×
Ad

ನಶಾಮುಕ್ತ ಭಾರತ ಅಭಿಯಾನ: ಬಂಡಿಪುರದಿoದ ಬೀದರ್‌ಗೆ ಬೈಕ್ ಜಾಥಾ

Update: 2025-08-31 23:04 IST

ವಿಜಯನಗರ (ಹೊಸಪೇಟೆ): ಮದ್ಯಪಾನ ಮತ್ತು ಮಾದಕ ವಸ್ತುಗಳ ದುರುಪಯೋಗ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಹೇಳಿದರು.

ನಗರದ ವಿಜಯನಗರ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಎನ್‌ಸಿಸಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆರೋಗ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಹಾಗೂ ಗೃಹ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಶಾಮುಕ್ತ ಭಾರತ ಅಭಿಯಾನದ ಬೈಕ್ ರ‍್ಯಾಲಿ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರವು ಆ.01 ರಿಂದ 31ರ ವರಗೆ ವ್ಯಸನ ಮುಕ್ತ ಭಾರತ ಅಭಿಯಾನದ ಮೂಲಕ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಬಂಡಿಪುರದಿಂದ ಬೀದರ್ ವರೆಗೆ ಬೈಕ್ ಜಾಥಾದ ಮೂಲಕ ಯುವಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳ ಮಾರ್ಗದರ್ಶನದಂತೆ ಸರ್ಕಾರದಿಂದ ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ನಿಗಧಿತ ಗುರಿ ತಲುಪಲು ಪರಿಶ್ರಮ ಬಹಳ ಮುಖ್ಯ. ಇದಕ್ಕಾಗಿ ಮದ್ಯ ಮತ್ತು ಮಾದಕ ವಸ್ತುಗಳ ಮೋಹಕ್ಕೆ ಸಿಲುಕಿ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು. ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ನಿಯಂತ್ರಣ ಮಾಡುವ ಶಕ್ತಿ ಅರಿತರೇ, ಭವಿಷ್ಯದಲ್ಲಿನ ನಿಗಧಿತ ಗುರಿ ಸಾಧನೆ ಬಹುಸುಲಭ ಎಂದರು.

ಎನ್‌ಎಸ್‌ಎಸ್ ರಾಜ್ಯ ಅಧಿಕಾರಿ ಡಾ.ಪ್ರತಾಪಲಿಂಗಯ್ಯ ಮಾತನಾಡಿ, ದೇಶದಲ್ಲಿ ಹೆಚ್ಚು ಯುವಕರನ್ನು ಹೊಂದಿದ ದೇಶ ಭಾರತ. ರಾಷ್ಟ್ರೀಯ ವರದಿ ಪ್ರಕಾರ ದೇಶದಲ್ಲಿ 25 ಕೋಟಿ ಜನರು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಿದ್ದಾರೆ. ಅದರಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರು ಶೇ.40 ರಷ್ಟು ಇದ್ದಾರೆಂಬ ಮಾಹಿತಿ ಇದೆ. ವಿದ್ಯಾರ್ಥಿ ದಿಸೆಯಿಂದಲೇ ಕ್ರೀಡಾ ಚಟುವಟಿಕೆಗಳಿಗೆ ಆಸಕ್ತಿ ವಹಿಸಿದರೇ ಮಾದಕ ವಸ್ತುಗಳಿಗೆ ವ್ಯಸನರಾಗುವ ಪ್ರಮಾಣ ತಗ್ಗಲಿದೆ. ಪಾಲಕರ ಪೋಷಣೆ ಮತ್ತು ಸಾಮಾಜಿಕ ಜವಾಬ್ದಾರಿ ಅರಿತು ಬದುಕಲು ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕಿದೆ. ಯುವಕರು ಮಾದಕ ವಸ್ತುಗಳ ಮಾರಾಟ ಕಂಡರೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಇದರಿಂದ ಕಾನೂನು ಕ್ರಮ ವಹಿಸಲಾಗುತ್ತದೆ ಎಂದರು.

ಬೈಕ್ ರ‍್ಯಾಲಿಯಲ್ಲಿ ಎನ್‌ಸಿಸಿ ಅಧಿಕಾರಿಗಳಾದ ಕರ್ನಲ್ ಜಗದೀಪ್ ಸಿಂಗ್, ಕರ್ನಲ್ ಯಶವಂತ್ ಸಿಂಗ್, ಆರೋಗ್ಯ ಇಲಾಖೆಯ ಡಾ.ಅಭಿನವ್, ಡಾ.ವಿಶ್ವಜಿತ್ ನಾಯಕ್, ಪೊಲೀಸ್ ಇಲಾಖೆ ಎನ್.ಅಭಿಷೇಕ್ ಶೆಟ್ಟಿ, ಸುಹಾಸ್ ನರೇಂದ್ರ, ದೇಶಾದ್ಯಂತ 1 ಲಕ್ಷ ಕಿಲೋಮೀಟರ್‌ಗಳಿಗೂ ಹೆಚ್ಚು ಪ್ರಯಾಣವನ್ನು ಸೈಕ್ಲಿಂಗ್‌ನಲ್ಲಿ ಕ್ರಮಿಸಿ ಅಪ್ರತಿಮ ಸಾಧನೆ ಮಾಡಿರುವ ರೈಡರ್ ನಂದಿನಿ ವಿಥುನ್, ಜೆಸ್ಸಿಕಾ, ರೇಣುಕಾ, ಮುಸ್ತಾಫಾ, ಸೈಯದ್ ಜಾಥಾದಲ್ಲಿ ಭಾಗವಹಿಸಿದ್ದರು. ವಿಜಯನಗರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪ್ರಭುಗೌಡ, ಪದವಿಪೂರ್ವ ಕಾಲೇಜು ಪ್ರಾಚಾರ್ಯ ಮಲ್ಲಿಕಾರ್ಜುನ ಗೌಡ ಮತ್ತು ಕ್ಯಾಪ್ಟನ್ ಪ್ರಭುಸ್ವಾಮಿ ಮತ್ತು ಬಸವರಾಜ್ ಮೇಟಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News