ಸನಾತನಿ ಅಜೆಂಡಾ ಈ ದೇಶದ ಸಾಮಾಜಿಕತೆಯ ಜೇನುಗೂಡನ್ನು ನಾಶಗೊಳಿಸುತ್ತಿದೆಯೇ?
ಕಳೆದ ವಾರ ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆದ ಆಘಾತಕಾರಿ ಘಟನೆ ನಡೆಯಿತು. ಗವಾಯಿಯವರು ಸ್ವಲ್ಪವೂ ವಿಚಲಿತರಾಗದೆ, ಏನೂ ನಡೆದೇ ಇಲ್ಲವೆನ್ನುವಂತೆ ಕಲಾಪ ಮುಂದುವರಿಸಿದರು ಮತ್ತು ಕಡೆಗೆ ಆತನಿಗೆ ಶಿಕ್ಷೆಯಾಗುವುದನ್ನು ಕೂಡ ಅವರು ಬಯಸಲಿಲ್ಲ. ಆದರೆ ಈ ಘಟನೆ ದೇಶದಲ್ಲಿ ಹೇಗೆ ಸನಾತನಿಗಳು ಮತ್ತು ಮನುವಾದಿಗಳು ಯಾವ ಮುಚ್ಚುಮರೆಯಿಲ್ಲದೆ ತಮ್ಮನ್ನು ತೋರಿಸಿಕೊಳ್ಳುತ್ತಿದ್ದಾರೆ ಮತ್ತು ಒಂದೆಡೆ ದಲಿತರನ್ನೂ ಇನ್ನೊಂದೆಡೆ ಸಂವಿಧಾನ, ನ್ಯಾಯಾಂಗ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೂ ನೇರವಾಗಿ ವಿರೋಧಿಸಲು ನಿಂತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಅಕ್ಟೋಬರ್ 6ರಂದು ಸುಪ್ರೀಂ ಕೋರ್ಟ್ ಕಲಾಪ ನಡೆಯುತ್ತಿದ್ದಾಗ ಒಂದು ವಿಲಕ್ಷಣ ಘಟನೆ ನಡೆಯಿತು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠ ಪ್ರಕರಣಗಳ ವಿಚಾರಣೆ ನಡೆಸುತ್ತಿತ್ತು. ಇದ್ದಕ್ಕಿದ್ದಂತೆ, ಪೀಠದ ಮುಂದೆ ಬಂದ ರಾಕೇಶ್ ಕಿಶೋರ್ ಎಂಬ 71 ವರ್ಷದ ವಕೀಲ, ಸನಾತನ ಧರ್ಮಕ್ಕೆ ಅಪಮಾನವಾದರೆ ಸಹಿಸಲಾರೆ ಎಂದು ಘೋಷಣೆ ಕೂಗಿ, ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಪೀಠದತ್ತಲೇ ಶೂ ಎಸೆದಿದ್ದಾನೆ. ಶೂ ಸಿಜೆಐ ಪೀಠದಿಂದ ಸ್ವಲ್ಪ ದೂರದಲ್ಲಿ ಬಿದ್ದಿದೆ. ಆದರೆ, ಈ ಘಟನೆಯಿಂದ ಸಿಜೆಐ ಗವಾಯಿ ವಿಚಲಿತರಾಗಲಿಲ್ಲ. ವಾದ ಮುಂದುವರಿಸುವಂತೆ ವಕೀಲರಿಗೆ ಸೂಚಿಸಿದರು. ‘‘ಇಂಥ ಘಟನೆಗಳಿಂದ ನಾನು ವಿಚಲಿತನಾಗುವುದಿಲ್ಲ, ನೀವೂ ವಿಚಲಿತರಾಗಬೇಡಿ’’ ಎಂದು ಅವರು ಆನಂತರ ಪ್ರತಿಕ್ರಿಯಿಸಿದರು. ಈ ಘಟನೆ ಇವತ್ತಿನ ಭಾರತವನ್ನು ಆವರಿಸಿರುವ ಅತ್ಯಂತ ಅಸ್ವಸ್ಥ ಮನಸ್ಥಿತಿ ಯೊಂದರ ಸ್ಪಷ್ಟ ನಿದರ್ಶನವಾಗಿದೆ. ಮತ್ತದು ಸ್ವಾಯತ್ತ ಸಂಸ್ಥೆಗಳ ಅಸ್ಮಿತೆಯನ್ನೇ ನಾಶಗೈದಿರುವ ಇವತ್ತಿನ ರಾಜಕೀಯದ ಮತ್ತೊಂದು ಮುಖದಂತೆಯೇ ಕಾಣಿಸುತ್ತಿದೆ. ದ್ವೇಷದ ಸ್ವರೂಪ ಹೇಗೆಲ್ಲ ಇರಬಹುದು ಮತ್ತು ಅದೆಷ್ಟು ವಿಕೃತವಾಗಿ ಆಕ್ರಮಿಸಬಲ್ಲದು ಎಂಬುದು ಈ ಘಟನೆಯಲ್ಲಿ ಕಾಣಿಸಿದೆ.
ಖಜುರಾಹೋದಲ್ಲಿ ಇತಿಹಾಸ ಪ್ರಸಿದ್ಧ ಪುರಾತನ ವಿಷ್ಣುವಿನ 7 ಅಡಿ ಎತ್ತರದ ಶಿರಚ್ಛೇದಿತ ವಿಗ್ರಹ ಪುನಃಸ್ಥಾಪನೆಗೆ ಕೋರಿ ಸಲ್ಲಿಸಲಾಗಿದ್ದ ಪಿಐಎಲ್ ಅನ್ನು ಸಿಜೆಐ ಗವಾಯಿ ಅವರು ತಿರಸ್ಕರಿಸಿದ್ದರು. ನೀವು ಹೋಗಿ ಈಗ ನಿಮ್ಮ ದೇವರನ್ನೇ ಏನಾದರೂ ಮಾಡುವಂತೆ ಕೇಳಿಕೊಳ್ಳಿ. ನೀವು ವಿಷ್ಣುವಿನ ಕಟ್ಟಾ ಭಕ್ತ ಎಂದು ಹೇಳುತ್ತೀರಿ. ಆದ್ದರಿಂದ ಈಗಲೇ ಹೋಗಿ ಪ್ರಾರ್ಥಿಸಿ ಎಂದು ಹೇಳಿದ್ದರು. ಇದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಸಂರಕ್ಷಣೆಯಲ್ಲಿರುವ ಸ್ಥಳ. ಹೀಗಾಗಿ ಎಎಸ್‌ಐ ಬಳಿಯೇ ನೀವು ಮನವಿ ಮಾಡಿ ಎಂದು ಸೆಪ್ಟಂಬರ್‌ನಲ್ಲಿ ಗವಾಯಿ ಅರ್ಜಿ ತಿರಸ್ಕರಿಸಿದ್ದರು. ಗವಾಯಿ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳೂ ಬಂದಿದ್ದವು. ಆದರೆ, ಅದಕ್ಕೆ ಪ್ರತಿಕ್ರಿಯಿಸಿದ್ದ ಗವಾಯಿ, ‘‘ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ನನ್ನ ಹೇಳಿಕೆಯನ್ನು ಸಾಮಾಜಿಕ ಮಧ್ಯಮದಲ್ಲಿ ತಪ್ಪಾಗಿ ಚಿತ್ರಿಸಲಾಗಿದೆ’’ ಎಂದಿದ್ದರು. ಇದೆಲ್ಲವನ್ನೂ ಮೀರಿ, ಕಡೆಗೆ ಅವರ ಮೇಲೆಯೇ ದ್ವೇಷ ಸಾಧಿಸಲು ನೋಡಲಾಯಿತೆನ್ನುವುದು ನಾರುತ್ತಿರುವ ಮನಃಸ್ಥಿತಿಯ ಪರಾಕಾಷ್ಠೆಯಾಗಿದೆ.
ಈ ಘಟನೆಯ ನಂತರದ ಬೆಳವಣಿಗೆ ಇನ್ನೂ ಆಘಾತಕಾರಿ. ಶೂ ಎಸೆದ ವಕೀಲನನ್ನು ದಿಲ್ಲಿ ಪೊಲೀಸರು ಬಿಡುಗಡೆ ಮಾಡಿದ ಬಳಿಕ ಮಾಧ್ಯಮಗಳು ಅವನೊಬ್ಬ ಹೀರೊ ಎಂಬಂತೆ ಸಂದರ್ಶನ ಮಾಡಿದವು ಮತ್ತು ಆತನ ಪ್ರತಿಪಾದನೆಗೆ ಸಾಕಷ್ಟು ಜಾಗ ಕೊಟ್ಟವು. ಆತ ತಾನು ಮಾಡಿದ್ದು ಸರಿ ಎಂದು ಸಮರ್ಥಿಸಿಕೊಂಡದ್ದು ಮಾತ್ರವಲ್ಲದೆ, ಯಾವುದೇ ಪಶ್ಚಾತ್ತಾಪವಿಲ್ಲ, ಕ್ಷಮೆ ಕೇಳುವುದಿಲ್ಲ ಎಂದದ್ದು ದೊಡ್ಡ ಸುದ್ದಿಯಾಯಿತು. ನ್ಯಾಯಮೂರ್ತಿ ಗವಾಯಿಯವರು ದಲಿತರೇ ಅಲ್ಲ ಎನ್ನುವಲ್ಲಿಯವರೆಗೂ ಆ ವಕೀಲ ಮಾತನಾಡಿದ್ದನ್ನು ಮಾಧ್ಯಮಗಳು ವಿಶೇಷ ಒತ್ತುಕೊಟ್ಟು ಪ್ರಸಾರ ಮಾಡುವಾಗ, ಆತ ನ್ಯಾಯಾಂಗ ಮತ್ತು ಸಂವಿಧಾನದ ಘನತೆಯನ್ನೇ ಕಳೆಯುವ ಕೆಲಸ ಮಾಡಿರುವುದು ಗೌಣವಾಯಿತು. ಆತನ ಸನಾತನಿ ನಿಲುವಿಗೆ ದೇಶದೆಲ್ಲೆಡೆ ವ್ಯಾಪಕ ಬೆಂಬಲ ಸಿಕ್ಕಿತು. ಇಡೀ ಮೋದಿ ಸರಕಾರ ಇದೆಲ್ಲವನ್ನೂ ಮೌನವಾಗಿ ಕೂತು ಸಂಭ್ರಮಿಸಿತು ಎನ್ನುವುದರಲ್ಲಿ ಅನುಮಾನವಿಲ್ಲ.
ಹೆಚ್ಚುಕಡಿಮೆ ಇದೇ ಹೊತ್ತಲ್ಲಿ ಹರ್ಯಾಣದ ಐಪಿಎಸ್ ಅಧಿಕಾರಿ ತನ್ನ ಹಿರಿಯ ಅಧಿಕಾರಿಗಳು ಜಾತಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇದಕ್ಕೂ ಮುನ್ನ ನ್ಯಾಯಮೂರ್ತಿ ಗವಾಯಿಯವರ ತಾಯಿ ಕಮಲಾತಾಯಿ ಆರೆಸ್ಸೆಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿರಾಕರಿಸಿ, ಉದ್ದಕ್ಕೂ ತಮ್ಮ ಕುಟುಂಬ ನಂಬಿಕೊಂಡು ಬಂದಿದ್ದ ಅಂಬೇಡ್ಕರ್‌ವಾದಿ ಮೌಲ್ಯಗಳ ಬಗ್ಗೆ ಮತ್ತೊಮ್ಮೆ ಮಾತಾಡಿದ್ದರು.
ಬಿಜೆಪಿ ಮತ್ತದರ ಬೇರಿನಂತಿರುವ ಆರೆಸ್ಸೆಸ್ ವಿವೇಕಾನಂದ, ಅಂಬೇಡ್ಕರ್ ಸೇರಿದಂತೆ ಸಮಾಜ ಸುಧಾರಕರನ್ನು ಮತ್ತವರ ಹಾದಿಯಲ್ಲಿ ನಡೆದು ದೊಡ್ಡ ಗುರುತು ಮೂಡಿಸಿದವರನ್ನು ಹೈಜಾಕ್ ಮಾಡುತ್ತಲೇ ಬಂದಿದೆ ಮತ್ತು ಯಾವ್ಯಾವಾಗೆಲ್ಲ ಅದರಲ್ಲಿ ವಿಫಲವಾಗುತ್ತದೆಯೋ ಆಗೆಲ್ಲ ಅದು ಈಗ ಆಗಿರುವಂತೆ ಆ ಸನಾತನಿ ವಕೀಲನಂಥವರ ಮೂಲಕ ತನ್ನ ಸಂದೇಶವನ್ನು ರವಾನಿಸಲು ಮುಂದಾಗುತ್ತದೆ. ಅಂಬೇಡ್ಕರ್ ಅವರನ್ನು ಅವಮಾನಿಸುತ್ತಲೇ, ತನ್ನ ಸಮರ್ಥನೆಗೆ ಬೇಕಾದಾಗ ಅವರನ್ನು ಉಲ್ಲೇಖಿಸುತ್ತದೆ. ಗಾಂಧಿಯನ್ನು ಹಳಿಯುತ್ತಲೇ, ಗಾಂಧಿ ಹಂತಕನನ್ನು ಬಹಿರಂಗವಾಗಿ ಪೂಜಿಸುತ್ತಲೇ ತಾನು ಏನನ್ನು ಬಯಸುತ್ತಿದ್ದೇನೆ ಎಂಬುದನ್ನು ತೋರಿಸುತ್ತದೆ. ಒಂದು ಕಾಲದಲ್ಲಿ ಮನುಸ್ಮತಿ ಮೂಲದ ಸಾಮಾಜಿಕ ಶ್ರೇಣಿಗಳ ಬಗ್ಗೆ ಬಹಿರಂಗವಾಗಿ ಹೇಳಲು ಹಿಂಜರಿಯುತ್ತಿದ್ದವರು, ಜಾತಿ ತಾರತಮ್ಯ ಮಾಡಲು ಹಿಂದೆಮುಂದೆ ನೋಡುತ್ತಿದ್ದವರು ಈಗ ಯಾವುದೇ ಮುಲಾಜಿಲ್ಲದೆ ಆ ಕೆಲಸಕ್ಕೆ ಇಳಿದುಬಿಟ್ಟಿದ್ದಾರೆ. ಸನಾತನಿ ಎಂದು ಹೇಳಿಕೊಳ್ಳಲು ಹೆಮ್ಮೆಪಡುವ ಅಂಥವರು ಈಗ ಎಲ್ಲೆಲ್ಲೂ ವ್ಯಾಪಿಸಿದ್ದಾರೆ ಮತ್ತು ಅವರೇ ಸಿಜೆಐ ಮೇಲೆ ಶೂ ಎಸೆದ ಅದೇ ಸನಾತನಿ ವಕೀಲನನ್ನು ಮೆರೆಸುತ್ತಿದ್ದಾರೆ.
ಶೂ ಎಸೆತ ಪ್ರಕರಣ ಸ್ಪಷ್ಟವಾಗಿ ಬಿಂಬಿಸುತ್ತಿರುವ ಅಂಶಗಳೆಂದರೆ, ಸನಾತನ ಎಂಬುದರ ಉಲ್ಲೇಖದೊಂದಿಗೆ ಗಮನ ಸೆಳೆಯುವ ಮತ್ತು ಅದನ್ನು ಧರ್ಮಕ್ಕಾಗಿ, ದೇವರಿಗಾಗಿ ಮಾಡುತ್ತಿದ್ದೇನೆ ಎಂದು ಬಿಂಬಿಸಿಕೊಳ್ಳುವ ತೋರ್ಪಡಿಸುವಿಕೆ; ದಲಿತರು ನ್ಯಾಯಾಂಗದ ಅಥವಾ ಇನ್ನಾವುದೇ ಅತ್ಯುನ್ನತ ಹುದ್ದೆಗೆ ಏರುವುದರ ಬಗೆಗಿನ ತೀವ್ರ ಅಸಹನೆ; ದಲಿತರು ಪ್ರತಿಭಾವಂತರೆಂದು ಒಪ್ಪಿಕೊಳ್ಳಲಾಗದ, ಅವರೇನಿದ್ದರೂ ಕೋಟಾದಿಂದ ಮೇಲೆ ಬಂದವರು ಎಂದು ಕಡೆಗಣಿಸಿ ನೋಡುವ ಮನಸ್ಥಿತಿ; ಶತಮಾನಗಳಿಂದ ತಮ್ಮ ಅಡಿಯಾಳುಗಳಾಗಿದ್ದವರು ಈಗ ತಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ ಎನ್ನುವಂತೆ ದಲಿತರನ್ನು ದ್ವೇಷದ ಕಣ್ಣುಗಳಿಂದ ನೋಡುವ ಪೂರ್ವಾಗ್ರಹ; ಮತ್ತು ಅವರು ತಮ್ಮ ಮಾತನ್ನು ಕೇಳುತ್ತಿಲ್ಲ ಮತ್ತು ತಮ್ಮ ಸನಾತನ ನಂಬಿಕೆಯನ್ನು ಒಡೆಯುವ ಅಪಾಯಕಾರಿ ಸ್ಪರ್ಧಿಗಳಾಗಿದ್ದಾರೆ ಎಂಬ ಭಯ.
ಸನಾತನ ಎಂಬುದು ಮತ್ತೆ ಮತ್ತೆ ಕೇಳಿಸುವ ಮಟ್ಟಿನ ಪದವಾಗಿ ಮುನ್ನೆಲೆಗೆ ಬಂದಿರುವುದು ತೀರಾ ಇತ್ತೀಚೆಗೆ. 2019ರಲ್ಲಿ ಬಿಜೆಪಿ ಮತ್ತೊಮ್ಮೆ ಗೆದ್ದ ನಂತರ ಭಾರತದಲ್ಲಿ ಸನಾತನ ಧರ್ಮ ಪದ ಜನಪ್ರಿಯತೆ ಗಳಿಸಿದೆ. ಈ ಪದ ಹೆಚ್ಚಾಗಿ ಕಿವಿ ಮೇಲೆ ಬೀಳುತ್ತಿರುವುದು 2022ರ ನಂತರದಿಂದ ಶುರುವಾಗಿದೆ. ವಾಸ್ತವವಾಗಿ, ಇದನ್ನೇ ಭಾರತದ ಅವಿಭಾಜ್ಯ ಅಂಶವಾಗಿಸುವ ಪ್ರಯತ್ನ ಈಗಿನಿಂದಲ್ಲ, ಆರೆಸ್ಸೆಸ್ ಸ್ಥಾಪನೆಗೂ ಮುಂಚೆ ಅದಕ್ಕೆ ಪ್ರೇರಣೆಯಾದವರಿಂದಲೇ ಶುರುವಾಯಿತೆನ್ನುವುದು ರಹಸ್ಯವೇನಲ್ಲ. ಆರೆಸ್ಸೆಸ್ ಗುರಿಯಾದ ಹಿಂದೂ ರಾಷ್ಟ್ರ ಸ್ಥಾಪನೆ, ಅದು ಭಾರತದ ತ್ರಿವರ್ಣಧ್ವಜಕ್ಕೆ ನಿಷ್ಠವಾಗಿರುವುದಕ್ಕಿಂತಲೂ ಭಗವಾಧ್ವಜಕ್ಕೇ ಹೆಚ್ಚು ಬದ್ಧವಾಗಿರುವುದು, ಅಯೋಧ್ಯೆ, ಕಾಶಿ, ಮಥುರಾಗಳ ಬಗೆಗಿನ ಅದರ ಅಜೆಂಡಾಗಳು ಇವೆಲ್ಲದರ ಹಿಂದೆ ಇರುವುದು ಇದೇ ಸನಾತನ ತವಕ. ಹಾಗಾಗಿಯೇ ಅದು ಭಾರತದ ಸಂವಿಧಾನವನ್ನು ಆರಂಭದಿಂದಲೂ ಒಪ್ಪಿಲ್ಲ ಮತ್ತು ಈಗ ತನ್ನದೇ ರಾಜಕೀಯ ಆಯುಧವಾಗಿರುವ ಬಿಜೆಪಿಯ ಮೂಲಕ ಸಂವಿಧಾನವನ್ನು ಬದಲಿಸಲು, ತಾನು ನಂಬುವ ಮನುಸ್ಮತಿಯ ಪ್ರತಿಪಾದನೆಗಳನ್ನು ಮುನ್ನೆಲೆಗೆ ತರಲು ನೋಡುತ್ತಿದೆ. ಬಿಜೆಪಿ ಅದನ್ನು ತನ್ನ ಅಧಿಕಾರ ಬಲದಿಂದ ಸಾಧಿಸಲು ಯತ್ನಿಸುತ್ತಿದೆ ಮತ್ತು ವಿಫಲವಾದಾಗಿನ ಹತಾಶೆಯ ಹೊತ್ತಲ್ಲೆಲ್ಲ ಈಗಿನ ಶೂ ಎಸೆತದಂಥ ಘಟನೆಗಳನ್ನು, ಒಂದೇ ಪ್ರೇರೇಪಿಸುವ ಇಲ್ಲವೇ ಮೌನವಾಗಿ ಬೆಂಬಲಿಸುವ ಮೂಲಕ ಗೊಂದಲ ಮೂಡಿಸುತ್ತದೆ. ಗೊಂದಲದ ವಾತಾವರಣ ಸೃಷ್ಟಿಸಿಯೇ, ಆ ತಳಮಳದ ಹೊತ್ತಿನಲ್ಲೇ ತನ್ನ ಗೆಲುವನ್ನು ಸಾಧಿಸಿಕೊಳ್ಳುವ ಕೊಳಕು ತಂತ್ರವನ್ನು ಅದು ಯಾವತ್ತಿನಿಂದಲೂ ರೂಢಿಸಿಕೊಂಡು ಬಂದಿದೆ.
ಬಿಜೆಪಿಯ ಈ ಆರೆಸ್ಸೆಸ್ ಆಯುಧದ ಸ್ವರೂಪವನ್ನು ನಾವು ಗುಜರಾತ್ ರಾಜ್ಯದಲ್ಲಿನ ಮೋದಿ ಆಳ್ವಿಕೆಯ ಕಾಲದಿಂದ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಗುಜರಾತ್ ಹತ್ಯಾಕಾಂಡವಾದಾಗ, ರಾಜಧರ್ಮವನ್ನು ಪಾಲಿಸಬೇಕೆಂಬ ವಾಜಪೇಯಿಯವರ ಪ್ರತಿಪಾದನೆಯನ್ನು ಮೀರಿ ಆಗಿನ ಗುಜರಾತ್ ಮುಖ್ಯಮಂತ್ರಿ ಮೋದಿ ನಿರಾಳವಾಗಿರಲು ಕಾರಣವಾದದ್ದು ಅದೇ ಆರೆಸ್ಸೆಸ್ ಬಲ. ಅವರ ಆಡಳಿತದಡಿಯ ಗುಜರಾತ್ ಸನಾತನ ಸ್ವರೂಪದ ಅಜೆಂಡಾ ಜಾರಿಗೊಳಿಸುವ ಒಂದು ಪ್ರಯೋಗಾಲಯವೇ ಆಗಿ ಮಾರ್ಪಟ್ಟಿತ್ತು ಎಂಬುದು ಸ್ಪಷ್ಟ. ಸನಾತನ ಜಾಯಮಾನವನ್ನು ಎಲ್ಲೆಂದರಲ್ಲಿ ತೂರಿಸಲು ಇರುವ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳಲಾಗಿದೆ. ಈಗಲೂ ಪಠ್ಯ ರಚನೆ ಸೇರಿದಂತೆ ಶೈಕ್ಷಣಿಕ ಕ್ರಮಗಳು, ಪ್ರಮುಖ ಅಂತರ್‌ರಾಷ್ಟ್ರೀಯ ಸಮ್ಮೇಳನಗಳು, ಹಿಂದೂ ಮತ್ತು ಭಾರತೀಯ ಸಂಪ್ರದಾಯಗಳ ನಿರಂತರ ಪ್ರಚಾರ ಇವೆಲ್ಲವೂ ಸನಾತನ ಅನುಷ್ಠಾನ ಅಜೆಂಡಾದ ಭಾಗಗಳೇ ಆಗಿವೆ. ಮತ್ತಿವು ಹೆಚ್ಚಾಗಿ ಪ್ರಧಾನಿ ಮೋದಿಯವರ ರಾಜಕೀಯ ಗುರುತಿನೊಂದಿಗೆ ಇರುತ್ತವೆ. ಪ್ರಾಚೀನ ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ಆಧುನಿಕ ಶಿಕ್ಷಣ ನೀತಿ ಸೇರಿದಂತೆ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸೇರಿಸುವುದು ನಡೆಯುತ್ತಲೇ ಇದೆ. ಪಠ್ಯಕ್ರಮಗಳಲ್ಲಿ ಉಪನಿಷತ್ತುಗಳು ಮತ್ತು ಭಗವದ್ಗೀತೆಯಂತಹ ಗ್ರಂಥಗಳ ವಿಚಾರಗಳನ್ನು ತರುವುದು ದೇಶದ ಶಕ್ತಿಯಾದ ಜಾತ್ಯತೀತ ನೆಲೆಯನ್ನೇ ದುರ್ಬಲಗೊಳಿಸುವ ತಂತ್ರವಾಗಿದೆ. ಇಂಥ ಎಲ್ಲ ನಡೆಗಳ ಮೂಲಕ ಪರೋಕ್ಷವಾಗಿ ಸನಾತನದ ಪ್ರತಿಪಾದನೆಯಲ್ಲಿ ತೊಡಗಿದ್ದ ಮೋದಿ ಕಡೆಗೆ ಒಂದು ಹಂತದಿಂದ ಸ್ವತಃ ಬಹಿರಂಗವಾಗಿಯೇ ಸನಾತನವನ್ನು ಬೆಂಬಲಿಸಿ ಮಾತಾಡಲು ಇಳಿದದ್ದು 2023ರಲ್ಲಿ. ಅದು ಉದಯನಿಧಿ ಸ್ಟಾಲಿನ್ ನೆಪದಲ್ಲಿನ ಇಡೀ ಸನಾತನ ವಿರೋಧಿ ನಿಲುವಿನ ವಿರುದ್ಧದ ಅವರ ಆಕ್ರಮಣವಾಗಿತ್ತು.
ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಸೊಳ್ಳೆಗಳು, ಡೆಂಗ್, ಮಲೇರಿಯಾ ಮತ್ತು ಕೊರೋನಕ್ಕೆ ಸಮೀಕರಿಸಿ ಮಾತನಾಡಿದ್ದರು. ಬಿಜೆಪಿ ನಾಯಕರೆಲ್ಲ ಉದಯನಿಧಿ ಹೇಳಿಕೆಯನ್ನು ನಮ್ಮ ಧರ್ಮದ ಮೇಲಿನ ದಾಳಿ ಎಂದಿದ್ದರು. ಅವರೆಲ್ಲ ತಮ್ಮ ಧರ್ಮ ಎನ್ನುವಾಗ, ಈ ದೇಶ ಯಾವಾಗಿನಿಂದ ಬಹುತ್ವವನ್ನು ಕಳೆದುಕೊಂಡಿತು ಎಂದು ಕೇಳಿಕೊಳ್ಳುವ ಹಾಗಿತ್ತು. ಉದಯನಿಧಿ ಹೇಳಿಕೆಗೆ ಪ್ರತಿಕ್ರಿಯಿಸುತ್ತ ಆಗ ಮೋದಿ ವಿರೋಧಪಕ್ಷಗಳ ಮೇಲೆ ಹರಿಹಾಯ್ದಿದ್ದರು. ಸಾವಿರಾರು ವರ್ಷಗಳಿಂದ ಭಾರತವನ್ನು ಒಂದುಗೂಡಿಸಿದ ಕಲ್ಪನೆ, ಸಂಸ್ಕಾರಗಳು ಮತ್ತು ಸಂಪ್ರದಾಯಗಳನ್ನು ನಾಶಪಡಿಸುವುದು ಅವರ ಉದ್ದೇಶವಾಗಿದೆ ಎಂದಿದ್ದರು. ವಿರೋಧ ಪಕ್ಷಗಳು ಸನಾತನ ಧರ್ಮವನ್ನು ಒಡೆಯಲು ಬಯಸುತ್ತವೆ ಎಂದು ಮೋದಿ ಆಕ್ಷೇಪಿಸಿದ್ದರು. ಆಗಿನಿಂದಲೂ ಸನಾತನ ಎಂಬುದು ಹೆಚ್ಚು ವ್ಯಾಪಕವಾಗಿ ಬಳಕೆಯಾಗತೊಡಗಿದೆ.
ವಾಸ್ತವದಲ್ಲಿ, 19ನೇ ಶತಮಾನದ ವಸಾಹತುಶಾಹಿ ಭಾರತದಲ್ಲಿ ಆರ್ಯ ಸಮಾಜ ಬಯಸಿದ ಧಾರ್ಮಿಕ ಸುಧಾರಣೆಗಳಿಗೆ ವಿರುದ್ಧವಾಗಿ ಸನಾತನ ಧರ್ಮ ಕಲ್ಪನೆ ಹುಟ್ಟಿತು. ಅದರ ಮುಖ್ಯ ನಿಲುವುಗಳಲ್ಲಿ ಒಂದೆಂದರೆ, ಹಿಂದೂ ಗ್ರಂಥಗಳಲ್ಲಿನ ಜಾತಿ ಶ್ರೇಣಿಯನ್ನು ಅನುಸರಿಸುವುದು. ಪ್ರಧಾನಿಯಾಗಿ ಮೋದಿ ತಮ್ಮ ಸಾಂವಿಧಾನಿಕ ಸ್ಥಾನಕ್ಕಿಂತ ಧಾರ್ಮಿಕ ಸಿದ್ಧಾಂತದ ಅಧಿಕಾರ ಎತ್ತಿಹಿಡಿಯಲು ಎಲ್ಲ ಅವಕಾಶಗಳನ್ನೂ ಬಳಸಿಕೊಂಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡಿದಾಗ, ಹೊಸ ಸಂಸತ್ತಿನ ಕಟ್ಟಡವನ್ನು ಉದ್ಘಾಟಿಸುವಾಗ ಪುರೋಹಿತರ ಮೆರವಣಿಗೆ ನಡೆಸಿದಾಗ ಅಥವಾ ವಾರಣಾಸಿಯಲ್ಲಿ ಗಂಗಾ ನದಿಯ ದಡದಲ್ಲಿ ಆರತಿ ಮಾಡಿದಾಗ ಇದು ಸ್ಪಷ್ಟವಾಗಿತ್ತು. ವಾರಣಾಸಿಯ ಕಾಶಿ ವಿಶ್ವನಾಥ, ಉಜ್ಜಯಿನಿ ಮತ್ತು ಕೇದಾರನಾಥದಲ್ಲಿನ ಜ್ಯೋತಿರ್ಲಿಂಗ ದೇವಾಲಯಗಳಂತಹ ಹಿಂದೂ ದೇವಾಲಯಗಳ ಪುನರ್‌ನಿರ್ಮಾಣ ಮತ್ತು ನವೀಕರಣಕ್ಕೆ ಮೋದಿ ಸರಕಾರ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದೆ. ಮೋದಿಯ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನಿರ್ಧಾರಗಳಿಗೂ ಹಿಂದೂ ಧರ್ಮಶಾಸ್ತ್ರದ ಲೇಪ ಕೊಡಲಾಗುತ್ತದೆ ಎಂದರೆ ಉತ್ಪ್ರೇಕ್ಷೆಯಲ್ಲ.