ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಅಹಿಂದ ಬಲ ಯಾಕೆ ನಿರ್ಣಾಯಕ?
ಭಾಗ - 2
ಸಿದ್ದರಾಮಯ್ಯ ಅವರಿಗಿರುವ ಜನಬಲ, ಅವರಿಗಿರುವ ಸಾಮೂಹಿಕ ನಾಯಕತ್ವದ ಗುರುತು ಹೆಚ್ಚಿನದು. ಅದು ಸಿದ್ದರಾಮಯ್ಯ ಅವರ ಬದಲಿಗೆ ಮತ್ತೊಬ್ಬ ನಾಯಕನಲ್ಲಿ ಇದ್ದಕ್ಕಿದ್ದಂತೆ ಕಾಣಲು ಸಾಧ್ಯವಾಗುವ ಗುಣವಲ್ಲ. ಅಹಿಂದ ನಾಯಕರಾಗಿ ಕಾಂಗ್ರೆಸ್ ಪಕ್ಷಕ್ಕೆ ಶೇ. 25ರಷ್ಟು ಮತಗಳನ್ನು ತರುವ ಸಾಮರ್ಥ್ಯ ಅವರಿಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅವರು ಹಿಡಿತ ಹೊಂದಿದ್ದಾರೆ. ಹಾಗಾಗಿಯೇ ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿಗೆ ಬೇಕು. ರಾಜಕೀಯ ಶಕ್ತಿಯಾಗಿಯೂ ತಾತ್ವಿಕ ಬಲವಾಗಿಯೂ ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಬಿಡಿಸಲಾರದ ಭಾಗ ಮತ್ತು ಅಹಿಂದ ಅಸ್ಮಿತೆ ಸಿದ್ದರಾಮಯ್ಯನವರ ರಾಜಕಾರಣದ ಅತಿ ದೊಡ್ಡ ತಾಕತ್ತು.
ಅಹಿಂದ ಚಳವಳಿಗೆ ಕರ್ನಾಟಕದಲ್ಲಿ ಹೆಚ್ಚಿನ ಮಹತ್ವವಿದೆ. ಐವತ್ತು ವರ್ಷಗಳ ಕೆಳಗೆ ಇಡೀ ದೇಶಕ್ಕೇ ಹಿಂದುಳಿದ ವರ್ಗಗಳ ವಿಷಯವಾಗಿ ಹೊಸ ದೃಷ್ಟಿಕೋನವನ್ನು ಕೊಟ್ಟ ಎಲ್.ಜಿ. ಹಾವನೂರು ವರದಿ ಜಾರಿಯಾದದ್ದು ಕರ್ನಾಟಕದಲ್ಲಿ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಮೊದಲು ದೊರೆತದ್ದು ಕರ್ನಾಟಕದಲ್ಲಿ. 1993ರಿಂದ ಕರ್ನಾಟಕದಲ್ಲಿ ವಿಕೇಂದ್ರೀಕರಣ ವ್ಯವಸ್ಥೆ ಹಿಂದುಳಿದ ವರ್ಗಗಳಿಗೆ ಒದಗಿಸಿದ ರಾಜಕೀಯ ಪ್ರಾತಿನಿಧ್ಯ ರಾಜ್ಯ ರಾಜಕಾರಣವನ್ನೇ ಬದಲಿಸಿತು ಎಂದು ಚಿಂತಕ ನಟರಾಜ್ ಹುಳಿಯಾರ್ ಉಲ್ಲೇಖಿಸುತ್ತಾರೆ. ಅಹಿಂದ ಚಳವಳಿ ಸಮುದಾಯಗಳ ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡುತ್ತದೆ. ಅದು ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಮತ್ತು ದಲಿತರನ್ನು ಒಗ್ಗೂಡಿಸುತ್ತದೆ. ಮತಾಂತರಗೊಂಡ ದಲಿತರಿಗೂ ಮೀಸಲಾತಿ ಸೇರಿದಂತೆ ರಾಜಕೀಯ, ಶೈಕ್ಷಣಿಕ ಮತ್ತು ಸರಕಾರಿ ಉದ್ಯೋಗಗಳಲ್ಲಿ ಸಮಾನ ಅವಕಾಶಗಳನ್ನು ನೀಡಬೇಕೆಂಬುದು ಅದರ ಒತ್ತಾಯ.
ಅಹಿಂದ ಎಂಬುದು ಕರ್ನಾಟಕ ರಾಜ್ಯದ ಮೊದಲ ಹಿಂದುಳಿದ ನಾಯಕ ದೇವರಾಜ ಅರಸು ರಚಿಸಿದ ರಾಜಕೀಯ ಪರಿಭಾಷೆಯಾಗಿದ್ದು, ಅದಕ್ಕೆ ಹೊಸ ವಿಸ್ತಾರ ಕೊಟ್ಟವರು ಸಿದ್ದರಾಮಯ್ಯ. ಅಹಿಂದ ಕರ್ನಾಟಕ ರಾಜಕೀಯದಲ್ಲಿ ಮುಂದುವರಿದ ಪ್ರಬಲ ಜಾತಿ ಪ್ರಾಬಲ್ಯಕ್ಕೆ ಸವಾಲಾಗಿದೆ. ಅದು ದಮನಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಗುರಿಯೊಂದಿಗಿನ ರಾಜಕೀಯೇತರ ಸಾಮಾಜಿಕ ಚಳವಳಿಯಾಗಿದೆ. ಕೋಲಾರದಲ್ಲಿ ಅಹಿಂದ ಚಿಂತನೆ ಆರಂಭಗೊಂಡ ಬಳಿಕ ಸಿದ್ದರಾಮಯ್ಯನವರ ಪ್ರವೇಶದಿಂದಾಗಿ ಅದಕ್ಕೊಂದು ದೊಡ್ಡ ರಾಜಕೀಯ ವ್ಯಾಪ್ತಿ ಸಿಕ್ಕಿತು.
ಅಹಿಂದದ ಹಿನ್ನೆಲೆಯನ್ನೊಮ್ಮೆ ಸಂಕ್ಷಿಪ್ತವಾಗಿ ಗಮನಿಸುವುದಾದರೆ, 1997ರಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ನಡೆದ ಒಕ್ಕಲಿಗ ಸಮಾವೇಶದಲ್ಲಿ ಬಾಲ ಗಂಗಾಧರಸ್ವಾಮೀಜಿ ಒಕ್ಕಲಿಗರ ಪ್ರಾಬಲ್ಯವೇ ಕಾಣಬೇಕೆಂದು ಪ್ರತಿಪಾದಿಸಿದ್ದಕ್ಕೆ ಉತ್ತರವಾಗಿ ಅಹಿಂದ ಜನ್ಮತಾಳಿತು. ಆರಂಭದಲ್ಲಿ ಅದು ‘ಹಿಂದುಳಿದ ವರ್ಗಗಳ ಸಮರಶೀಲ ಒಕ್ಕೂಟ’ ಎಂಬ ಹೆಸರಿನಲ್ಲಿತ್ತು. ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಮತ್ತು ದಲಿತರು ಒಗ್ಗೂಡಿ ರಾಜಕೀಯ ಮಾಡುವ ಉದ್ದೇಶದಿಂದ ಅಹಿಂದ ಸ್ಥಾಪನೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕಾನಾಥ್ ಪಾತ್ರವೂ ಅಹಿಂದ ಸ್ಥಾಪನೆಯಲ್ಲಿ ಪ್ರಮುಖವಾಗಿದೆ.
ಕೋಲಾರದಲ್ಲಿ 1997ರಲ್ಲಿ ಮೊದಲ ಅಹಿಂದ ಸಭೆ ಕರೆಯುವುದರೊಂದಿಗೆ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಒಕ್ಕೂಟ ಅಹಿಂದವಾಗಿ ಅಸ್ತಿತ್ವಕ್ಕೆ ಬಂತು. ದೇವೇಗೌಡರ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಜೆಡಿಎಸ್‌ನಿಂದ ದೂರವಾಗಿದ್ದ ಆರ್.ಎಲ್. ಜಾಲಪ್ಪ ಅಹಿಂದದ ಜೊತೆಯಾಗಿದ್ದರು. ಅಹಿಂದದ ಮೊದಲ ಸಮಾವೇಶ 1998ರಲ್ಲಿ ನಡೆಯಿತು. ಬಳಿಕ ಸಿದ್ದರಾಮಯ್ಯನವರು ಅಹಿಂದ ನಾಯಕತ್ವ ವಹಿಸಿಕೊಂಡರು. ಸಮಾವೇಶಗಳನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಿದರು.
ಸಿದ್ದರಾಮಯ್ಯನವರ ರಾಜಕೀಯ ಬದುಕನ್ನು ನೋಡುವಾಗ, ಕೆಲವು ಪ್ರಮುಖ ಘಟ್ಟಗಳಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳು ಅಥವಾ ಅಂಥ ಅವಕಾಶವನ್ನು ಅವರಿಗೆ ತಂದುಕೊಟ್ಟ ಸಂದರ್ಭಗಳು ಮಹತ್ವದವಾಗಿ ಕಾಣಿಸುತ್ತವೆ. ಅವುಗಳಲ್ಲಿ ಅತಿ ಮುಖ್ಯವಾಗಿರುವುದೇ, ಸಿದ್ದರಾಮಯ್ಯನವರು ನಡೆಸಿದ್ದ ಅಹಿಂದ ಸಮಾವೇಶಗಳು. ಜೆಡಿಎಸ್‌ನಲ್ಲಿದ್ದಾಗಲೇ ಸಿದ್ದರಾಮಯ್ಯ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಮತ್ತು ದಲಿತರನ್ನು ಒಟ್ಟುಗೂಡಿಸಲು ಮುಂದಾಗಿದ್ದರು. ರಾಜ್ಯಾದ್ಯಂತ ಅಹಿಂದ ಸಮಾವೇಶಗಳನ್ನು ಆರಂಭಿಸಿ ಜನಸಮೂಹವನ್ನು ಸೆಳೆಯುತ್ತಿದ್ದಂತೆ ಅದು ರಾಜಕೀಯ ವಲಯದಲ್ಲಿ ವಿರೋಧಿಗಳ ಕಣ್ಣು ಕುಕ್ಕಲಾರಂಭಿಸಿತು. 2005ರಲ್ಲಿ ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯನವರು ನಡೆಸಿದ್ದ ಅಹಿಂದ ಸಮಾವೇಶವಂತೂ ಅವರ ರಾಜಕೀಯ ಬದುಕಿನಲ್ಲಿ ದೊಡ್ಡ ತಿರುವಿಗೆ ಕಾರಣವಾಯಿತು. 2006ರಲ್ಲಿ ಸಿದ್ದರಾಮಯ್ಯ ಕೋಲಾರದಲ್ಲಿ ಅಹಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೂ, ಅಹಿಂದದ ಪ್ರಮುಖ ವಿದ್ಯಮಾನ 2005ರ ಜುಲೈನಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶವಾಗಿತ್ತು. ಆ ಸಮಾವೇಶದ ಬಳಿಕ ದೇವೇಗೌಡರಿಂದಲೇ ವಿರೋಧ ಬಂತು. ಕಡೆಗೆ ಸಿದ್ದರಾಮಯ್ಯ ಜೆಡಿಎಸ್‌ನಿಂದಲೇ ಹೊರಬೀಳಬೇಕಾಯಿತು. 2000ದ ದಶಕದ ಮಧ್ಯಭಾಗದಲ್ಲಿ ಕರ್ನಾಟಕ ರಾಜಕೀಯದಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಪ್ರಾಬಲ್ಯವನ್ನು ಪ್ರಶ್ನಿಸಿದ ಅಹಿಂದದ ಜೊತೆಗಿನ ಗುರುತಿಸಿಕೊಳ್ಳುವಿಕೆ ಸಿದ್ದರಾಮಯ್ಯನವರ ರಾಜಕೀಯ ಕಾರ್ಯತಂತ್ರದ ಪ್ರಮುಖ ಭಾಗವಾಗಿತ್ತು.
ಕಾಂಗ್ರೆಸ್ ಸೇರಿದ ನಂತರ, ಅವರು ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಗೆದ್ದರು. ಅದು ಜೆಡಿಎಸ್ ಮತ್ತು ಬಿಜೆಪಿ ಅವರ ವಿರುದ್ಧ ನಡೆಸಿದ್ದ ತೀವ್ರ ಪ್ರಚಾರದ ಹೊರತಾಗಿಯೂ ಅವರ ರಾಜಕೀಯ ಶಕ್ತಿಯನ್ನು ಸ್ಥಾಪಿಸಿದ ನಿರ್ಣಾಯಕ ಗೆಲುವಾಗಿತ್ತು. ಅಹಿಂದದ ಮೂಲ ನೆಲೆಯಾದ ಕೋಲಾರದಲ್ಲಿ ಕೂಡ ನಂತರದ ವರ್ಷಗಳಲ್ಲಿ ಸಿದ್ದರಾಮಯ್ಯ ಪ್ರಭಾವಿಯಾದರಾದರೂ, 2005ರ ಹುಬ್ಬಳ್ಳಿಯ ಸಮಾವೇಶ ಅಹಿಂದ ನಾಯಕನಾಗಿ ಅವರ ಇಮೇಜ್ ಅನ್ನು ಭದ್ರಪಡಿಸಿದ ನಿರ್ಣಾಯಕ ಕ್ಷಣವಾಗಿತ್ತು.
2013ರಲ್ಲಿ ಸಂಪೂರ್ಣ ಬಹುಮತ ಸಿಕ್ಕಿದಾಗ ಕಾಂಗ್ರೆಸ್‌ನಿಂದ ಪ್ರಶ್ನಾತೀತ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು ಅಹಿಂದ ನಾಯಕ ಸಿದ್ದರಾಮಯ್ಯ. ಅದಾಗಿ ದಶಕದ ನಂತರ ಎರಡನೇ ಬಾರಿಗೆ 2023ರಲ್ಲಿ ಅವರು ರಾಜ್ಯದ ಮುಖ್ಯಮಂತ್ರಿಯಾದರು. ಸಿಎಂ ಪಟ್ಟಕ್ಕಾಗಿ ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದಾಗ, ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರನ್ನೇ ಆರಿಸಿತು. ಸಿದ್ದರಾಮಯ್ಯನವರ ಜನಪ್ರಿಯತೆ, ಅವರು ಬಡವರ ಪರ ಹೊಂದಿರುವ ಕಾಳಜಿ, ದೀನದಲಿತರ ಪರ ನಾಯಕನೆಂಬ ಅವರ ಹೆಗ್ಗಳಿಕೆ ಎಲ್ಲವೂ ಅವರ ಕೈಹಿಡಿದವು.
ಅಹಿಂದ ನಾಯಕರಾಗಿ, ಆ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್‌ನಲ್ಲಿ ಅವರು ದೊಡ್ಡ ಎತ್ತರವನ್ನು ಮುಟ್ಟಿದ್ದಾರೆ. 1970ರ ದಶಕದಲ್ಲಿ ದೇವರಾಜ ಅರಸು ಹೊಂದಿದ್ದ ಜನಪ್ರಿಯತೆ, ಇಮೇಜ್ ಅನ್ನೇ ಹೊಂದಿರುವ ಮತ್ತೊಬ್ಬ ರಾಜಕಾರಣಿಯೆಂದರೆ ಅವರು ಸಿದ್ದರಾಮಯ್ಯ. ಕರ್ನಾಟಕದ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತ ನಾಯಕರ ಎದುರು ರಾಜಕೀಯ ಪ್ರಭಾವ ಮೆರೆದ ಅಹಿಂದ ನಾಯಕ ಅವರು. ಇದೆಲ್ಲವನ್ನೂ ಗಮನಿಸುವಾಗ, ಅಷ್ಟು ಸುಲಭಕ್ಕೆ ಸಿದ್ದರಾಮಯ್ಯನವರನ್ನು ಬದಲಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ ಮತ್ತು ಅದು ಅಂಥದೊಂದು ನಿರ್ಧಾರಕ್ಕೆ ಬಂದದ್ದೇ ಆದರೆ, ಕಾಂಗ್ರೆಸ್‌ನ ಅತಿದೊಡ್ಡ ರಾಜಕೀಯ ಪ್ರಮಾದಗಳಲ್ಲಿ ಒಂದಾಗಲಿದೆ.
ಅಧಿಕಾರ ಬದಲಾವಣೆಯ ಚರ್ಚೆಯಂತೂ ಜೋರಾಗಿಯೇ ಇದೆ. ಸ್ವಲ್ಪ ಸಮಯದ ಹಿಂದೆ, ಸಿದ್ದರಾಮಯ್ಯ ನೇತೃತ್ವದಲ್ಲಿ ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ರಚನೆಯಾದದ್ದು ರಾಜಕೀಯ ವಲಯದಲ್ಲಿ ಬಹಳಷ್ಟು ಸಂಚಲನ ಮೂಡಿಸಿತು. ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆದುಕೊಳ್ಳಲಾಗುತ್ತದೆಯೇ ಅಥವಾ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಅವರು ಅಡ್ಡಿಯಾಗುವುದನ್ನು ನಿವಾರಿಸುವ ತಂತ್ರವಾಗಿದೆಯೇ ಎಂಬೆಲ್ಲ ಪ್ರಶ್ನೆಗಳೂ ಹುಟ್ಟಿಕೊಂಡವು.
ಅಧಿಕಾರ ಹಂಚಿಕೆ ಸೂತ್ರದ ಮೇಲೆಯೇ ಸಿಎಂ ಹುದ್ದೆಗೆ ಸಿದ್ದರಾಮಯ್ಯ ಅವರನ್ನು ನೇಮಿಸಲಾಗಿತ್ತು, ಎರಡೂವರೆ ವರ್ಷಗಳ ಬಳಿಕ ನಾಯಕತ್ವ ಬದಲಾವಣೆ ಆಗಲಿದೆ ಎಂದೆಲ್ಲ ಮಾತುಗಳಿದ್ದವಾದರೂ, ಅಧಿಕೃತವಾಗಿ ಯಾರೂ ಅದರ ಬಗ್ಗೆ ಹೇಳಿದ್ದಿಲ್ಲ. ಇದರ ನಡುವೆಯೇ ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯದ ಭರಾಟೆ ಆಗೀಗ ಜೋರಾಗುತ್ತ, ಹಾಗೆಯೇ ತಣ್ಣಗಾಗುತ್ತ ಇರುವುದನ್ನೂ ನೋಡಿದ್ದೇವೆ. ಈಗ ನವೆಂಬರ್ 20ಕ್ಕೆ ಸರಕಾರ ಎರಡೂವರೆ ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆ ಮಾತು ಜೋರಾಗಿದೆ.
ಆದರೆ, ಸಿದ್ದರಾಮಯ್ಯನವರನ್ನು ಯಾವ ಕಾರಣ ನೀಡಿ ಹೈಕಮಾಂಡ್ ಬದಿಗೆ ಸರಿಸುತ್ತದೆ? ಅವರ ವಿರುದ್ಧ ಯಾವುದೇ ಹೇಳಿಕೊಳ್ಳುವಂಥ ಆರೋಪಗಳಿಲ್ಲದಿರುವಾಗ, ಪಕ್ಷದ ದಿಲ್ಲಿ ನಾಯಕರ ಬಳಿ ಏನು ಸಮರ್ಥನೆಗಳಿರಲು ಸಾಧ್ಯ? ಮುಖ್ಯವಾಗಿ, ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿ ಯಾವ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಿದ್ದಾರೋ ಅದನ್ನೇ ಸಿದ್ದರಾಮಯ್ಯ ಇನ್ನೂ ತೀವ್ರವಾಗಿ ಪ್ರತಿಪಾದಿಸುತ್ತಾರೆ. ಯಾರ ಪರವಾಗಿ ರಾಹುಲ್ ಮಾತಾಡುತ್ತಿದ್ದಾರೊ ಅದೇ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಪಾಲಿನ ದೊಡ್ಡ ದನಿಯಾಗಿ ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿ ನಿಂತಿದ್ದಾರೆ. ಯಾವ ಜಾತಿ ಜನಗಣತಿ ರಾಷ್ಟ್ರಮಟ್ಟದಲ್ಲಿ ರಾಹುಲ್ ಅವರ ಇಮೇಜ್ ಅನ್ನು ಹೆಚ್ಚಿಸಿದವೋ ಅದರ ಏಕೈಕ ಪ್ರಬಲ ಪ್ರತಿಪಾದಕರಾಗಿ ರಾಜ್ಯದಲ್ಲಿ ಕಾಣುತ್ತಿರುವ ನಾಯಕ ಸಿದ್ದರಾಮಯ್ಯ. ಸಿದ್ದರಾಮಯ್ಯ ಕೊಟ್ಟಿರುವ ಗ್ಯಾರಂಟಿಗಳು ಕೂಡ ರಾಹುಲ್ ಆಶಯವನ್ನೇ ಪ್ರತಿಪಾದಿಸಿದ್ದು, ಅವರ ಸರಕಾರದ ಬಗೆಗಿನ ಜನವಿಶ್ವಾಸವನ್ನು ಹೆಚ್ಚಿಸಿವೆ ಮಾತ್ರವಲ್ಲ, ಬಿಜೆಪಿ ಹರಡಿದ್ದ ಸುಳ್ಳುಗಳು ಮತ್ತು ಭಯದ ಭೂತಗಳನ್ನು ನಿವಾರಿಸಿವೆ.
ಹೀಗೆಲ್ಲ ಇರುವಾಗ, ಕೇವಲ ಅಧಿಕಾರ ಹಂಚಿಕೆ ಸೂತ್ರವಿತ್ತು ಎಂಬ, ಯಾರಿಗೂ ತಿಳಿದಿರದ ಒಂದು ನೆಪ ಮುಂದೆ ಮಾಡಿ ಸಿದ್ದರಾಮಯ್ಯನವರನ್ನು ಕೆಳಗಿಳಿಸುವುದನ್ನು ಕಾಂಗ್ರೆಸ್ ಅರಗಿಸಿಕೊಳ್ಳಲು ಸಾಧ್ಯವೆ? ಈ ಹಂತದಲ್ಲಿ, ಅವರ ರಾಜಕೀಯ ಬದುಕಿನ ನಿರ್ಣಾಯಕ ಘಟ್ಟಗಳಲ್ಲೆಲ್ಲ ರಕ್ಷಾಕವಚದಂತೆ ಒದಗಿರುವ ಅಹಿಂದ ಮತ್ತೊಮ್ಮೆ ಅವರ ಬೆನ್ನಿಗೆ ನಿಲ್ಲುವ ಸೂಚನೆಗಳು ಕಂಡಿವೆ. ಅಗತ್ಯ ಬಿದ್ದಾಗೆಲ್ಲ ಅಹಿಂದವನ್ನು ಸಿದ್ದರಾಮಯ್ಯ ಕೂಡ ತಮ್ಮ ರಾಜಕೀಯ ಉಳಿವಿನ ಸಾಧನವಾಗಿ ಬಳಸಿಕೊಂಡಿರುವುದೂ ನಿಜ. ಈಗಲೂ ಮತ್ತೊಮ್ಮೆ ಅವರು ಅದೇ ಅಸ್ತ್ರ ಬಳಸಿ ಅಬ್ಬರಿಸಿದರೂ ಅಚ್ಚರಿಪಡಬೇಕಿಲ್ಲ. ಅದರ ಹೊರತಾಗಿಯೂ, ಕಾಂಗ್ರೆಸ್ ಹೈಕಮಾಂಡ್ ಅವರ ಮನವೊಲಿಸಿಯೇ ಪಟ್ಟದಿಂದ ಕೆಳಗಿಳಿಸಿದರೂ, ಕಾಂಗ್ರೆಸ್‌ಗೆ ಮುಂದಿನ ದಿನಗಳು ಬಹುಶಃ ಕಷ್ಟಕಾಲವಾಗಿ ಕಾಡಬಹುದು.