಡಬೇಕೆನ್ನುವ ಬಿಜೆಪಿ ಮತ್ತು ಸಂಘಪರಿವಾರದವರ ಧೋರಣೆ, ನಾಡಹಬ್ಬವಾಗಿ ಅದರ ಹೆಚ್ಚುಗಾರಿಕೆಯನ್ನು ಗ್ರಹಿಸಲಾರದಷ್ಟು ಕುರುಡಾಗಿದೆ.

ಇಲ್ಲಿ ಇತಿಹಾಸದ ಒಂದು ಘಟನೆಯನ್ನು ನೆನಪು ಮಾಡಿಕೊಳ್ಳಬೇಕು. 1927ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಗಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯೀಲ್ ಅವರನ್ನು ಅಂಬಾರಿಯ ಮೇಲೆ ಕೂರಿಸಿಕೊಂಡು ಮೈಸೂರಿನ ರಾಜಮಾರ್ಗದಲ್ಲಿ ಮೆರವಣಿಗೆ ಹೊರಟಿದ್ದರು. ಆಗ ಅದನ್ನು ಧರ್ಮಕ್ಕೆ ಆದ ಅಪಚಾರವೆಂದು ಆಕ್ಷೇಪಿಸಲಾಯಿತು. ಅದನ್ನು ವಿರೋಧಿಸಿ ಧರ್ಮಾಂಧರು ಮೆರವಣಿಗೆ ಹೊತ್ತಲ್ಲೇ ದುರ್ವರ್ತನೆಯನ್ನೂ ತೋರಿಸಿದ್ದರು. ಗಲಭೆಗೂ ಅದು ಕಾರಣವಾಗಿತ್ತು. ಆದರೆ ಒಡೆಯರ್ ಧೃತಿಗೆಡಲಿಲ್ಲ. ಮರುವರ್ಷ ಮತ್ತೆ ಮಿರ್ಜಾ ಅವರನ್ನು ನಾಲ್ವಡಿಯವರು ಅಂಬಾರಿ ಮೇಲೆ ಕೂರಿಸಿ ದಿಟ್ಟತನ ಮೆರೆದಿದ್ದರು ಮತ್ತು ಮಿರ್ಜಾ ಅವರ ಬಗೆಗಿನ ತಮ್ಮ ವಿಶ್ವಾಸ ಎಂಥದ್ದು ಎಂಬುದನ್ನು ಆ ಮೂಲಕ ವ್ಯಕ್ತಗೊಳಿಸಿದ್ದರು.

ಅರಸೊತ್ತಿಗೆಯ ಭಾಗವಾಗಿದ್ದೂ ಅಂಥದೊಂದು ಅಪ್ಪಟ ಪ್ರಜಾಸತ್ತಾತ್ಮಕ ನಡೆಯನ್ನು, ನಿಲುವನ್ನು ಅವರು ತೋರಿಸಿದ್ದರು. ಆದರೆ ಪ್ರಜಾಪ್ರಭುತ್ವದಲ್ಲಿ ಪ್ರಜಾಪ್ರತಿನಿಧಿಗಳೆನ್ನಿಸಿಕೊಂಡವರು ಮಾತ್ರ ಧರ್ಮದ ತಪ್ಪು ಗ್ರಹಿಕೆಯೊಂದಿಗೆ ದ್ವೇಷ ಬಿತ್ತುತ್ತಿರುವುದು, ಉನ್ಮಾದದ ವಿಷ ಹಂಚುತ್ತಿರುವುದು ದೊಡ್ಡ ವಿಪರ್ಯಾಸ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆರ್.ಜೀವಿ

contributor

Similar News