ಮದ್ಯಪಾನ ವ್ಯಸನ ಸ್ಮಶಾನಕ್ಕೆ ಆಹ್ವಾನ : ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ
ವಿಜಯನಗರ(ಹೊಸಪೇಟೆ): ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಡಾ.ಮಹಾಂತ ಶಿವಯೋಗಿಗಳು ಶ್ರಮಿಸಿದವರು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಸಭಾಂಗದಲ್ಲಿ ಜಿಲ್ಲಾಡಳಿತ, ಜಿಪಂ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಏರ್ಪಡಿಸಿದ್ದ ವ್ಯಸನ ಮುಕ್ತ ದಿನಾಚರಣೆಯಲ್ಲಿ ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಶುಕ್ರವಾರ ಮಾತನಾಡಿದರು. ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ ವ್ಯಸನ ಮುಕ್ತ ಸಮಾಜದ ಕನಸು ಕಂಡಿದ್ದ ಡಾ.ಮಹಾಂತ ಶಿವಯೋಗಿ ಸ್ವಾಮೀಜಿಯವರು 1975 ರಿಂದ ಸಾಮಾಜಿಕ ಕ್ರಾಂತಿಗೆ ಮುನ್ನಡಿ ಬರೆದರು. ಮಹಾಂತ ಜೋಳಿಗೆ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾಗಿತ್ತು. ಮದ್ಯಪಾನ ಸೇರಿ ದುಶ್ಚಟಗಳಿಂದ ವ್ಯಕ್ತಿಯನ್ನು ಸ್ಮಶಾನಕ್ಕೆ ಅಹ್ವಾನಿಸಿದಂತೆ ಎಂಬುದನ್ನು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದರು. ಜಾತಿ, ಮತ, ಪಂಗಡ, ಧರ್ಮ, ಭಾಷೆ ದೇಶದಲ್ಲಿ ಮಾತ್ರವಲ್ಲದೇ ಇಂಗ್ಲೆಂಡ್ ಸೇರಿದಂತೆ ವಿವಿಧ ವಿದೇಶದಲ್ಲೂ ಮಹಾಂತ ಶಿವಯೋಗಿಗಳು ಜೋಳಿಗೆ ಹಿಡಿದು ಜನರಲ್ಲಿ ದುಶ್ಚಟಗಳ ಭಿಕ್ಷೆ ಬೇಡಿದ್ದರು. ಇಂತಹ ಮಹನೀಯರ ಸ್ಮರಣೆಗೆ ರಾಜ್ಯ ಸರ್ಕಾರ ಆ.1 ರಂದು ರಾಜ್ಯಾದ್ಯಂತ ವ್ಯಸನ ಮುಕ್ತ ದಿನವನ್ನಾಗಿ ಆಚರಿಸಲು ನಿರ್ಧರಿಸಿ ಆದೇಶಿಸಿರುವುದು ಗಮನಾರ್ಹವಾಗಿದೆ. ಯುವಜನತೆ ವ್ಯಸನಗಳಿಂದ ಮುಕ್ತವಾಗಲು ಈ ದಿನಾಚರಣೆ ಪ್ರೇರಣೆಯಾಗಬೇಕಿದೆ ಎಂದರು.
ಈ ವೇಳೆ ಶಿರೇಸ್ತದಾರರಾದ ಮನೋಜ್, ಪ್ರಿಯದರ್ಶಿನಿ, ವಾರ್ತಾ ಇಲಾಖೆ ಸಿಬ್ಬಂದಿಗಳಾದ ರಾಮಾಂಜನೇಯ, ಅಶೋಕ್ ಉಪ್ಪಾರ, ಪಿ.ಕೃಷ್ಣಸ್ವಾಮಿ, ತಾಯೇಶ್, ಕಿಶೋರ್, ತಿಪ್ಪೇಶ್, ದೇವರಾಜ್ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿಗಳು, ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.