×
Ad

ಭಯೋತ್ಪಾದನೆ ಇಲ್ಲವಾಗಿಸುತ್ತೇವೆ ಎಂದವರಿಗೆ ಇನ್ನೂ ಅದನ್ನು ನಿಲ್ಲಿಸಲಾಗುತ್ತಿಲ್ಲ ಯಾಕೆ?

Update: 2025-11-19 11:52 IST

ಭಾಗ - 2

ಮೋದಿ ಸರಕಾರದ ಅವಧಿಯಲ್ಲಿನ ಭಯೋತ್ಪಾದಕ ದಾಳಿಗಳ ಪಟ್ಟಿ ಮಾಡುವುದಾದರೆ,

2014: ಅಸ್ಸಾಂ ಹಿಂಸಾಚಾರ, ಬೆಂಗಳೂರು ಚರ್ಚ್ ಸ್ಟ್ರೀಟ್ ಸ್ಫೋಟ.

2015: ಜಮ್ಮು ದಾಳಿ, ಮಣಿಪುರ ದಾಳಿ, ಗುರುದಾಸ್‌ಪುರ ದಾಳಿ.

2016: ಪಠಾಣ್‌ಕೋಟ್ ದಾಳಿ, ಪ್ಯಾಂಪೋರ್ ದಾಳಿ, ಕೊಕ್ರಝಾರ್ ಗುಂಡಿನ ದಾಳಿ, ಉರಿ ದಾಳಿ, ಬಾರಾಮುಲ್ಲಾ ದಾಳಿ, ಹಂದ್ವಾರ ದಾಳಿ, ನಗ್ರೋಟಾ ಸೇನಾ ನೆಲೆಯ ಮೇಲಿನ ದಾಳಿ.

2017: ಭೋಪಾಲ್-ಉಜ್ಜಯಿನಿ ಪ್ಯಾಸೆಂಜರ್ ರೈಲಿನ ಮೇಲಿನ ಬಾಂಬ್ ದಾಳಿ, ಸುಕ್ಮಾ ದಾಳಿ, ಅಮರನಾಥ ಯಾತ್ರಿಕರ ಮೇಲಿನ ದಾಳಿ.

2018: ಸುಂಜುವಾನ್ ದಾಳಿ, ಸುಕ್ಮಾ ದಾಳಿ.

2019: ಪುಲ್ವಾಮಾ ದಾಳಿ, ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಫೋಟ, ದಂತೇವಾಡ ದಾಳಿ, ಕಿಶ್ತ್ವಾರ್‌ನಲ್ಲಿ ಗಡ್ಚಿರೋಲಿ ನಕ್ಸಲ್ ಬಾಂಬ್ ದಾಳಿ, ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ, ಕಾಶ್ಮೀರ ದಾಳಿ

2020: ಸುಕ್ಮಾ ಮಾವೋವಾದಿಗಳ ದಾಳಿ

2021: ಸುಕ್ಮಾಬಿಜಾಪುರ ದಾಳಿ.

2023: ರಾಜೌರಿ ದಾಳಿ, ಎಲತ್ತೂರು ರೈಲಿಗೆ ಬೆಂಕಿ, ದಾಂತೇವಾಡ ಬಾಂಬ್ ದಾಳಿ, ಎರ್ನಾಕುಳಂ ಯೆಹೋವನ ವಿಟ್ನೆಸ್ ಸಮಾವೇಶ ಕೇಂದ್ರ ಸ್ಫೋಟ.

2024: ಬೆಂಗಳೂರು ಕೆಫೆ ಬಾಂಬ್ ದಾಳಿ, ರಿಯಾಸಿ ದಾಳಿ

2025: ಪಹಲ್ಗಾಮ್ ದಾಳಿ ಮತ್ತು ಈಗ ಕೆಂಪು ಕೋಟೆಯ ಹತ್ತಿರ ಬಾಂಬ್ ಸ್ಫೋಟ.

ಗುರುದಾಸ್‌ಪುರ ದಾಳಿ

2014ರಲ್ಲಿ ಮೋದಿ ಅಧಿಕಾರಕ್ಕೆ ಬಂದಾಗ ಮೊದಲ ದೊಡ್ಡ ದಾಳಿ 2015ರ ಜುಲೈನಲ್ಲಿ ಪಂಜಾಬ್‌ನ ಗುರುದಾಸ್‌ಪುರದಲ್ಲಿ ನಡೆಯಿತು. ಪಾಕಿಸ್ತಾನದಿಂದ ಬಂದ ಉಗ್ರರು ಪೊಲೀಸ್ ಠಾಣೆ ಮತ್ತು ಬಸ್ ಮೇಲೆ ದಾಳಿ ನಡೆಸಿ 7 ಜನರನ್ನು ಕೊಂದರು. ಇದಕ್ಕೆ ಕಾರಣ ಗಡಿ ಭದ್ರತೆಯಲ್ಲಿ ಇದ್ದ ಲೋಪಗಳು.

ಪಠಾಣ್ ಕೋಟ್ ದಾಳಿ

2016ರ ಜನವರಿಯಲ್ಲಿ ಪಂಜಾಬ್‌ನ ಪಠಾಣ್ ಕೋಟ್ ವೈಮಾನಿಕ ನೆಲೆ ಮೇಲೆ ಪಾಕ್‌ನಿಂದ ಒಳನುಸುಳಿದ ಉಗ್ರರು ದಾಳಿ ನಡೆಸಿ, 7 ಭದ್ರತಾ ಸಿಬ್ಬಂದಿಯನ್ನು ಕೊಂದರು. ಅದಕ್ಕೂ ಗುಪ್ತಚರ ವೈಫಲ್ಯವೇ ಕಾರಣವಾಗಿತ್ತು.

ಕಾಶ್ಮೀರದ ಉರಿ ದಾಳಿ

2016ರ ಸೆಪ್ಟಂಬರ್‌ನಲ್ಲಿ ಜಮ್ಮು-ಕಾಶ್ಮೀರದ ಉರಿ ಪ್ರದೇಶದಲ್ಲಿ ಪಾಕ್ ಉಗ್ರರು ಭಾರತೀಯ ಸೇನಾ ಶಿಬಿರಕ್ಕೆ ನುಗ್ಗಿ 19 ಯೋಧರನ್ನು ಹತ್ಯೆ ಮಾಡಿದರು. ಗುಪ್ತಚರ ಇಲಾಖೆಗಳು ಮುಂಚಿತವಾಗಿ ಎಚ್ಚರಿಕೆ ನೀಡಿದ್ದರೂ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪಗಳಿವೆ.

ಸೇನಾ ಶಿಬಿರದ ಭದ್ರತೆಯಲ್ಲಿ ಲೋಪಗಳಿದ್ದವು. ಇದರಿಂದ ಸೇನೆಯಲ್ಲಿ ಆಕ್ರೋಶ ಹೆಚ್ಚಾಯಿತು.

ಪುಲ್ವಾಮಾ ದಾಳಿ

2019ರ ಫೆಬ್ರವರಿಯಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಯಂತೂ ಅತಿ ದೊಡ್ಡ ವೈಫಲ್ಯದ ಪರಿಣಾಮ. ಜೈಶೆ ಮುಹಮ್ಮದ್ ಉಗ್ರರು ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ವಾಹನಗಳನ್ನು ಗುರಿಯಾಗಿಸಿಕೊಂಡು ನಡೆದ ಬಾಂಬ್ ದಾಳಿಯಲ್ಲಿ 40 ಯೋಧರು ಹತ್ಯೆಯಾದರು. ಗುಪ್ತಚರ ಇಲಾಖೆಗಳು ಐಇಡಿ ಸ್ಫೋಟವಾಗುತ್ತವೆ ಎಂಬ ಬಗ್ಗೆ ಮಾಹಿತಿ ನೀಡಿದ್ದರೂ ಕ್ರಮ ಕೈಗೊಳ್ಳಲಿಲ್ಲ ಎನ್ನಲಾಗುತ್ತದೆ. ಯೋಧರನ್ನು ಸೇನಾ ವಿಮಾನದಲ್ಲಿ ಕಳುಹಿಸದೇ ರಸ್ತೆಮಾರ್ಗದಲ್ಲಿ ಕಳುಹಿಸಿದ್ದು ದೊಡ್ಡ ಪ್ರಮಾದವಾಗಿತ್ತು.

ಪುಲ್ವಾಮಾ ದಾಳಿ ಬಳಿಕ ಬಾಲಾಕೋಟ್ ದಾಳಿ ನಡೆಸಿ ಅತಿ ದೊಡ್ಡ ಸಾಧನೆ ಎಂದು ಹೇಳಿಕೊಳ್ಳುವುದು ನಡೆಯಿತು. ಆದರೆ ಉಗ್ರರ ದಾಳಿ ಮಾತ್ರ ನಿಲ್ಲಲಿಲ್ಲ. 2017ರ ಅಮರನಾಥ್ ಯಾತ್ರೆ ದಾಳಿ ನಡೆಯಿತು. 2018ರ ಸುಂಜುವಾನ್, ಸುಕ್ಮಾ ದಾಳಿಗಳು ನಡೆದವು. 370 ವಿಧಿ ರದ್ದು ಬಳಿಕ ಕಾಶ್ಮೀರದಲ್ಲಿ ಶಾಂತಿ ನಲೆಸುತ್ತದೆ ಎಂದು ಹೇಳಲಾಯಿತು. ಆದರೆ ದಾಳಿಗಳು ಹೆಚ್ಚೇ ಆದವು. 2024ರ ಜೂನ್‌ನಲ್ಲಿ ರಿಯಾಸಿ ಜಿಲ್ಲೆಯಲ್ಲಿ ನಡೆದ ಬಸ್ ದಾಳಿಯಲ್ಲಿ 9 ಯಾತ್ರಿಕರನ್ನು ಕೊಲ್ಲಲಾಯಿತು. ಮೋದಿ ಪ್ರಮಾಣ ವಚನ ಸ್ವೀಕರಿಸುವ ಕೆಲವೇ ನಿಮಿಷಗಳ ಮೊದಲು ಈ ಭಯೋತ್ಪಾದಕ ದಾಳಿ ನಡೆದಿತ್ತು. ಪೂಂಚ್‌ನಲ್ಲಿ ವಾಯುಸೇನಾ ಕಾನ್ವಾಯ್ ಮೇಲೆ ದಾಳಿಯಾಯಿತು.

ಪಹಲ್ಗಾಮ್ ದಾಳಿ

2025ರ ಎಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಲಷ್ಕರೆ ತಯ್ಯಿಬಾ ಉಗ್ರರು 26 ಪ್ರವಾಸಿಗರನ್ನು ಕೊಂದರು. ಗುಪ್ತಚರ ಇಲಾಖೆಗಳು ಮುಂಚಿತವಾಗಿ ಮಾಹಿತಿ ಪಡೆದಿದ್ದರೂ ಕ್ರಮ ಕೈಗೊಳ್ಳಲಿಲ್ಲ ಎಂಬುದು ಬಯಲಾಯಿತು. 2014ರಿಂದ 2025ರ ಪಹಲ್ಗಾಮ್ ದಾಳಿಯವರೆಗೂ ದೊಡ್ಡ ಮಟ್ಟದ ಗುಪ್ತಚರ ವೈಫಲ್ಯಗಳು ನಡೆದಿವೆ ಎಂದು ವರದಿಗಳು ಹೇಳುತ್ತವೆ. ಆದರೆ ಭದ್ರತಾ ಲೋಪಗಳ ಬಗ್ಗೆ ಸರಕಾರ ಮಾತಾಡುವುದಿಲ್ಲ. ಬದಲಾಗಿ, ಇಂಥ ಘಟನೆಗಳು ನಡೆದಾಗೆಲ್ಲ ಗಮನ ಬೇರೆಡೆಗೆ ಸೆಳೆಯುವ ಕ್ಷುಲ್ಲಕ ವಿಷಯಗಳನ್ನು ಮುಂದೆ ತರಲಾಗುತ್ತದೆ. ಕಳೆದ 11 ವರ್ಷಗಳಲ್ಲಿ ಮೋದಿ ಸರಕಾರ ಭಯೋತ್ಪಾದಕ ದಾಳಿಗಳನ್ನು ತಡೆಯಲು ಸಂಪೂರ್ಣ ವಿಫಲವಾಗಿದೆ.

ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ದಾಳಿ, 370ನೇ ವಿಧಿ ರದ್ದುಪಡಿಸುವುದು ಮುಂತಾದ ಕ್ರಮಗಳೆಲ್ಲ ಬರೀ ರಾಜಕೀಯ ಪ್ರದರ್ಶನಗಳು ಎಂಬ ಟೀಕೆಗಳಿವೆ.

ಸೌಥ್ ಏಶ್ಯ ಟೆರರಿಸಂ ಪೋರ್ಟಲ್ ವರದಿ ಪ್ರಕಾರ, ಮೋದಿ 3ನೇ ಅಧಿಕಾರಾವಧಿಯ ಮೊದಲ ವರ್ಷದಲ್ಲಿ ಭಯೋತ್ಪಾದಕ ಘಟನೆಗಳಲ್ಲಿ 51 ನಾಗರಿಕರು ಸಾವನ್ನಪ್ಪಿದ್ದಾರೆ. ಇದು ಅವರ ಮೊದಲ ಅಧಿಕಾರಾವಧಿಯ ಮೊದಲ ವರ್ಷದಲ್ಲಿನ (2014-2015) 24 ನಾಗರಿಕರ ಸಾವು ಮತ್ತು ಅವರ ಎರಡನೇ ಅಧಿಕಾರಾವಧಿಯ ಮೊದಲ ವರ್ಷದಲ್ಲಿನ (2019-2020) 33 ನಾಗರಿಕರ ಸಾವುಗಳಿಗೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದೆ. ಇದು ಭಯೋತ್ಪಾದನಾ ನಿಗ್ರಹದ ವಿಷಯವಾಗಿ ಮೋದಿ ಸರಕಾರದ ವಿಫಲತೆ ಬಗ್ಗೆ ತೀವ್ರ ಕಳವಳ ಹುಟ್ಟುಹಾಕಿದೆ. ಇನ್ನು ಭದ್ರತಾ ಪಡೆಗಳು ಸಹ ದೊಡ್ಡ ನಷ್ಟ ಕಂಡಿವೆ. ಮೋದಿ ಮೂರನೇ ಅಧಿಕಾರಾವಧಿಯ ಮೊದಲ ವರ್ಷದಲ್ಲಿ 35 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇದು ಮೋದಿ ಮೊದಲ ಅವಧಿಯಲ್ಲಿನ ಮೊದಲ ವರ್ಷದ 51 ಮತ್ತು ಎರಡನೇ ಅವಧಿಯಲ್ಲಿನ ಮೊದಲ ವರ್ಷದ 46ಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆ.

ಈ ನಡುವೆ, ಭದ್ರತಾ ಪಡೆಗಳ ಪ್ರತಿದಾಳಿಯಲ್ಲಿ 84 ಭಯೋತ್ಪಾದಕರ ಹತ್ಯೆ ಮಾಡಲಾಗಿದೆ. ಇದು ಮೋದಿ ಮೊದಲ ಅಧಿಕಾರಾವಧಿಯ ಮೊದಲ ವರ್ಷದಲ್ಲಿನ 109 ಮತ್ತು ಎರಡನೇ ಅವಧಿಯಲ್ಲಿನ 155ಕ್ಕೆ ಹೋಲಿಸಿದರೆ ಕಡಿಮೆ. ಮತ್ತೊಂದು ಪ್ರಮುಖ ಆಂತರಿಕ ಭದ್ರತಾ ಕಳವಳವೆಂದರೆ, ಎಲ್‌ಡಬ್ಲ್ಯುಇ ಪ್ರೇರಿತ ಹಿಂಸಾಚಾರ. ಅದು ಇತ್ತೀಚೆಗೆ ತಗ್ಗುತ್ತಿದೆ. ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ ಎಪ್ರಿಲ್ 2018ರಲ್ಲಿ 90 ಇದ್ದದ್ದು ಎಪ್ರಿಲ್ 2025 ರಲ್ಲಿ 38ಕ್ಕೆ ಇಳಿದಿದೆ. ಹೆಚ್ಚು ಪೀಡಿತ ಜಿಲ್ಲೆಗಳ ಸಂಖ್ಯೆಯೂ 12 ರಿಂದ 6ಕ್ಕೆ ಇಳಿದಿದೆ. ಇವುಗಳಲ್ಲಿ ಛತ್ತೀಸ್‌ಗಡದ ನಾಲ್ಕು ಜಿಲ್ಲೆಗಳಾದ ಬಿಜಾಪುರ, ಕಂಕೇರ್, ನಾರಾಯಣಪುರ ಮತ್ತು ಸುಕ್ಮಾ, ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಮತ್ತು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಗಳು ಸೇರಿವೆ.

ಈಶಾನ್ಯದಲ್ಲಿ ಮಣಿಪುರ 2023ರ ಮೇ 3ರಿಂದ ಸುಮಾರು ಎರಡು ವರ್ಷಗಳ ಕಾಲ ಜನಾಂಗೀಯ ಘರ್ಷಣೆಯಿಂದಾಗಿ ಹೊತ್ತಿ ಉರಿಯಿತು. 250 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ರಾಜ್ಯದಲ್ಲಿ ಉದ್ವಿಗ್ನತೆ ತಗ್ಗಿಸಲು ಮೋದಿ ಸರಕಾರ ವಿಫಲವಾಗಿರುವ ಬಗ್ಗೆ ಕಟು ಆರೋಪಗಳಿವೆ.

2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಮೋದಿ ಸರಕಾರ ಆಂತರಿಕ ಭದ್ರತೆ ತನ್ನ ಪ್ರಮುಖ ಆದ್ಯತೆಗಳಲ್ಲಿ ಒಂದೆಂದು ಹೇಳಿಕೊಂಡಿತು. ಕಳೆದ ದಶಕದಲ್ಲಿ ಎಲ್‌ಡಬ್ಲ್ಯುಇ ಹಿಂಸಾಚಾರ ಗಮನಾರ್ಹವಾಗಿ ಕಡಿಮೆಯಾಗಿದೆ. ಮಾವೋವಾದಿಗಳ ದಮನದಲ್ಲಿ ಮೋದಿ ಸರಕಾರಕ್ಕಿದ್ದ ಒಂದು ಅನುಕೂಲತೆಯೆಂದರೆ, ಯುಪಿಎ ಸರಕಾರದ ನೀತಿ.

ಇನ್ನು ಜಮ್ಮು-ಕಾಶ್ಮೀರದಲ್ಲಿ ಸರಕಾರ ಸಾರ್ವಜನಿಕ ಸುವ್ಯವಸ್ಥೆ ವಿಷಯದಲ್ಲಿ ಯಶಸ್ವಿಯಾದಂತೆ ಕಂಡರೂ, ವಿದೇಶಿ ಭಯೋತ್ಪಾದಕರ ಒಳನುಸುಳುವಿಕೆ ಮುಂದುವರಿದಿದೆ. ನಾಗರಿಕರನ್ನು ಗುರಿಯಾಗಿಸಲಾಗಿದೆ ಮತ್ತು ಜಮ್ಮುವಿನಲ್ಲಿ ಭಯೋತ್ಪಾದನೆ ಮತ್ತೆ ಹೆಡೆಯಾಡಿಸುತ್ತಿದೆ. ಗೃಹ ಸಚಿವ ಅಮಿತ್ ಶಾ 370ನೇ ವಿಧಿ ಕಾಶ್ಮೀರದಲ್ಲಿ ಭ್ರಷ್ಟಾಚಾರ ಮತ್ತು ಪ್ರತ್ಯೇಕತಾವಾದವನ್ನು ಹುಟ್ಟುಹಾಕಿದೆ ಮತ್ತು ಭಯೋತ್ಪಾದನೆ ಕೊನೆಗೊಳಿಸಲು ಅದನ್ನು ತೆಗೆದುಹಾಕುವುದು ಬಹಳ ಮುಖ್ಯ ಎಂದು ವಾದಿಸಿದ್ದರು. ಅದನ್ನು ತೆಗೆದುಹಾಕಿದ ನಂತರವೂ ಅಲ್ಲಿ ಭಯೋತ್ಪಾದನೆಯನ್ನು ಇಲ್ಲವಾಗಿಸುವುದು ಮೋದಿ ಸರಕಾರಕ್ಕೆ ಸಾಧ್ಯವಾಗಿಲ್ಲ.

ಈಗ ದಿಲ್ಲಿಯ ಕೆಂಪುಕೋಟೆ ಸಮೀಪದ ಮೆಟ್ರೊ ಸ್ಟೇಷನ್ ಮುಂಭಾಗ ನಡೆದಿರುವ ಭಯಾನಕ ಸ್ಫೋಟದಲ್ಲಿ 13 ಮಂದಿ ಸಾವಿಗೀಡಾಗಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಬಾಂಬ್ ಸ್ಫೋಟದ ಈ ಕೃತ್ಯ ಅತ್ಯಂತ ಖಂಡನೀಯ ಮತ್ತು ಕಳವಳಕಾರಿ. ಈ ಪ್ರಕರಣದ ಹಿಂದೆ ಯಾರೇ ಇದ್ದರೂ ಅವರನ್ನು ಹಿಡಿದು ಶಿಕ್ಷೆ ವಿಧಿಸಲೇಬೇಕು. ಆದರೆ ತನಿಖೆ ಪಾರದರ್ಶಕವಾಗಿರಬೇಕು ಎಂಬುದು ಅಷ್ಟೇ ಮುಖ್ಯ.

ದಿಲ್ಲಿ ಸ್ಫೋಟದ ಹಿನ್ನೆಲೆಯಲ್ಲಿ ಎರಡು ವಿಷಯಗಳನ್ನು ಗಮನವಿಟ್ಟು ನೋಡಬೇಕು. ಮೊದಲನೆಯದಾಗಿ ದಿಲ್ಲಿಯ ಕೆಂಪುಕೋಟೆ ಪ್ರದೇಶವನ್ನು ದಾಳಿಯ ಕೇಂದ್ರವಾಗಿ ಆರಿಸಿಕೊಳ್ಳಲಾಗಿರುವುದು. ಅದಕ್ಕಿರುವ ಐತಿಹಾಸಿಕ ಮಹತ್ವದ ದೃಷ್ಟಿಯಿಂದ ಕೆಂಪುಕೋಟೆ ದೇಶದ ಸಾರ್ವಭೌಮ ಬಲದ ಸಂಕೇತದಂತಿದೆ. ಅಲ್ಲಿ ದಾಳಿಯಾಯಿತು ಎನ್ನುವುದು ಇಡೀ ದೇಶದ ಆತ್ಮಬಲವನ್ನು ನಡುಗಿಸುವ ಉದ್ದೇಶದ್ದೂ ಆಗಿರಬಹುದು. ಒಂದೆಡೆ ಈ ಅಂಶ ಮುಖ್ಯವಾಗುತ್ತಿರುವಾಗ, ಇನ್ನೊಂದು ಕಡೆ ಈ ಸ್ಫೋಟ ನಡೆದ ಮೇಲೂ ಮೋದಿ ಭೂತಾನ್ ಭೇಟಿಗೆ ಹೋದರು ಎನ್ನುವುದು ವಿಚಿತ್ರವಾಗಿದೆ. ಮತ್ತದರ ಬಗ್ಗೆ ಟೀಕೆಗಳೂ ಸಾಕಷ್ಟು ಬಂದಿವೆ.

ಇಲ್ಲಿ ದಾಳಿ ನಡೆದಿರುವಾಗ ಅವರು ಅಲ್ಲಿಗೆ ಹೋದರು ಮತ್ತು ಅಲ್ಲಿಂದ ಭಯೋತ್ಪಾದನೆ ವಿರುದ್ಧ ಅಬ್ಬರದ ದನಿಯಲ್ಲಿ ಮಾತಾಡಿದರು. ಪಹಲ್ಗಾಮ್ ದಾಳಿಯಾದಾಗಲೂ ಮೋದಿ ವಿದೇಶ ಪ್ರವಾಸ ಮೊಟಕುಗೊಳಿಸಿ ಬಂದರಾದರೂ ಸೀದಾ ಹೋದದ್ದು ಚುನಾವಣೆ ನಡೆಯಲಿದ್ದ ಬಿಹಾರದ ಮಧುಬನಿಗೆ. ಅಲ್ಲಿ ನಿಂತು ಅವರು ಭಯೋತ್ಪಾದನೆ ವಿರುದ್ಧ ಗುಡುಗಿದರು. ಆದರೆ, ಅದಾದ ನಂತರವೂ ದಾಳಿ ನಿಲ್ಲಲಿಲ್ಲ. ಈಗ ಮತ್ತೆ ಗುಡುಗಿದ್ದಾರೆ.

ಅಮಾಯಕರ ಪ್ರಾಣ ತೆಗೆಯುವ, ಅದೇ ಅಮಾಯಕರ ಬದುಕನ್ನೇ ಕಸಿಯುವ ಇಂಥ ಯಾವ ದಾಳಿಗಳೂ ನಡೆಯದಿರಲಿ ಎಂಬುದು ಇಡೀ ದೇಶದ ಪ್ರಾರ್ಥನೆಯೇ ಆಗಿರುತ್ತದೆ. ಆದರೆ, ಒಂದು ಸರಕಾರ ದೃಢ ಇಚ್ಛಾಶಕ್ತಿಯೊಂದಿಗೆ ನಿಲ್ಲದೇ ಹೋದರೆ, ರಾಜಕೀಯವನ್ನು ಮೀರಿ ಇದನ್ನು ತನ್ನ ಕರ್ತವ್ಯವಾಗಿ ತೆಗೆದುಕೊಳ್ಳದೇ ಹೋದರೆ, ಭಯೋತ್ಪಾದನೆ ವಿರುದ್ಧದ ಯಾವುದೇ ಮಾತುಗಳೂ ಆ ಹೊತ್ತಿನ ರಾಜಕೀಯ ಹಸಿವನ್ನು ತಣಿಸುವ ಅಬ್ಬರ ಮಾತ್ರವಾಗಿ ಉಳಿಯುತ್ತವೆ ಎಂಬುದು ಕಟು ಸತ್ಯ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆರ್.ಜೀವಿ

contributor

Similar News