ವಿಜಯನಗರ ಜಿಲ್ಲೆಯ ಬಂಜಾರ ಸಾಹಿತ್ಯ ಪರಿಷತ್ತಿನ ನೂತನ ಜಿಲ್ಲಾ ಘಟಕ ಉದ್ಘಾಟನೆ
ವಿಜಯನಗರ (ಹೊಸಪೇಟೆ) : ಬಂಜಾರರು ರಾಜ್ಯದಲ್ಲಿ 37ರಿಂದ 40 ಲಕ್ಷ ಜನಸಂಖ್ಯೆ ಹೊಂದಿದ್ದಾರೆ. ಆದರೆ, ಹಿಂದುಳಿದ ವರ್ಗಗಳ ಆಯೋಗದ ಗಣತಿಯಲ್ಲಿ ಕೇವಲ 9 ಲಕ್ಷ ಜನಸಂಖ್ಯೆ ತೋರಿಸಿದ್ದಾರೆ. ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಈ ಗಣತಿ ತಿರಸ್ಕರಿಸಲು ತಿಳಿಸಿದ್ದಾರೆ. ಈಗ ನ್ಯಾ. ನಾಗ ಮೋಹನ್ ದಾಸ್ ಆಯೋಗದ ಗಣತಿಯಲ್ಲಿ ಎಲ್ಲರೂ ಸರಿಯಾಗಿ ಜಾತಿ ಗಣತಿ ಮಾಡಿಸಬೇಕು ಎಂದು ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರು ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಬಂಜಾರ ಸಾಹಿತ್ಯ ಪರಿಷತ್ತಿನ ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಬಂಜಾರ ಸಮಾಜದವರಿಗೆ ಕಲೆ, ಸಾಹಿತ್ಯ, ಸಂಗೀತ ರಕ್ತಗತವಾಗಿದೆ. ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದಿದೆ. ನಾವು ಜಾನಪದ ಗೀತೆಗಳನ್ನು ಹಾಡುತ್ತಾ, ಕುಣಿಯೋದು ನಮ್ಮ ಸಂಪ್ರದಾಯ, ಸಂಸ್ಕೃತಿ ಆಗಿದೆ. ಕಲೆ, ಸಾಹಿತ್ಯಕ್ಕೆ ಹೆಚ್ಚಿನ ಬೆಲೆ ನೀಡುತ್ತೇವೆ. ಕಲೆಯೇ ಬಂಜಾರರ ಜೀವಾಳ ಆಗಿದೆ ಎಂದರು.
ಬಂಜಾರ ಗುರುಪೀಠದ ಶಿವಪ್ರಕಾಶ ಮಹಾರಾಜ್ ಸ್ವಾಮೀಜಿ, ತಿಪ್ಪೇಸ್ವಾಮಿ ಮಹಾರಾಜ್ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುಖಂಡರಾದ ಆರ್.ಬಿ.ನಾಯ್ಕ, ಡಾ.ಉತ್ತಮ್ ಮೂಡ್ ನಾಯ್ಕ, ಶ್ರೀಕಾಂತ್ ಆರ್.ಜಾಧವ್, ರಾಧಾಕೃಷ್ಣ ನಾಯ್ಕ, ಛತ್ರಪ್ಪ, ನರಸಿಂಗ, ಹಾಲ್ಯಾ ನಾಯ್ಕ, ಡಾ. ಎಲ್.ಪಿ. ಕಠಾರಿ ನಾಯ್ಕ, ಖಂಡು ಬಂಜಾರ, ಕುಬೇರ್ ನಾಯ್ಕ, ಡಾ. ಮಿಟ್ಯ ನಾಯ್ಕ, ಲಕ್ಷ್ಮೀ ಬಾಯಿ, ಡಿ. ಲಾಲ್ಯಾ ನಾಯ್ಕ,ಕೃಷ್ಣ ಲಮಾಣಿ, ಶಿವಕುಮಾರ ನಾಯ್ಕ, ಗಜಾನನ ನಾಯ್ಕ, ಅಲೋಕ್ ನಾಯ್ಕ, ಡಾ. ಗೋಪಿ ನಾಯ್ಕ, ವಾಲ್ಯಾ ನಾಯ್ಕ, ಮಲ್ಲೇಶ ಲಮಾಣಿ, ರಾಮ್ಯಾ ನಾಯ್ಕ, ಡಿ.ಬಿ. ನಾಯ್ಕ, ಎಲ್.ಡಿ. ತಿಪ್ಪಾನಾಯ್ಕ, ಡಿ.ಜೆ. ನಿಂಗಾ ನಾಯ್ಕ, ವೆಂಕಟೇಶ ನಾಯ್ಕ, ರಾಮ ನಾಯ್ಕ, ಈಶ್ವರ ನಾಯ್ಕ ಮತ್ತಿತರರಿದ್ದರು. ಸರಿಗಮಪ ಖ್ಯಾತಿಯ ಗಾಯಕ ರಮೇಶ ಲಮಾಣಿ ಹಾಗೂ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.