‘ಗ್ರೇಟರ್ ಬೆಂಗಳೂರು’ ಸಾಧಿಸಿದ್ದೇನು? ಸಾಧಿಸಬೇಕಾಗಿರುವುದೇನು?
ಭಾಗ - 2
ಭವಿಷ್ಯದ ನಿರ್ಮಾಣ ಯೋಜನೆಗಳನ್ನು ಸಂಚಾರ ಮೌಲ್ಯಮಾಪನ ಮತ್ತು ಅವು ಸಾಕಷ್ಟು ಪಾರ್ಕಿಂಗ್ ಒದಗಿಸುತ್ತವೆ ಎಂದು ಖಾತರಿಪಡಿಸಿಕೊಂಡ ನಂತರವೇ ಒಪ್ಪಬೇಕು ಎಂಬುದು ತಜ್ಞರ ಸಲಹೆ. ಈಗಾಗಲೇ ಬೆಂಗಳೂರಿನಲ್ಲಿ ಅಂತರ್ಜಲಮಟ್ಟ 900 ಅಡಿಗೆ ಕುಸಿದು ಹೋಗಿದೆ. ಇನ್ನಾದರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮಳೆಕೊಯ್ಲು ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕಾರ್ಯಕ್ರಮಗಳನ್ನು ರೂಪಿಸುವುದು ಅಗತ್ಯವಿದೆ.
ಹೀಗೆಲ್ಲ ಇರುವಾಗಲೇ, ಬಿಬಿಎಂಪಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಸೆಪ್ಟಂಬರ್ 2ರಿಂದಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಸ್ತಿತ್ವಕ್ಕೆ ಬಂದಿದೆ. ಇದರೊಂದಿಗೆ, ಇಡೀ ಬೆಂಗಳೂರು 5 ನಗರ ಪಾಲಿಕೆಗಳಲ್ಲಿ ವಿಭಜನೆಯಾಗುತ್ತಿದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಪೂರ್ವ ಹಾಗೂ ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆಗಳ ಮೂಲಕ ಇಡೀ ಬೆಂಗಳೂರಿನ ಸ್ವರೂಪವೇ ಬದಲಾಗುತ್ತಿದೆ. ಆದರೆ, ಬಿಬಿಎಂಪಿ ಹೋಗಿ ಗ್ರೇಟರ್ ಬೆಂಗಳೂರು ಆಗುತ್ತಲೇ ಎಲ್ಲವೂ ಸುಧಾರಿಸಿಬಿಡುತ್ತದೆ, ಅಭಿವೃದ್ಧಿಯ ದಿಕ್ಕೇ ಬದಲಾಗುತ್ತದೆ ಎಂದೇನೂ ಅಲ್ಲ.
ಈ ನಡುವೆ, ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರಸ್ತಾಪಿತವಾಗಿರುವ ಯೋಜನೆಗಳ ದೊಡ್ಡ ಪಟ್ಟಿಯೇ ಇದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಸುರಂಗ ರಸ್ತೆಗಳು, ಡಬಲ್ ಡೆಕ್ಕರ್ ಫ್ಲೈಓವರ್‌ಗಳು, ಬಫರ್ ರಸ್ತೆಗಳು, ಎಲಿವೇಟೆಡ್ ಕಾರಿಡಾರ್‌ಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳು ಈಗ ಎದುರಲ್ಲಿವೆ.
ಸುರಂಗ ರಸ್ತೆ ಜಾಲ
ಬೆಂಗಳೂರಿನ 11 ಹೈ ಡೆನ್ಸಿಟಿ ಕಾರಿಡಾರ್‌ಗಳನ್ನು ಜೋಡಿಸುವ ಗುರಿ ಹೊಂದಿರುವ 191 ಕಿ.ಮೀ. ಉದ್ದದ ಸುರಂಗ ರಸ್ತೆ ಜಾಲ ಯೋಜನೆ ನಗರದ ರಸ್ತೆಗಳ ದಟ್ಟಣೆ ಕಡಿಮೆ ಮಾಡಲು ದೊಡ್ಡ ಪರಿಹಾರ ಎನ್ನಲಾಗಿದೆ. ಮೊದಲ ಹಂತದಲ್ಲಿ ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗೂ ಟನಲ್ ರಸ್ತೆ ಆರಂಭಿಸಲು ನಿರ್ಧರಿಸಲಾಗಿದೆ. ಇದು ಒಟ್ಟು 16.74 ಕಿ.ಮೀ. ಉದ್ದದ ಸುರಂಗ ರಸ್ತೆಯಾಗಿದ್ದು, 2 ಪ್ಯಾಕೇಜ್ ರೂಪಿಸಲಾಗಿದೆ. ಒಂದು, ಹೆಬ್ಬಾಳದ ಎಸ್ಟಿಮ್ ಮಾಲ್‌ನಿಂದ ಶೇಷಾದ್ರಿ ರಸ್ತೆಯ ರೇಸ್ ಕೋರ್ಸ್ ಜಂಕ್ಷನ್‌ವರೆಗೆ 8.74 ಕಿ.ಮೀ. ಇನ್ನೊಂದು, ಶೇಷಾದ್ರಿ ರಸ್ತೆಯ ರೇಸ್‌ಕೋರ್ಸ್ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ 7.99 ಕಿ.ಮೀ. ಉದ್ದದ ಸುರಂಗ ರಸ್ತೆ. ಆದರೆ ಈ ಯೋಜನೆ ಕಷ್ಟಕರ ಮತ್ತು ದುಬಾರಿಯಾಗಿದ್ದು, ಇದರ ವ್ಯಾಪ್ತಿಯಲ್ಲಿನ ಅಸ್ತಿತ್ವದಲ್ಲಿರುವ ನಿರ್ಮಾಣಗಳಿಗೆ ಅಪಾಯಕಾರಿ ಎಂಬ ಆತಂಕವೆದ್ದಿದೆ. ಮಣ್ಣು ಸಡಿಲಗೊಳ್ಳುವುದರಿಂದ ಈ ಭಾಗದ ಭೂ ಪ್ರದೇಶ ಅಸ್ಥಿರತೆಗೆ ಒಳಗಾಗಬಹುದು ಎನ್ನಲಾಗಿದೆ. ಅಲ್ಲದೆ ಪರಿಸರ ಕಾಳಜಿಯನ್ನು ಕೂಡ ಹುಟ್ಟುಹಾಕಿದೆ. ಕಂದಕಗಳು ಮತ್ತು ಭೂಕುಸಿತಗಳು ಹೆಚ್ಚುವ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ನಡುವಿನ (ಉತ್ತರ-ದಕ್ಷಿಣ ಸುರಂಗ) ಅತಿ ಉದ್ದದ ಸುರಂಗ ರಸ್ತೆ ಯೋಜನೆಗೆ ಬೆಂಗಳೂರು ಸಿದ್ಧತೆ ನಡೆಸುತ್ತಿರುವಾಗ, ಪರಿಸರ ಪರಿಣಾಮ ಮೌಲ್ಯಮಾಪನವನ್ನು ನಿರ್ಲಕ್ಷಿಸಿದರೆ, ನಗರದಲ್ಲಿ ಭೌಗೋಳಿಕ ಅಪಾಯಗಳು, ನೀರಿನ ನಷ್ಟ ಮತ್ತು ಸುರಕ್ಷತಾ ಸಮಸ್ಯೆ ಉಂಟಾಗಬಹುದು ಎಂಬುದು ಪರಿಸರ ತಜ್ಞರ ಆತಂಕವಾಗಿದೆ.
ಡಬಲ್ ಡೆಕ್ಕರ್ ಫ್ಲೈಓವರ್‌ಗಳು
ಬೆಂಗಳೂರಿನಲ್ಲಿ ಮುಂಬರುವ ಎಲ್ಲಾ ಮೆಟ್ರೋ ಮಾರ್ಗಗಳನ್ನು 9,800 ಕೋಟಿ ರೂ. ವೆಚ್ಚದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆಗಳ ಭಾಗವಾಗಿ ನಿರ್ಮಿಸಲು ಸರಕಾರ ನಿರ್ಧರಿಸಿದೆ. ಮೆಟ್ರೊಗೆ ಮೇಲಿನ ಡೆಕ್ ಮತ್ತು ವಾಹನ ಸಂಚಾರಕ್ಕೆ ಕೆಳಗಿನ ಡೆಕ್ ಮೀಸಲಾಗಿರುತ್ತದೆ. ರಾಗಿಗುಡ್ಡ ಮತ್ತು ಸಿಲ್ಕ್ ಬೋರ್ಡ್ ನಡುವಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಉದ್ಘಾಟನೆ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದೇ ಮಾದರಿಯಲ್ಲಿ, ಜೆ.ಪಿ. ನಗರದಿಂದ ಹೆಬ್ಬಾಳವರೆಗೆ ಮತ್ತೊಂದು ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣವಾಗಲಿದೆ. ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆ 44.3 ಕಿ.ಮೀ. ವ್ಯಾಪ್ತಿಯನ್ನು ಒಳಗೊಂಡಿದೆ.
ಬಫರ್ ರಸ್ತೆಗಳು
ಸಂಚಾರ ದಟ್ಟಣೆ ನಿವಾರಣೆ ಮಾಡುವ ದೃಷ್ಟಿಯಿಂದ ರಾಜಕಾಲುವೆಗಳ ಬಫರ್ ವಲಯದಲ್ಲಿ 300 ಕಿ.ಮೀ. ಉದ್ದದ ರಸ್ತೆ ನಿರ್ಮಿಸುವ ಯೋಜನೆ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ 3,000 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಐಟಿಪಿಎಲ್, ಥಣಿಸಂದ್ರ, ಆರ್.ಆರ್. ನಗರ ಮತ್ತು ಇತರ ಭಾಗಗಳಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಈ ಪೈಕಿ ಆರ್.ಆರ್. ನಗರ ವಲಯ ವ್ಯಾಪ್ತಿಯಲ್ಲಿ 70 ಕಿ.ಮೀ. ಉದ್ದದ ರಸ್ತೆಯನ್ನು ರಾಜಕಾಲುವೆ ಬಫರ್ ವಲಯದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಬಫರ್ ವಲಯದಲ್ಲಿ ರಸ್ತೆ ನಿರ್ಮಾಣ ಮಾಡುವುದರಿಂದ ಸಾಕಷ್ಟು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಬಹುದು ಎನ್ನಲಾಗಿದೆ.
ಎಲಿವೇಟೆಡ್ ಕಾರಿಡಾರ್‌ಗಳು
13 ಸಾವಿರ ಕೋಟಿ ರೂ. ವೆಚ್ಚದಲ್ಲಿ 16 ಎಲಿವೇಟೆಡ್ ಕಾರಿಡಾರ್‌ಗಳನ್ನು ನಿರ್ಮಿಸಲು ಸಿದ್ಧತೆ ನಡೆದಿದೆ. 12.20 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್, ಅಂಡರ್‌ಪಾಸ್ ಅಥವಾ ಮೇಲ್ಸೇತುವೆ ನಿರ್ಮಾಣಕ್ಕೆ ಪ್ರತೀ ಕಿ.ಮೀ.ಗೆ 120 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಅದರಂತೆ 1,464 ಕೋಟಿ ರೂ. ವೆಚ್ಚವಾಗಬಹುದೆಂದು ನಿರೀಕ್ಷಿಸಲಾಗಿದೆ. ಈ ಪ್ರಮುಖ ಕಾರಿಡಾರ್‌ನ ಸುತ್ತಮುತ್ತಲಿನ ಪ್ರದೇಶದ ಆಸ್ತಿದಾರರಿಗೆ ಬಂಪರ್ ಬಂದಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿಯ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ. ಈಗಾಗಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿರುವಂತೆ, ಸಂಚಾರ ದಟ್ಟಣೆ ನಿಯಂತ್ರಿಸಲು ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗಾಗಿ 2006 ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತಾದರೂ, ಅದು ಮುಂದುವರಿಯಲಿಲ್ಲ. ಆಗ ಯೋಜನಾ ವೆಚ್ಚ 2,000 ಕೋಟಿ ರೂ. ಇತ್ತು. ಈಗ ಬೆಂಗಳೂರು ವ್ಯಾಪಾರ ಕಾರಿಡಾರ್ ಅಡಿಯಲ್ಲಿ ವೆಚ್ಚ 26,000 ಕೋಟಿ ರೂ.ಗಳಿಗೆ ಏರಿದೆ.
ಇವೆಲ್ಲವೂ ಯೋಜನೆಗಳಾಗಿ ದೊಡ್ಡ ಪರದೆಯಲ್ಲಿನ ಚಿತ್ರಗಳಂತೆ ಬೆರಗುಗೊಳಿಸುವುದೇನೋ ನಿಜ. ಆದರೆ, ನಿಜವಾಗಿಯೂ ಬೆಂಗಳೂರಿನ ಜೀವನಕ್ಕೆ ಇವೆಲ್ಲವೂ ನೆಮ್ಮದಿ ತರುತ್ತವೆಯೆ ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ಕಾಯಲೇಬೇಕಾಗುತ್ತದೆ.