ಅರಸೀಕೆರೆ ಸರ್ಕಾರಿ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಹರಪನಹಳ್ಳಿ: ಅರಸೀಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2025-26 ಕಾರ್ಯಕ್ರಮವು ಮಂಗಳವಾರ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಸಮೂಹ ಸಂಪನ್ಮೂಲ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ವೈವಿಧ್ಯಮಯ ಪ್ರತಿಭೆಗಳನ್ನು ಪ್ರದರ್ಶಿಸಿದರು.
ವಿದ್ಯಾರ್ಥಿಗಳು ಛದ್ಮವೇಷ, ಕ್ಲೇ ಮಾಡೆಲಿಂಗ್, ಆಶುಭಾಷಣ, ಕಂಠಪಾಠ, ಧಾರ್ಮಿಕ ಪಠಣ, ಲಘು ಸಂಗೀತ, ಕಥೆ ಹೇಳುವುದು, ಚಿತ್ರಕಲೆ, ಬಣ್ಣಹಚ್ಚುವಿಕೆ, ಅಭಿನಯಗೀತೆ, ಭಕ್ತಿಗೀತೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ದೈಹಿಕ ಪರಿವಿಕ್ಷಕರಾದ ಷಣ್ಮುಖಪ್ಪ ಅವರು, ‘ಶಾಲಾ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೊಂದು ವೇದಿಕೆ ಒದಗಿಸುವಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಪ್ರಮುಖ ಪಾತ್ರ ವಹಿಸಿದೆ. ಈ ಕಾರ್ಯಕ್ರಮದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು. ಮಕ್ಕಳು ಅತ್ಯಂತ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಖುಷಿ ತಂದಿದೆ’ ಎಂದರು.
ಅರಸೀಕೆರೆ ಕ್ಲಸ್ಟರ್ ಮಟ್ಟದ ಅಧಿಕಾರಿ ಸಿದ್ದೇಶರ ಮಾತನಾಡಿ, "ವಿದ್ಯಾರ್ಥಿ ಜೀವನದಲ್ಲಿ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿಯಂತಹ ವೇದಿಕೆಗಳ ಅವಶ್ಯಕತೆ ಬಹಳಷ್ಟಿದೆ. ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯ. ಇದೆಲ್ಲಕ್ಕಿಂತ ಭಾಗವಹಿಸುವುದು ಮುಖ್ಯವಾಗಿದೆ. ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿಒಂದಿಲ್ಲೊಂದು ಸ್ಪರ್ಧೆಯಲ್ಲಿಭಾಗವಹಿಸಿ ವಿಜೇತರಾಗಬೇಕು’’ ಎಂದು ಹೇಳಿದರು.
ಬಿ.ಆರ್.ಪಿ ನಾಗರಾಜ್ ಮಾತನಾಡಿ, ‘ಮಕ್ಕಳ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ತಂದೆ–ತಾಯಿ ಮತ್ತು ಶಿಕ್ಷಕರ ಶ್ರಮವೂ ಇದೆ. ಇಬ್ಬರೂ ಕೈ ಜೋಡಿಸಿದಾಗ ಮಾತ್ರ ಮಕ್ಕಳ ಪ್ರತಿಭೆ ಅನಾವರಣಗೊಳ್ಳುತ್ತದೆ. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಪೋಷಕರ ಪಾತ್ರವೂ ಅತಿ ಮುಖ್ಯವಾಗಿದೆ. ಮಕ್ಕಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವಂತೆ ಮಾಡಬೆಕು’ ಎಂದು ಸಲಹೆ ನೀಡಿದರು.
ಹಿರಿಯ ಶಿಕ್ಷಕ ಬಸವರಾಜ ಮಾತನಾಡಿ, ಕ್ಲಸ್ಟರ್ ಮಟ್ಟದಲ್ಲಿ ವಿಜೇತರಾದವರು ತಾಲ್ಲೂಕು ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಅಲ್ಲಿ ಗೆದ್ದವರು ಜಿಲ್ಲಾ ಮತ್ತು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಅವಕಾಶ ಪಡೆಯುತ್ತಾರೆ. ಆದ್ದರಿಂದ ಯಾವುದೇ ಸ್ಪರ್ಧೆಗಳಲ್ಲಿ ಮಕ್ಕಳ ಪ್ರತಿಭೆಯನ್ನು ನಿಷ್ಪಕ್ಷಪಾತವಾಗಿ ಗುರುತಿಸಿ, ಪ್ರಶಸ್ತಿಯನ್ನು ತೀರ್ಮಾನಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಅನುಸೂಯಮ್ಮ, ಎಸ್ ಡಿ ಎಂ ಸಿ ಸದಸ್ಯರಾದ ಅಜ್ಜಪ್ಪ, ಗುರುಮೂರ್ತಿ, ಶಾಲೆಯ ಸಹ ಶಿಕ್ಷಕರಾದ ಯು.ಸತೀಶ್, ಉಮಾ, ಸರಸ್ವತಿ, ಪವಿತ್ರ ಚಾಂದಿನಿಭಾನು, ಸತೀಶ್, ಕೆರೆಗುಡಿಹಳ್ಳಿ ಶಾಲೆಯ ಶಿಕ್ಷಕ ಅಜ್ಜಪ್ಪ, ಕ್ಲಸ್ಟರ್ ಮಟ್ಟದ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.