×
Ad

ಎಸ್‍ಸಿ ಪಟ್ಟಿಗೆ ‘ಲಿಂಗಾಯತ ಬೇಡ ಜಂಗಮ’ ಸೇರ್ಪಡೆ ಅಸ್ಪೃಶ್ಯ ವಿರೋಧಿ ನಡೆ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

Update: 2025-05-20 18:03 IST

ಮಲ್ಲಿಕಾರ್ಜುನ ಖರ್ಗೆ 

ಹೊಸಪೇಟೆ : ‘ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರ ಕೈಗೊಂಡಿರುವ ಜಾತಿ ಸಮೀಕ್ಷೆಯಲ್ಲಿ ‘ಲಿಂಗಾಯತ ಬೇಡ ಜಂಗಮ’ ಸಮುದಾಯವು ತಾವು ಎಸ್‍ಸಿ ಎಂದು ತೋರಿಸುತ್ತಿರುವುದು ಅಸ್ಪೃಶ್ಯ ವಿರೋಧಿ, ಮಾತ್ರವಲ್ಲ ದಲಿತ ವಿರೋಧಿ ನಡೆಯಾಗಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪಿಸಿದ್ದಾರೆ.

ಮಂಗಳವಾರ ರಾಜ್ಯ ಸರಕಾರದಿಂದ ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಸಮರ್ಪಣೆ ಸಂಕಲ್ಪ ಸಮಾವೇಶ’ವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರ ಸಮೀಕ್ಷೆ ನಡೆಸುತ್ತಿದೆ. ಒಳ ಮೀಸಲಾತಿಗೆ ನಾನೆಂದೂ ವಿರೋಧ ಮಾಡಿಲ್ಲ, ಇದಕ್ಕೆ ನನ್ನ ಯಾವುದೇ ರೀತಿಯ ವಿರೋಧವೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಆದರೆ, ಲಿಂಗಾಯತ ಸಮುದಾಯದಲ್ಲಿರುವ ಬೇಡ ಜಂಗಮರನ್ನು ನೀವು ಎಸ್‍ಸಿ ಪಟ್ಟಿಗೆ ಸೇರಿಸುತ್ತಿದ್ದೀರಿ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕೇವಲ 400-500 ಜನರಷ್ಟೇ ಇದ್ದ ಬೇಡ ಜಂಗಮ ಸಮುದಾಯದವರು ಇಂದು ಸಮೀಕ್ಷೆಯಲ್ಲಿ 4 ಲಕ್ಷ ಮಂದಿ ಪರಿಶಿಷ್ಟ ಜಾತಿಯ(ಎಸ್‍ಸಿ) ಪಟ್ಟಿಗೆ ಹೇಗೆ ಬಂದರು’ ಎಂದು ಮಲ್ಲಿಕಾರ್ಜುನ ಖರ್ಗೆ ಖಾರವಾಗಿ ಪ್ರಶ್ನಿಸಿದರು.

‘ಹಿಂದುಳಿದ ಲಿಂಗಾಯತರಲ್ಲಿನ ಬಡ ವರ್ಗದವರಿಗೆ ಅಗತ್ಯ ಬಿದ್ದರೆ ಪ್ರೊತ್ಸಾಹ ನೀಡೋಣ. ಆದರೆ ಬೇಡ ಜಂಗಮರು ತಾವು ಎಸ್‍ಸಿ ಎಂದು ತೋರಿಸುವುದು ತಪ್ಪು. ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವವರನ್ನು ಜೈಲಿಗೆ ಹಾಕಬೇಕು. ಈ ಬಗ್ಗೆ ರಾಜ್ಯ ಸರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಗಮನಹರಿಸಬೇಕು' ಎಂದು ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು.

‘ಜಾತಿಗಣತಿ ಬಗ್ಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೊದಲು ಮಾತನಾಡಿದಾಗ ಟೀಕೆ ಮಾಡಿದರು. ಆದರೆ ಇದೀಗ ರಾಹುಲ್ ಗಾಂಧಿ ಮಾತಿಗೆ ಮಣಿದ ಪ್ರಧಾನಿ ಮೋದಿ ಸಂಪುಟ ಸಭೆ ಮಾಡಿ ಜಾತಿ ಗಣತಿಗೆ ಒಪ್ಪಿಗೆ ನೀಡಿದ್ದಾರೆ. ರಾಜ್ಯದಲ್ಲಿ ಜಾತಿಗಣತಿ ಅನುಷ್ಟಾನ ಅಚ್ಚುಕಟ್ಟಾಗಿ ನಡೆಯಬೇಕು. ಜಾತಿ ಗಣತಿ ಅನುಷ್ಟಾನದಿಂದ ಯಾವುದೇ ಕಾರಣಕ್ಕೂ ರಾಹುಲ್ ಗಾಂಧಿಗೆ ಕೆಟ್ಟ ಹೆಸರು ಬರುವಂತೆ ಮಾಡಬಾರದು’

-ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News