ಹೊಸಪೇಟೆ: ಜೂ.24, 25ರಂದು ಅಂಚೆ ಕಚೇರಿಗಳಲ್ಲಿ ವಹಿವಾಟು ಸ್ಥಗಿತ
ವಿಜಯನಗರ: ಹೊಸಪೇಟೆ ಪ್ರಧಾನ ಕಚೇರಿ ವ್ಯಾಪ್ತಿಗೆ ಬರುವ ಎಲ್ಲಾ ಉಪ ಅಂಚೆ ಕಚೇರಿ ಹಾಗೂ ಶಾಖಾ ಅಂಚೆ ಕಚೇರಿಗಳಲ್ಲಿ ಹೊಸ ಎ.ಪಿ.ಟಿ 2.0 ತಂತ್ರಾಂಶ ಅಳವಡಿಕೆ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಅಂಚೆ ಕಚೇರಿಗಳಲ್ಲಿ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಅಂಚೆ ಅಧೀಕ್ಷಕ ಪಿ.ಚಿದಾನಂದ ತಿಳಿಸಿದ್ದಾರೆ.
ಭಾರತೀಯ ಅಂಚೆ ಇಲಾಖೆಯು ಆಧುನಿಕ ಹಾಗೂ ಗ್ರಾಹಕ ಸ್ನೇಹಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ, ಆಧುನಿಕ ತಂತ್ರಜ್ಞಾನದ ನೆಟ್ ವಟ್ವರ್ಕ್ ಸಮಸ್ಯೆಯಂತಹ ತೊಡಕುಗಳಿಂದ ಗ್ರಾಹಕರ ಸೇವೆಗಳಿಗೆ ಚ್ಯುತಿ ಬರದಂತೆ ಗಮನಹರಿಸಿ ಅಡ್ವಾನ್ಸ್ ಪೋಸ್ಟಲ್ ಟೆಕ್ನಾಲಜಿ 2.0 (ಎ.ಪಿ.ಟಿ 2.0)ಯನ್ನು ದೇಶಾದ್ಯಂತ ಎಲ್ಲಾ ಅಂಚೆ ಕಚೇರಿಗಳಲ್ಲಿ ಅಳವಡಿಸಲು ಮುಂದಾಗಿದೆ. ಬಳ್ಳಾರಿ ಅಂಚೆ ವಿಭಾಗದ ಹೊಸಪೇಟೆ ಪ್ರಧಾನ ಅಂಚೆ ಕಚೇರಿ ಹಾಗೂ ಅದರಡಿಯಲ್ಲಿ ಬರುವ ಎಲ್ಲಾ ಉಪ ಅಂಚೆ ಕಚೇರಿಗಳು ಮತ್ತು ಶಾಖಾ ಅಂಚೆ ಕಚೇರಿಗಳಲ್ಲಿ ಎ.ಪಿ.ಟಿ 2.0 ತಂತ್ರಾಂಶವನ್ನು ಅಳವಡಿಸಲು ಮುಂದಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.
ಈ ಚಟುವಟಿಕೆಯ ಪೂರ್ವಭಾವಿಯಾಗಿ ಬಳ್ಳಾರಿ ಅಂಚೆ ವಿಭಾಗದ ವ್ಯಾಪ್ತಿಗೆ ಬರುವ ಹೊಸಪೇಟೆ ಪ್ರಧಾನ ಅಂಚೆ ಕಚೇರಿ, ಹೊಸಪೇಟೆ ನಗರದಲ್ಲಿರುವ ಇತರೆ ಎಲ್ಲಾ ಅಂಚೆ ಕಚೇರಿಗಳು, ಅರಸೀಕೆರೆ, ಚಿಗಟೇರಿ, ಚಿತ್ತವಾಡಗಿ, ಚೋರನೂರು, ಚಿಕ್ಕಜೋಗಿಹಳ್ಳಿ, ದೇವಲಾಪುರ, ಹಗರಿಬೊಮ್ಮನಹಳ್ಳಿ, ಹಂಪಸಾಗರ, ಹಂಪಿ, ಹಂಪಿ ಪವರ್ ಹೌಸ್, ಹೊಸಪೇಟೆ ಎನ್ಸಿ ಕಾಲನಿ, ಹೊಸಹಳ್ಳಿ, ಹೊಳಲು, ಹೂವಿನಹಡಗಲಿ, ಹಿರೇಹಡಗಲಿ, ಹರಪನಹಳ್ಳಿ, ಹಲವಾಗಲು, ಇಟ್ಟಿಗಿ, ಕಮಲಾಪುರ, ಕಂಪ್ಲಿ, ಕೂಡ್ಲಿಗಿ, ಕೊಟ್ಟೂರು, ಕೆ.ಯು.ಕ್ಯಾಂಪಸ್, ಮರಿಯಮ್ಮನಹಳ್ಳಿ, ಉಜ್ಜಿನಿ, ಪಾಪಿನಾಯಕನಹಳ್ಳಿ, ತಂಬ್ರಹಳ್ಳಿ, ತೆಲಿಗಿ, ಟಿ.ಬಿ.ಡ್ಯಾಂ, ಗುಡೇಕೋಟೆ ಉಪ ಅಂಚೆ ಕಚೇರಿಗಳು ಹಾಗೂ ಸಂಬಂಧಿತ ಶಾಖಾ ಅಂಚೆ ಕಚೇರಿಗಳಲ್ಲಿ ಜೂ.24 ಮತ್ತು 25ರಂದು ಯಾವುದೇ ವ್ಯವಹಾರ, ವಹಿವಾಟು ಇರುವುದಿಲ್ಲ. ಹಾಗಾಗಿ ಅಂಚೆ ಕಚೇರಿಯ ಗ್ರಾಹಕರು ಸಹಕರಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.