×
Ad

ಹೊಸಪೇಟೆ | ಅಲೆಮಾರಿ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿ ನಿಗಮದ ಮುಖ್ಯ ಧ್ಯೇಯ: ಪಲ್ಲವಿ ಜೆ.

ʼʼಅಲೆಮಾರಿ ಸಮುದಾಯಗಳಲ್ಲಿ ಸರಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು ಮುಖ್ಯʼʼ

Update: 2025-08-20 22:00 IST

ಹೊಸಪೇಟೆ :ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಔದ್ಯೋಗಿಕವಾಗಿ ಮುಂಚೂಣಿಗೆ ತರುವುದು ನಿಗಮದ ಮುಖ್ಯ ಉದ್ದೇಶ ಎಂದು ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜೆ. ಅವರು ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ 20ನೇ ಆಗಸ್ಟ್ 2025ರಂದು ಕನ್ನಡ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕ ಹಾಗೂ ಕರ್ನಾಟಕ ಸರ್ಕಾರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳ ಸಮಸ್ಯೆ, ಸವಾಲುಗಳು ಮತ್ತು ಪರಿಹಾರೋಪಾಯಗಳು ವಿಷಯದ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಮೊದಲ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಕರ್ನಾಟಕದಲ್ಲಿ ಸ್ಥಾಪನೆಯಾಗಿದ್ದು, ಈ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿ ನಿಗಮದ ಉದ್ದೇಶವಾಗಿದೆ. ಗುಡಿಸಲು, ಟೆಂಟು ಮತ್ತು ಜೋಪಡಿಯಲ್ಲಿ ವಾಸಿಸುವ ಅಲೆಮಾರಿ ಮತ್ತು ಬಡಕಟ್ಟು ಸಮುದಾಯದವರಿಗೆ ಶಾಶ್ವತವಾಗಿ ಒಂದು ನೆಲೆ ದೊರೆಯಬೇಕು. ಟೆಂಟು ಮುಕ್ತ ರಾಜ್ಯವನ್ನು ನಿರ್ಮಿಸುವುದು ನಿಗಮದ ಆದ್ಯತೆಯಾಗಿದೆ. ರಾಜ್ಯಾದ್ಯಂತ 31 ಜಿಲ್ಲೆಗಳ 26 ತಾಲೂಕುಗಳನ್ನು ಪ್ರವಾಸ ಕೈಗೊಂಡು ಅಲೆಮಾರಿಗಳು, ಬುಡಕಟ್ಟು ಜನಾಂಗದವರ ಜೋಪಡಿಗಳಿಗೆ ಭೇಟಿ ನೀಡಿದಾಗ ತಿಳಿದು ಬಂದ ವಿಷಯವೆಂದರೆ ಬಹುತೇಕ ಅಲೆಮಾರಿ ಸಮುದಾಯಗಳಿಗೆ ಮತದಾರರ ಗುರುತಿನ ಚೀಟಿ, ಆಧಾರಕಾರ್ಡ್, ರೇಷನ್‌ಕಾರ್ಡ್ ಮೂಲ ದಾಖಲೆಗಳ ಕೊರತೆಯಿದ್ದು, ಮೊದಲು ಅವರಿಗೆ ಮೂಲದಾಖಲೆಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು ಎಂದರು.

ಸರ್ಕಾರವು ಅಲೆಮಾರಿ ಜನಾಂಗ ಬುಡಕಟ್ಟು ಸಮುದಾಯಗಳಿಗೆ ನೀಡುವ ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ದೊರೆಯುವಲ್ಲಿ ಮಧ್ಯವರ್ತಿಗಳ ಹಾವಳಿ ಇತ್ತು. ಇಂತಹ ಲೋಪ ದೋಷಗಳನ್ನು ಗಮನಿಸಿ ನೇರವಾಗಿ ಯೋಜನೆಯ ಅನುಕೂಲವನ್ನು ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಆನ್‌ಲೈನ್ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಎ.ಎಸ್. ಪ್ರಭಾಕರ್, ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಕೆ.ಎಂ.ಮೇತ್ರಿ, ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನರಾದ ಡಾ ಮಾಧವ ಪೆರಾಜೆ ಅವರು ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕುಲಸಚಿವರಾದ ಡಾ.ವಿಜಯ್ ಪೂಣಚ್ಚ ತಂಬoಡ ಅವರು ಉಪಸ್ಥಿತರಿದ್ದರು. ಅಲೆಮಾರಿ ಮಹಾಸಭಾದ ಜಂಟಿ ಕಾರ್ಯದರ್ಶಿಗಳು ಮತ್ತು ನಿಕಟಪೂರ್ವ ಆಪ್ತಕಾರ್ಯದರ್ಶಿಗಳಾದ ಆನಂದ್ ಏಕಲವ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ವೈ.ಎ.ಕಾಳೆ ಸ್ವಾಗತಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಶೇಷ ಘಟಕದ ಸಂಯೋಜನಾಧಿಕಾರಿಗಳಾದ ಡಾ.ಗೀತಮ್ಮ ಕೆ. ವಂದಿಸಿದರು. ಕಿರಿಯ ಸಹಾಯಕರಾದ ಆರ್.ವಿ. ದೇಶಪಾಂಡೆ ನಿರೂಪಿಸಿದರು.

ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ವಿಭಾಗಗಳ ಅಧ್ಯಾಪಕರು, ಉಪಕುಲಸಚಿವರಾದ ಬಿ.ಗುರುಬಸಪ್ಪ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಮತ್ತು ಅಲೆಮಾರಿ ಸಮುದಾಯಗಳ ಸ್ಥಳೀಯರು ಉಪಸ್ಥಿತರಿದ್ದರು.

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News