ವಿಜಯನಗರದಲ್ಲಿ ಅಡುಗೆ ಸಿಲಿಂಡರ್ ಸ್ಫೋಟ | ಮೃತ ಕುಟುಂಬಕ್ಕೆ ಸರಕಾರದಿಂದ ತಲಾ 5 ಲಕ್ಷ ರೂ. ಪರಿಹಾರ : ಸಚಿವ ಝಮೀರ್ ಅಹ್ಮದ್
Update: 2025-10-04 19:59 IST
ವಿಜಯನಗರ(ಹೊಸಪೇಟೆ) : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರಿನಲ್ಲಿ ಅಡುಗೆ ಅನಿಲ ಸ್ಫೋಟಗೊಂಡು ತೀವ್ರಗಾಯಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಪೈಕಿ ಅ.4 ರಂದು ಮತ್ತಿಬ್ಬರು ಮೃತಪಟ್ಟಿದ್ದು, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಿಜಯನಗರ ಮತ್ತು ಬಳ್ಳಾರಿ ಉಸ್ತುವಾರಿ ಸಚಿವ ಝಮೀರ್ ಅಹಮದ್ ಖಾನ್ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.
ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಅವರು, ಸರಕಾರದ ಪರವಾಗಿ ಇಂದು ಮೃತರಾದ ಮೈಲಾರಪ್ಪ ಹಾಗೂ ಕವಿತಾ ಕುಟುಂಬಗಳಿಗೂ ತಲಾ ಐದು ಲಕ್ಷ ರೂ. ಪರಿಹಾರ ಘೋಷಿಸಿದರು.
ನಂತರ ಆಂಬುಲೆನ್ಸ್ ಮೂಲಕ ಪಾರ್ಥಿವ ಶರೀರ ಸ್ವ ಗ್ರಾಮಕ್ಕೆ ಕಳುಹಿಸಿಕೊಡಲು ಸಚಿವರು ವ್ಯವಸ್ಥೆ ಮಾಡಿಕೊಟ್ಟರು. ಒಟ್ಟಾರೆಯಾಗಿ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ವಿಕ್ಟೊರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರನ್ನು ಬಿಡುಗಡೆ ಮಾಡಲಾಗಿದೆ.