ಎಪಿಎಂಸಿ ಮುಖ್ಯ ಗೇಟ್ ಬಂದ್: ಕಾಂಪೌಂಡ್ ಏರಿ ತರಕಾರಿ ಖರೀದಿಸುತ್ತಿರುವ ಜನರು!
-ಮುಹಮ್ಮದ್ ಗೌಸ್
ವಿಜಯನಗರ: ಜಿಲ್ಲೆಯ ಹೊಸಪೇಟೆ ನಗರದ ಟಿಬಿ ಡ್ಯಾಂ ರಸ್ತೆಯಲ್ಲಿರುವ ಎಪಿಎಂಸಿ ಮುಖ್ಯ ಗೇಟ್ ಅನ್ನು ಬಂದ್ ಮಾಡಿದ್ದರಿಂದ ತರಕಾರಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ಎಪಿಎಂಸಿ ರಸ್ತೆಗೆ ಹೊಂದಿಕೊಂಡಿರುವುದರಿಂದ ತರಕಾರಿ ಖರೀದಿಗೆ ಬರುವ ಜನರು ತಮ್ಮ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸುವುದರಿಂದ ವಾಹನದಟ್ಟಣೆಯಾಗುತ್ತಿದೆ. ಇನ್ನು ತರಕಾರಿ ವ್ಯಾಪಾರಸ್ಥರಿಗೆ ಎಪಿಎಂಸಿ ಒಳಗಡೆ ನಿಗದಿ ಮಾಡಿರುವ ಸ್ಥಳದಲ್ಲಿ ವ್ಯಾಪಾರ ಮಾಡಲು ತಿಳಿಸಿದ್ದರೂ ಅಲ್ಲಿ ವ್ಯಾಪಾರ ಮಾಡದ ಹಿನ್ನೆಲೆ ಶಾಸಕರು, ಅಧಿಕಾರಿಗಳ ಸೂಚನೆ ಮೇರೆಗೆ ಎಪಿಎಂಸಿ ಅಧಿಕಾರಿಗಳು ವಾರದ ಹಿಂದೆ ಎಪಿಎಂಸಿ ಮುಖ್ಯ ಗೇಟ್ಗೆ ವೆಲ್ಡಿಂಗ್ ಮಾಡಿ ಬಂದ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಎಪಿಎಂಸಿ ಗೇಟ್ ಬಂದ್ ಮಾಡಿದ್ದರಿಂದ ವೃದ್ಧರು, ಮಹಿಳೆಯರು ಗೇಟ್ ಕಾಂಪೌಂಡ್ ಹತ್ತಿ ತರಕಾರಿ ಖರೀದಿ ಮಾಡಲು ಹರಸಾಹಸ ಪಡುತ್ತಿದ್ದಾರೆ. ತರಕಾರಿ ವ್ಯಾಪಾರಸ್ಥರು ಸಹ ಕಾಂಪೌಂಡ್ ಹತ್ತಿ ತಮ್ಮ ಚೀಲಗಳನ್ನು ಇಳಿಸಿಕೊಳ್ಳುತ್ತಿದ್ದಾರೆ. ವಾರದಿಂದ ಸಣ್ಣ ತರಕಾರಿ ವ್ಯಾಪಾರಸ್ಥರು ವ್ಯಾಪಾರವಿಲ್ಲದೇ ನಷ್ಟ ಅನುಭವಿಸುತ್ತಿದ್ದೇವೆ. ಶಾಸಕರ ಗಮನಕ್ಕೆ ತಂದರೂ ಈ ಗೇಟ್ ತೆರೆಯುತ್ತಿಲ್ಲ ಎಂದು ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಟ್ರಾಫಿಕ್ ಸಮಸ್ಯೆ ಪರಿಹಾರ ಮಾಡುವುದನ್ನು ಬಿಟ್ಟು ತರಕಾರಿ ವ್ಯಾಪಾರಸ್ಥರ ಹೊಟ್ಟೆ ಮೇಲೆ ಹೊಡೆಯುತ್ತಿರುವುದು ಎಷ್ಟು ಸರಿ. ಸೋಮವಾರದ ಒಳಗೆ ಗೇಟ್ ತೆರೆಯದಿದ್ದಲ್ಲಿ, ತರಕಾರಿ ಮಾರಾಟ ಸ್ಥಗಿತಗೊಳಿಸಿ ನಿರಂತರ ಪ್ರತಿಭಟನೆ ನಡೆಸುತ್ತೇವೆ ಎಂದು ತರಕಾರಿ ವ್ಯಾಪಾರಸ್ಥರು ಎಚ್ಚರಿಕೆ ನೀಡಿದ್ದಾರೆ.
ನಿಗದಿಪಡಿಸಿದ ಸ್ಥಳದಲ್ಲಿ ಸಣ್ಣ ತರಕಾರಿ ವ್ಯಾಪಾರಸ್ಥರು ವ್ಯಾಪಾರ ಮಾಡದ ಹಿನ್ನೆಲೆ ಸಂಚಾರ ದಟ್ಟಣೆಯಾಗುತ್ತಿದ್ದರಿಂದ ವೆಲ್ಡಿಂಗ್ ಮಾಡಿ ಎಪಿಎಂಸಿ ಮುಖ್ಯ ಗೇಟ್ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿ ಆದಷ್ಟು ಬೇಗ ಈ ಸಮಸ್ಯೆ ಇತ್ಯರ್ಥಗೊಳಿಸುತ್ತೇವೆ.
- ಸಿದ್ದಯ್ಯಸ್ವಾಮಿ, ಹೊಸಪೇಟೆ ಎಪಿಎಂಸಿ ಕಾರ್ಯದರ್ಶಿ