×
Ad

ಫೆ.13ರಿಂದ ಮೂರು ದಿನಗಳ ಕಾಲ ಅದ್ಧೂರಿ 'ಹಂಪಿ ಉತ್ಸವ' : ಸಚಿವ ಝಮೀರ್ ಅಹ್ಮದ್

Update: 2026-01-15 18:47 IST

ವಿಜಯನಗರ (ಹೊಸಪೇಟೆ 5: ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ಈ ಬಾರಿ ಫೆ.13, 14 ಮತ್ತು 15 ರಂದು ಅತ್ಯಂತ ವೈಭವದಿಂದ ಆಚರಿಸಲು ನಿರ್ಧರಿಸಲಾಗಿದೆ. ಮುಖ್ಯ ವೇದಿಕೆ ಸೇರಿದಂತೆ ಒಟ್ಟು ಐದು ವೇದಿಕೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ವಸತಿ, ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಗುರುವಾರ ಹಂಪಿಗೆ ಭೇಟಿ ನೀಡಿ, ಉತ್ಸವ ನಡೆಯಲಿರುವ ಮುಖ್ಯ ವೇದಿಕೆ ಹಾಗೂ ವಾಹನ ನಿಲುಗಡೆ ಸ್ಥಳಗಳನ್ನು ಪರಿಶೀಲಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಫೆ.13 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಈ ಬಾರಿ ಉತ್ಸವವನ್ನು ಕೇವಲ ಒಂದು ವೇದಿಕೆಗೆ ಸೀಮಿತಗೊಳಿಸದೆ, ಪ್ರವಾಸಿಗರಿಗೆ ಅನುಕೂಲವಾಗುವಂತೆ ಐದು ವಿಭಿನ್ನ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕಲಾವಿದರನ್ನು ಆಹ್ವಾನಿಸುವ ಕುರಿತು ಶೀಘ್ರವೇ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಧ್ರುವ ಸರ್ಜಾ ಸೇರಿದಂತೆ ಚಿತ್ರರಂಗದ ಗಣ್ಯರನ್ನು ಆಹ್ವಾನಿಸುವ ಬಗ್ಗೆ ಚರ್ಚಿಸಲಾಗಿದೆ. ಜೊತೆಗೆ, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಕಳೆದ ಎರಡು ವರ್ಷಗಳಿಗಿಂತ ಈ ಬಾರಿ ವೇದಿಕೆಯ ವಿನ್ಯಾಸ ಮತ್ತು ಸ್ಮಾರಕಗಳ ಮಾದರಿಗಳು ಅತ್ಯಂತ ಆಕರ್ಷಕವಾಗಿರಲಿವೆ. ಸುಗಮ ಸಂಚಾರಕ್ಕಾಗಿ ರೈತರೊಂದಿಗೆ ಚರ್ಚಿಸಿ ಹೆಚ್ಚಿನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಪಾರ್ಕಿಂಗ್‌ಗೆ ಭೂಮಿ ನೀಡುವ ರೈತರ ಬೆಳೆ ನಷ್ಟಕ್ಕೆ ತಕ್ಕ ಪರಿಹಾರ ಒದಗಿಸಲಾಗುವುದು ಎಂದರು.

ಹಗರಿಬೊಮ್ಮನಹಳ್ಳಿಯಿಂದ ಶಿವಮೊಗ್ಗ ರಸ್ತೆ ಸೇರಿದಂತೆ ಹಂಪಿಗೆ ಸಂಪರ್ಕ ಕಲ್ಪಿಸುವ ಹದಗೆಟ್ಟ ರಸ್ತೆಗಳನ್ನು ಕೂಡಲೇ ದುರಸ್ತಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ನಾಡಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿ.ಪಂ. ಸಿಇಓ ನೊಂಗ್ಜಾಯ್ ಮಹ್ಮದ್ ಅಕ್ರಂ ಅಲಿ ಷಾ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಎಸ್. ಜಾಹ್ನವಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News