×
Ad

ವಿಜಯನಗರ | ಮಾ.7ರಂದು ತುಂಗಭದ್ರಾ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

Update: 2026-03-03 21:45 IST

ವಿಜಯನಗರ / ಹೊಸಪೇಟೆ : ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಎಂಬ ಆಗ್ರಹದೊಂದಿಗೆ ಮಾರ್ಚ್ 7ರಂದು ರಾಯಚೂರು ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು) ತಿಳಿಸಿದೆ.

ಸಮಾವೇಶದ ಪೋಸ್ಟರ್ ಅನ್ನು ಹೊಸಪೇಟೆಯಲ್ಲಿ ಸಂಘದ ಅಧ್ಯಕ್ಷ ಕೆ. ನಾಗಲಿಂಗಸ್ವಾಮಿ ಬಿಡುಗಡೆ ಮಾಡಿದರು.

ಸಮಾವೇಶವನ್ನು ಮಾಜಿ ಕಾರ್ಮಿಕ ಸಚಿವರು ಹಾಗೂ ಹಿರಿಯ ಕಾರ್ಮಿಕ ನಾಯಕ ಎಸ್. ಕೆ. ಕಾಂತ್ ಉದ್ಘಾಟಿಸಲಿದ್ದು, ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಫ್ಟನ್ ಡಿ'ರೊಜಾರಿಯೊ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ಪ್ರಮುಖ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ತುಂಗಭದ್ರಾ ನೀರಾವರಿ ಯೋಜನೆಯಲ್ಲಿ ಖಾಯಂ ಹುದ್ದೆಗಳು ಇದ್ದರೂ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸಂಘ ಆರೋಪಿಸಿದೆ. ಸರ್ಕಾರದ ನಿರ್ದೇಶನ ಹಾಗೂ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಅನುಮೋದನೆ ಇದ್ದರೂ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸುವ ಕ್ರಮ ಜಾರಿಯಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಕಳೆದ 25–30 ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರಿಗೆ ನಿರಂತರ ಕೆಲಸ ನೀಡಿ ಖಾಯಂ ಕೆಲಸಗಾರರಾಗಿ ಪರಿಗಣಿಸಿ ಬದುಕುವ ವೇತನ ಸೇರಿದಂತೆ ಎಲ್ಲಾ ಹಕ್ಕುಗಳನ್ನು ರಕ್ಷಿಸಬೇಕು ಎಂಬುದು ಸಮಾವೇಶದ ಪ್ರಮುಖ ಒತ್ತಾಯವಾಗಿದೆ. ಸಿಲ್ಟ್ ತೆರವು ಮತ್ತು ಸೇವಾ ರಸ್ತೆ ಸುಧಾರಣೆ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ನೀಡುವ ಬದಲು ಕಾರ್ಮಿಕರ ಕೈಗಳಿಗೆ ನೀಡಬೇಕು ಎಂದು ಸಂಘ ಆಗ್ರಹಿಸಿದೆ.

ಯರಮರಸ್, ಸಿರಿವಾರ, ಸಿಂಧನೂರು, ವಡ್ಡರಟ್ಟಿ, ಬಳ್ಳಾರಿ, ಮುಂಡರಗಿ ಹಾಗೂ ಮುನಿರಾಬಾದ್ ವಿಭಾಗದ ಕಾರ್ಮಿಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News