×
Ad

ಭಯೋತ್ಪಾದನೆ ಇಲ್ಲವಾಗಿಸುತ್ತೇವೆ ಎಂದವರಿಗೆ ಇನ್ನೂ ಅದನ್ನು ನಿಲ್ಲಿಸಲಾಗುತ್ತಿಲ್ಲ ಯಾಕೆ?

Update: 2025-11-18 15:17 IST

ದಿಲ್ಲಿಯ ಕೆಂಪು ಕೋಟೆ ಬಳಿ ನವೆಂಬರ್ 10 ರಂದು ನಡೆದ ಸ್ಫೋಟದಲ್ಲಿ 13 ಮಂದಿ ಸಾವಿಗೀಡಾಗಿ, ಹಲವರು ಗಾಯಗೊಂಡಿದ್ದಾರೆ. ಘಟನೆಯ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ. ಸುರಕ್ಷತೆಯ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಭಯೋತ್ಪಾದನೆ ವಿರುದ್ಧ ಮೋದಿ ಸರಕಾರ ಶೂನ್ಯ ಸಹಿಷ್ಣುತೆ ನೀತಿ ಹೊಂದಿದೆ ಎಂದು ದಿನಬೆಳಗಾದರೆ ಅಮಿತ್ ಶಾ ಹೇಳುತ್ತಲೇ ಇದ್ದಾರೆ. ದೇಶದಲ್ಲಿ ಭಯೋತ್ಪಾದನೆ ಇನ್ನೊಂದೇ ವರ್ಷದಲ್ಲಿ ಕೊನೆಗೊಳ್ಳಲಿದೆ ಎಂದು ಕೂಡ ಅವರು ಹೇಳುತ್ತಿದ್ದಾರೆ. ಪ್ರತೀ ಭಯೋತ್ಪಾದಕ ದಾಳಿಯ ನಂತರವೂ ಮೋದಿ ಮತ್ತು ಶಾ ಅಬ್ಬರಿಸುವುದು ನಡೆಯುತ್ತದೆ. ಆದರೆ ಭಯೋತ್ಪಾದನೆ ನಿಲ್ಲುತ್ತಿಲ್ಲ ಎನ್ನುವ ಕಟು ವಾಸ್ತವವನ್ನು ಈ ದೇಶ ನೋಡುತ್ತಲೇ ಇರಬೇಕಾಗಿದೆ. 2014ರಲ್ಲಿ ಅಧಿಕಾರಕ್ಕೆ ಬರುವಾಗ ಮೋದಿ ಕೊಟ್ಟ ಬಹಳ ದೊಡ್ಡ ಭರವಸೆಗಳಲ್ಲಿ ರಾಷ್ಟ್ರೀಯ ಸುರಕ್ಷತೆಯೂ ಒಂದು. ಆದರೆ ಈ 11 ವರ್ಷಗಳಲ್ಲಿ ಏನೇನೆಲ್ಲ ಆಯಿತು ಎಂದು ನೋಡಿದರೆ, ಸರಕಾರದ ಭರವಸೆಯೂ ಸುಳ್ಳಾಗಿದೆ, ಅಬ್ಬರವೂ ಸುಳ್ಳಾಗಿದೆ ಎಂಬುದು ಗೊತ್ತಾಗುತ್ತದೆ.

ಭಾಗ - 1

ದೇಶದಲ್ಲಿ ಮತ್ತೊಮ್ಮೆ ಆತಂಕದ ಕರಿನೆರಳು ಕವಿದಿದೆ. ದಿಲ್ಲಿ ಸ್ಫೋಟ ರಾಜಧಾನಿಯನ್ನು ಬೆಚ್ಚಿಬೀಳಿಸಿರುವುದರ ಜೊತೆಗೇ ದೇಶಾದ್ಯಂತ ಭೀತಿಗೆ ಕಾರಣವಾಗಿದೆ. 2014ರಲ್ಲಿ ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರ ದೇಶದಲ್ಲಿ ಹಲವು ಸ್ಫೋಟ ಪ್ರಕರಣಗಳು ನಡೆದಿವೆ. ಆದರೆ ದಿಲ್ಲಿಯಲ್ಲಿ ಅದೇ ಮೋದಿ ಸರಕಾರದ ನದರಿನಡಿಯೇ ನಡೆದಿರುವ ಸ್ಫೋಟ ಇದಾಗಿದೆ. ಮೋದಿ ಆಡಳಿತದಲ್ಲಿ ಮಾತ್ರ ದೇಶ ಸುರಕ್ಷಿತವಾಗಿರುವುದು ಸಾಧ್ಯ ಎಂಬ ಬಿಜೆಪಿಯ ಬೊಗಳೆಯನ್ನು ಈ ಘಟನೆ ಸುಳ್ಳು ಮಾಡಿದೆ. ಈಗಾಗಲೇ ಬಂದಿರುವ ಹಲವು ವರದಿಗಳು ಭದ್ರತಾ ವ್ಯವಸ್ಥೆಗಳಲ್ಲಿನ ದೊಡ್ಡ ಲೋಪಗಳ ಕಡೆ ಬೆರಳು ಮಾಡಿವೆ. ದಿಲ್ಲಿ ಪೊಲೀಸರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಎದ್ದಿದೆ.

ಘಟನೆಯನ್ನು ಭಯೋತ್ಪಾದಕ ಕೃತ್ಯವೆಂದು ಸರಕಾರ ಘೋಷಿಸಿದ್ದು, ಈಗ ಲೋಪಗಳ ಬಗ್ಗೆ ವಿಮರ್ಶಿಸಿಕೊಳ್ಳುವ ಬದಲು ಮತ್ತೊಮ್ಮೆ, ಅಲ್ಪಸಂಖ್ಯಾತರನ್ನು ಭಯೋತ್ಪಾದಕರೆಂದು ನೋಡುವ ಬಗ್ಗೆಯೇ ನಿರೂಪಣೆಗಳು ಒತ್ತು ನೀಡಲಿವೆ ಎನ್ನುವುದು ಸ್ಪಷ್ಟ. ಸ್ಫೋಟ ನಡೆಸಲು ಬಳಸಿದ ಕಾರನ್ನು ನಡೆಸುತ್ತಿದ್ದ ವ್ಯಕ್ತಿಯೂ ಸತ್ತಿದ್ದು, ದೇಶದ ಇತರೆಡೆಗಳಲ್ಲಿ ಭಯೋತ್ಪಾದನಾ ದಾಳಿಗಳ ಒಳಸಂಚು ಮಾಡಿದ್ದ ಇತರ ಗುಂಪಿನೊಂದಿಗೆ ಆತ ಸಂಪರ್ಕ ಹೊಂದಿದ್ದ ಎಂದು ಹೇಳಲಾಗುತ್ತಿದೆ. ವೈಟ್ ಕಾಲರ್ ಭಯೋತ್ಪಾದನೆ ಎಂಬ ಚರ್ಚೆಯನ್ನು ಎತ್ತಲಾಗಿದೆ.

ಶಂಕಿತ ಆರೋಪಿ ಡಾ.ಉಮರ್ ನಬಿಯ ಪುಲ್ವಾಮಾದ ಕ್ವಿಲ್ ಗ್ರಾಮದಲ್ಲಿನ ಮನೆಯನ್ನೂ ಭದ್ರತಾ ಪಡೆಗಳು ಧ್ವಂಸಗೊಳಿಸಿವೆ. ಪುಲ್ವಾಮಾ ದಾಳಿಯೊಂದಿಗೂ ನಬಿ ಹೆಸರು ಜೋಡಿಸಲಾಗಿದೆ. ಭಯೋತ್ಪಾದಕ ದಾಳಿ ನಡೆದಾಗೆಲ್ಲ ಸರಕಾರ ಮತ್ತು ಮಡಿಲ ಮೀಡಿಯಾಗಳ ಕಣ್ಣು ಮೊದಲು ಹರಿಯುವುದೇ ಮುಸ್ಲಿಮರ ಕಡೆಗೆ ಎನ್ನುವುದು ಈಗ ಅತ್ಯಂತ ಸಾಮಾನ್ಯ ಸಂಗತಿಯಾಗಿದೆ. ಭಯೋತ್ಪಾದನೆಯ ಹೆಸರಿನಲ್ಲಿ ಕೋಮು ಧ್ರುವೀಕರಣದ ರಾಜಕೀಯ ಬಲಗೊಳ್ಳುತ್ತಿದೆ. ದಿಲ್ಲಿ ಸ್ಫೋಟ ಪ್ರಕರಣದ ತನಿಖೆ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಗೊತ್ತಿಲ್ಲ. ಆದರೆ, ಆರೋಪ ಹೊತ್ತವರ ಕುಟುಂಬಗಳು ನಿತ್ಯವೂ ಎದುರಿಸಬೇಕಾದ ಸಂಕಟ, ಈ ಸಮಾಜದ ದೃಷ್ಟಿಯನ್ನು ಎದುರಿಸಬೇಕಾಗುವಲ್ಲಿನ ತಳಮಳ ಸಣ್ಣದಲ್ಲ.

ದೇಶದ ರಾಜಧಾನಿಯಲ್ಲಿ ಈ ಸಲ ಮತ್ತೊಮ್ಮೆ ದೇಶವನ್ನೇ ನಡುಗಿಸುವ ಸದ್ದು ಕೇಳಿಸಿದೆ ಎನ್ನುವ ಕಾರಣಕ್ಕಾಗಿ, ದಿಲ್ಲಿ ಸ್ಫೋಟಗಳ ಇತಿಹಾಸವನ್ನೊಮ್ಮೆ ಗಮನಿಸಬೇಕು. ದಿಲ್ಲಿಯಲ್ಲಿನ ಈಗಿನ ಸ್ಫೋಟ ಕಳೆದ 14 ವರ್ಷಗಳಲ್ಲಿ ಮೊದಲನೆಯದು. 1985 ರಿಂದ 2025 ರವರೆಗಿನ 40 ವರ್ಷಗಳಲ್ಲಿ ದಿಲ್ಲಿಯಲ್ಲಿ 23 ಬಾಂಬ್ ಸ್ಫೋಟಗಳು ನಡೆದಿವೆ. ನವೆಂಬರ್ 10ರ ಸಂಜೆ ಕೆಂಪು ಕೋಟೆಯ ಮುಂದೆ ನಡೆದ ಕಾರು ಸ್ಫೋಟ ದಿಲ್ಲಿಯಲ್ಲಿ ನಡೆದ 24ನೇ ಬಾಂಬ್ ಸ್ಫೋಟವಾಗಿದೆ.

1985ರ ಮೇ 10: ಇದ್ದಕ್ಕಿದ್ದಂತೆ ದಿಲ್ಲಿಯ ಹಲವಾರು ಸ್ಥಳಗಳಲ್ಲಿ ಬಾಂಬ್‌ಗಳು ಸ್ಫೋಟಗೊಂಡಿದ್ದವು. ಆ ಸರಣಿ ಸ್ಫೋಟಗಳಲ್ಲಿ 49 ಜನರು ಸಾವನ್ನಪ್ಪಿ, 127ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು ಎನ್ನಲಾಗಿದೆ. ಟ್ರಾನ್ಸಿಸ್ಟರ್‌ಗಳನ್ನು ಬಳಸಿ ಆ ಸ್ಫೋಟ ನಡೆಸಲಾಗಿತ್ತು ಮತ್ತು ಅದು ಖಾಲಿಸ್ತಾನಿ ಉಗ್ರರ ಪಿತೂರಿ ಎಂದು ಬಯಲಾಗಿತ್ತು.

1996 ಮೇ 21: ಲಜ್‌ಪತ್ ನಗರದ ಕೇಂದ್ರ ಮಾರುಕಟ್ಟೆಯಲ್ಲಿ ಭಾರೀ ಸ್ಫೋಟ ಸಂಭವಿಸಿ, 13 ಜನರು ಸಾವನ್ನಪ್ಪಿದರು ಮತ್ತು 28ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ದಾಳಿಯ ಹೊಣೆಯನ್ನು ಜಮ್ಮು-ಕಾಶ್ಮೀರ ಇಸ್ಲಾಮಿಕ್ ಫ್ರಂಟ್ ಹೊತ್ತುಕೊಂಡಿತ್ತು.

1997 ಜನವರಿ 9: ಲಜ್‌ಪತ್ ನಗರ ಸ್ಫೋಟದ ಸುಮಾರು ಆರು ತಿಂಗಳ ನಂತರ, ದಿಲ್ಲಿ ಪೊಲೀಸ್ ಪ್ರಧಾನ ಕಚೇರಿಯ ಮುಂದೆ ಸ್ಫೋಟ ನಡೆಯಿತು. 50 ಜನ ಗಾಯಗೊಂಡಿದ್ದರು.

1997 ಅಕ್ಟೋಬರ್ 1: ಸದರ್ ಬಝಾರ್ ಪ್ರದೇಶದಲ್ಲಿ ಮೆರವಣಿಗೆ ನಡೆಯುತ್ತಿದ್ದಾಗ ಎರಡು ಸ್ಫೋಟಗಳು ನಡೆದು, 30 ಜನ ಗಾಯಗೊಂಡರು.

1997 ಅಕ್ಟೋಬರ್ 10: ಕಿಂಗ್ಸ್‌ವೇ ಕ್ಯಾಂಪ್‌ನ ಶಾಂತಿವನದಲ್ಲಿ ಮೂರು ಸ್ಫೋಟಗಳು ಸಂಭವಿಸಿದ್ದವು. ಒಬ್ಬ ವ್ಯಕ್ತಿ ಸಾವನ್ನಪ್ಪಿ, 16 ಜನರು ಗಾಯಗೊಂಡಿದ್ದರು.

1997 ಅಕ್ಟೋಬರ್ 18: ರಾಣಿ ಬಾಗ್ ಬಝಾರ್‌ನಲ್ಲಿ ಸ್ಫೋಟ ನಡೆಯಿತು. ಆ ಅವಳಿ ಬಾಂಬ್ ಸ್ಫೋಟಗಳಲ್ಲಿ ಒಬ್ಬ ಸಾವನ್ನಪ್ಪಿ, 23 ಜನರು ಗಾಯಗೊಂಡಿದ್ದರು.

1997 ಅಕ್ಟೋಬರ್ 26: ಕರೋಲ್ ಬಾಗ್‌ನಲ್ಲಿ ಸಂಭವಿಸಿತು. ಅವಳಿ ಬಾಂಬ್‌ಗಳು ಸ್ಫೋಟಗೊಂಡು, ಒಬ್ಬ ಸಾವನ್ನಪ್ಪಿ, 34 ಜನರು ಗಾಯಗೊಂಡಿದ್ದರು.

1997 ನವೆಂಬರ್ 30: ಕೆಂಪು ಕೋಟೆಯ ಪಕ್ಕದ ಪ್ರದೇಶದಲ್ಲಿ ಎರಡು ಬಾಂಬ್ ಸ್ಫೋಟಗಳಲ್ಲಿ ಮೂವರು ಸಾವನ್ನಪ್ಪಿ, 70ಕ್ಕೂ ಹೆಚ್ಚು ಜನರು ಗಾಯಗೊಂಡರು.

1999 ಎಪ್ರಿಲ್ 16: ಹುಲಂಬಿ ಕಲಾನ್ ರೈಲು ನಿಲ್ದಾಣದಲ್ಲಿ ಸ್ಫೋಟ ನಡೆದು, ಇಬ್ಬರು ಸಾವನ್ನಪ್ಪಿದ್ದರು.

1999 ಜೂನ್ 3: ಹಳೆಯ ದಿಲ್ಲಿ ಪ್ರದೇಶವಾದ ಚಾಂದನಿ ಚೌಕ್‌ನಲ್ಲಿ ಬಾಂಬ್ ಸ್ಫೋಟಗೊಂಡು 27 ಜನರು ಗಾಯಗೊಂಡರು.

2000 ಜನವರಿ 6: ಹಳೆಯ ದಿಲ್ಲಿ ರೈಲು ನಿಲ್ದಾಣದಲ್ಲಿ ರೈಲಿನೊಳಗೆ ಸ್ಫೋಟ ನಡೆದು, 20 ಜನರು ಗಾಯಗೊಂಡರು.

2000 ಫೆಬ್ರವರಿ 27: ಪಹರ್‌ಗಂಜ್ ಮಾರುಕಟ್ಟೆ ಪ್ರದೇಶದಲ್ಲಿ ಸ್ಫೋಟ ನಡೆದು, 8 ಜನರು ಗಾಯಗೊಂಡರು.

2000 ಮಾರ್ಚ್ 16: ಸದರ್ ಬಝಾರ್ ಅನ್ನು ಎರಡನೇ ಬಾರಿಗೆ ಗುರಿಯಾಗಿಸಿ ನಡೆದ ಸ್ಫೋಟದಲ್ಲಿ 7 ಜನರು ಗಾಯಗೊಂಡರು.

2000 ಜೂನ್ 18: ಕೆಂಪು ಕೋಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಎರಡು ಶಕ್ತಿಶಾಲಿ ಬಾಂಬ್‌ಗಳು ಸ್ಫೋಟಗೊಂಡು, 8 ವರ್ಷದ ಬಾಲಕಿಯೂ ಸೇರಿ ಇಬ್ಬರು ಸಾವನ್ನಪ್ಪಿದರು ಮತ್ತು 12 ಜನರು ಗಾಯಗೊಂಡರು.

2001 ಮೇ 9: ಡಾಲ್‌ಹೌಸಿ ರಸ್ತೆಯಲ್ಲಿರುವ ಸೇನಾ ಪ್ರಧಾನ ಕಚೇರಿ ಮುಂದೆ ಸ್ಫೋಟ ನಡೆದು, ಒಬ್ಬ ವ್ಯಕ್ತಿ ಗಾಯಗೊಂಡರು.

2001 ಮೇ 20: ಸಿಜಿಒ ಕಾಂಪ್ಲೆಕ್ಸ್‌ನಲ್ಲಿ ನಡೆದ ಸ್ಫೋಟದಲ್ಲಿ ಯಾರಿಗೂ ಹಾನಿಯಾಗಲಿಲ್ಲ.

2001 ಆಗಸ್ಟ್ 11: ದಕ್ಷಿಣ ವಿಸ್ತರಣಾ ಮಾರುಕಟ್ಟೆಯಲ್ಲಿನ ಸ್ಫೋಟದಲ್ಲಿ ಇಬ್ಬರು ಗಾಯಗೊಂಡರು.

2001 ಡಿಸೆಂಬರ್ 13: ಬಾಂಬ್‌ಗಳು ಮತ್ತು ಬಂದೂಕುಗಳಿಂದ ಶಸ್ತ್ರಸಜ್ಜಿತ ಭಯೋತ್ಪಾದಕರು ಸಂಸತ್ ಭವನದ ಮೇಲೆ ನೇರವಾಗಿ ದಾಳಿ ಮಾಡಿದರು.

2005 ಮೇ 22: ಲಿಬರ್ಟಿ ಮತ್ತು ಸತ್ಯಂ ಸಿನೆಮಾ ಮಂದಿರಗಳಲ್ಲಿ ಸರಣಿ ಸ್ಫೋಟಗಳು ನಡೆದು, ಒಬ್ಬ ವ್ಯಕ್ತಿ ಸಾವನ್ನಪ್ಪಿ, 60 ಜನರು ಗಾಯಗೊಂಡರು.

2005 ಅಕ್ಟೋಬರ್ 29: ಸರೋಜಿನಿ ನಗರ, ಪಹರ್‌ಗಂಜ್ ಮತ್ತು ಗೋವಿಂದಪುರಿಯಲ್ಲಿ ಬಸ್‌ನೊಳಗೆ ಸ್ಫೋಟಗಳನ್ನು ನಡೆಸಲಾಯಿತು. ಈ ಭೀಕರ ದಾಳಿಯಲ್ಲಿ 62 ಜನರು ಪ್ರಾಣ ಕಳೆದುಕೊಂಡರು. ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಿಬಾ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು.

2006 ಎಪ್ರಿಲ್ 14: ಜಾಮಾ ಮಸೀದಿಯನ್ನು ಗುರಿಯಾಗಿಸಿ ನಡೆದ ಎರಡು ಸ್ಫೋಟಗಳಲ್ಲಿ 14 ಜನ ಗಾಯಗೊಂಡರು.

2008 ಸೆಪ್ಟಂಬರ್ 13: ದಿಲ್ಲಿಯ ಐದು ಸ್ಥಳಗಳಲ್ಲಿ 45 ನಿಮಿಷಗಳಲ್ಲಿ ಸರಣಿ ಸ್ಫೋಟಗಳು ನಡೆದಿದ್ದವು. ಕರೋಲ್ ಬಾಗ್, ಗಫರ್ ಮಾರುಕಟ್ಟೆ, ಕನ್ನಾಟ್ ಪ್ಲೇಸ್ ಮತ್ತು ಗ್ರೇಟರ್ ಕೈಲಾಶ್ ಒನ್ ಅನ್ನು ಗುರಿಯಾಗಿಸಿಕೊಂಡ ಸ್ಫೋಟಗಳಲ್ಲಿ 30 ಜನರು ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

2011 ಸೆಪ್ಟಂಬರ್ 7: ದಿಲ್ಲಿ ಹೈಕೋರ್ಟ್ ಮುಂದೆ ಬ್ರೀಫ್‌ಕೇಸ್‌ನಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡು, 15 ಜನರು ಸಾವನ್ನಪ್ಪಿ, 50ಕ್ಕೂ ಹೆಚ್ಚು ಜನರು ಗಾಯಗೊಂಡರು.

ಈಗ 2025ರ ನವೆಂಬರ್ 10ರಂದು ಕೆಂಪು ಕೋಟೆಯ ಮುಂದೆ ಕಾರ್‌ಬಾಂಬ್ ಸ್ಫೋಟಗೊಂಡು 13 ಜನರು ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮೋದಿ ಸರಕಾರ ಸುಳ್ಳು ಆಶ್ವಾಸನೆಗಳ ಮೇಲೆಯೇ ನಿಂತಿದೆ. ಅದು ಹೇಳಿದ ಅಚ್ಛೇ ದಿನಗಳು ಕಡೆಗೂ ಬರಲಿಲ್ಲ. 2014ರಲ್ಲಿ ಅಧಿಕಾರಕ್ಕೆ ಬರುವಾಗ ರಾಷ್ಟ್ರೀಯ ಭದ್ರತೆ ವಿಷಯವನ್ನು ದೊಡ್ಡದಾಗಿ ಎತ್ತಲಾಗಿತ್ತು. ಅದಾದ 11 ವರ್ಷಗಳ ಬಳಿಕವೂ ಆಗುತ್ತಿರುವುದೇನು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಉಗ್ರರ ದಾಳಿಗಳನ್ನು ತಡೆಯಲು ಮೋದಿ ಸರಕಾರಕ್ಕೆ ಏಕೆ ಸಾಧ್ಯವಾಗಲಿಲ್ಲ? ದೇಶದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಗಳ ಕುರಿತು ಕೇಂದ್ರ ಗೃಹ ಇಲಾಖೆ ನೀಡಿರುವ ಅಂಕಿಅಂಶಗಳು ನಿಜಕ್ಕೂ ಆತಂಕಕಾರಿಯಾಗಿವೆ. ಜಮ್ಮು-ಕಾಶ್ಮೀರವೊಂದರಲ್ಲೇ 2014ರಿಂದ 2025 ರವರೆಗೆ 3,000ಕ್ಕೂ ಹೆಚ್ಚು ಭಯೋತ್ಪಾದಕ ಘಟನೆಗಳು ನಡೆದಿವೆ. ಇಡೀ ದೇಶದಲ್ಲಿ ಭಯೋತ್ಪಾದಕ ಕೃತ್ಯಗಳ ಸಂಖ್ಯೆ 5,000 ದಾಟಿದೆ ಮತ್ತು ಈ ಅವಧಿಯಲ್ಲಿ ಸಾವಿರಾರು ಯೋಧರು, ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಬಲಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆರ್.ಜೀವಿ

contributor

Similar News