ಹೊಸಪೇಟೆ | ಒಳಮೀಸಲಾತಿ ಸಮೀಕ್ಷೆ ತಿಂಗಳೊಳಗೆ ಜಾರಿಯಾಗಲಿ: ಮಾಜಿ ಸಚಿವ ಎಚ್.ಆಂಜನೇಯ
ಹೊಸಪೇಟೆ (ವಿಜಯನಗರ): ಒಳಮೀಸಲಾತಿ ಜಾರಿ ಸಮೀಕ್ಷೆಯು ಕೊನೆಯ ಹಂತಕ್ಕೆ ಬಂದಿದ್ದು, 15 ದಿನದೊಳಗೆ ಅದು ಪೂರ್ಣಗೊಳ್ಳುವ ನಿರೀಕ್ಷೆ ಇದೆ, ಹೀಗಾಗಿ ಜೂನ್ ಅಂತ್ಯದೊಳಗೆ ಒಳಮೀಸಲಾತಿಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಒತ್ತಾಯಿಸಿದರು.
ಹೊಸಪೇಟೆಯಲ್ಲಿ ವಾರ್ತಾಭಾರತಿಯೊಂದಿಗೆ ಮಾತನಾಡಿದ ಮಾಜಿ ಸಚಿವ ಎಚ್.ಆಂಜನೇಯ ಅವರು, ಬೆಂಗಳೂರು ನಗರ ಹೊರತುಪಡಿಸಿ ಉಳಿದೆಡೆ ಸಮೀಕ್ಷೆ ಮುಗಿಯುವ ಹಂತಕ್ಕೆ ಬಂದಿದೆ. ಬೆಂಗಳೂರಿನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆ ಇರುವ ಕಾರಣ ಸಮೀಕ್ಷೆ ಸ್ವಲ್ಪ ವಿಳಂಬವಾಗಿದೆ. ಆದರೆ ಅದು ಸಹ ಶೀಘ್ರದಲ್ಲೆ ಕೊನೆಗೊಂಡು ಎರಡು ವಾರದೊಳಗೆ ಎಲ್ಲ ವಿಶ್ಲೇಷಣೆಗಳನ್ನು ಮಾಡಿ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ತಡಮಾಡದೆ ಒಳಮೀಸಲಾತಿ ಜಾರಿಗೆ ತರಬೇಕು ಎಂದರು.
ಒಳಮೀಸಲಾತಿ ಜಾರಿಗೆ ವಿಶೇಷ ಸಂಪುಟ ಸಭೆ ಅಥವಾ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿದ ಅವರು, ಮೊದಲಿಗೆ ಒಳಮೀಸಲಾತಿ ಜಾರಿಗೆ ಬರಲಿ, ಪರಿಶಿಷ್ಟ ಜಾತಿಯವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಕುರಿತಂತೆ ಬಳಿಕ ಒತ್ತಾಯ ಮಾಡಲಾಗುವುದು ಎಂದರು.
ಈ ವೇಳೆ ಮಾದಿಗ ಸಮುದಾಯದ ಮುಖಂಡರಾದ ಎಂ.ಸಿ.ವೀರಸ್ವಾಮಿ, ಶೇಷು, ಎ.ಬಸವರಾಜ್, ನಿಂಬಗಲ್ ರಾಮಕೃಷ್ಣ, ಮಲ್ಲಿಕಾರ್ಜುನ, ಲಕ್ಷ್ಮಣ ಕಾರಿಗನೂರು, ಮಾರೆಣ್ಣ ಇದ್ದರು.