×
Ad

ರಾಜ್ಯಪಾಲರಿಂದ ನಾಡೋಜ ಪ್ರಶಸ್ತಿ ಸ್ವೀಕರಿಸಲು ನಾನು ಸಿದ್ಧನಿಲ್ಲ : ಡಾ.ಜಿ.ರಾಮಕೃಷ್ಣ ಸ್ಪಷ್ಟನೆ

"ನಾಡೋಜ ಪ್ರಶಸ್ತಿಯನ್ನು ನಿರಾಕರಿಸುವ ಪ್ರಶ್ನೆಯೇ ಇಲ್ಲ"

Update: 2026-02-25 14:50 IST

ಡಾ.ಜಿ.ರಾಮಕೃಷ್ಣ

ವಿಜಯನಗರ : ವಿಶ್ವವಿದ್ಯಾಲಯದ ಸಿಂಡಿಕೆಟ್‌ ನನಗೆ ಗೌರವಾರ್ಥ ‘ನಾಡೋಜ’ ಪದವಿ ನೀಡಿರುವುದನ್ನು ನಾನು ಮಹತ್ತರ ಗೌರವವೆಂದು ಪರಿಗಣಿಸುತ್ತೇನೆ. ಅದನ್ನು ನಿರಾಕರಿಸುವ ಪ್ರಶ್ನೆಯೇ ಇಲ್ಲ. ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸದಿರುವುದು ಪದವಿ ತಿರಸ್ಕಾರವಲ್ಲ. ಮಾನ್ಯ ಕುಲಪತಿಗಳಿಗೆ ಪತ್ರ ಬರೆದು ಗೌರವ ಸ್ವೀಕರಿಸುವುದಾಗಿ ಮೊದಲೇ ತಿಳಿಸಿದ್ದೆ. ಆದರೆ, ಪದವಿಪ್ರದಾನ ಮಾಡುವ ವ್ಯಕ್ತಿಯಿಂದ ಅರ್ಹತಾ ಪತ್ರ ಸ್ವೀಕರಿಸಲು ನಾನು ಸಿದ್ಧನಿರಲಿಲ್ಲ. ಅದಕ್ಕಾಗಿ ಸಮಾರಂಭಕ್ಕೆ ಹಾಜರಾಗಲಿಲ್ಲ. ರಾಜ್ಯದ ಈಗಿನ ರಾಜ್ಯಪಾಲರಿಂದ ಗೌರವ ಸ್ವೀಕರಿಸುವ ಮನಸ್ಥಿತಿ ನನಗಿಲ್ಲ. ಇದಕ್ಕೂ ಕಾರಣಗಳಿವೆ, ಆದರೆ ಅವು ಇಲ್ಲಿ ಪ್ರಸ್ತುತವಲ್ಲ ಎಂದು ಹಿರಿಯ ಚಿಂತಕ ಡಾ.ಜಿ.ರಾಮಕೃಷ್ಣ ಹೇಳಿದ್ದಾರೆ.

ಕನ್ನಡ ವಿಶ್ವವಿದ್ಯಾಲಯ, ಹಂಪಿ ನೀಡಿದ ‘ನಾಡೋಜ’ ಗೌರವದ ಬಗ್ಗೆ ಇತ್ತೀಚೆಗೆ ಕೆಲವು ಸಂವಾದಗಳು ನಡೆದಿರುವ ಹಿನ್ನೆಲೆಯಲ್ಲಿ ಅವರು ಸಾಮಾಜಿಕ ಜಾಲತಾಣ ಫೇಸುಬುಕ್‌ ನಲ್ಲಿ ಪೋಸ್ಟ್‌ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಈ ವಿಶ್ವವಿದ್ಯಾಲಯದೊಂದಿಗೆ ನನಗೆ ದೀರ್ಘಕಾಲದ ನಂಟಿದೆ. ಸುಮಾರು 30 ವರ್ಷಗಳ ಹಿಂದೆ ಎರಡು ವರ್ಷ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದೆ. ಆ ಅವಧಿಯಲ್ಲಿ “ಭಾರತೀಯ ವಿಜ್ಞಾನದ ಹಾದಿ” ಎಂಬ ಕೃತಿಯನ್ನು ರಚಿಸಿದ್ದೆ. ಅದನ್ನು ವಿಶ್ವವಿದ್ಯಾಲಯವೇ ಪ್ರಕಟಿಸಿದ್ದು, ಈಗಾಗಲೇ ಮೂರು ಆವೃತ್ತಿಗಳು ಹೊರಬಂದಿವೆ. ಅನೇಕ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಕೆಲವು ಸಮಸ್ಯೆಗಳು ಉದ್ಭವಿಸಿದ ಸಂದರ್ಭಗಳಲ್ಲಿ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ಮಧ್ಯಪ್ರವೇಶ ಕೂಡ ಮಾಡಿದ್ದೇನೆ. ಅಲ್ಲಿನ ಬಹುತೇಕ ಅಧ್ಯಾಪಕರು ನನ್ನ ಆತ್ಮೀಯ ಮಿತ್ರರು ಎಂದು ತಿಳಿಸಿದ್ದಾರೆ.

ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ನನಗೆ ಅಪಾರ ಗೌರವವಿದೆ. ಈಗಿನ ಕುಲಪತಿಗಳ ಮುತ್ಸದ್ದಿತನವನ್ನು ನಾನು ಗೌರವಿಸುತ್ತೇನೆ. ಅಲ್ಲಿನ ಎಲ್ಲರೂ ನನ್ನ ಸ್ನೇಹ ಮತ್ತು ಆದರಕ್ಕೆ ಪಾತ್ರರು. ಹೀಗಿರುವಾಗ ವಿಶ್ವವಿದ್ಯಾಲಯ ನೀಡಿದ ಗೌರವವನ್ನು ತಿರಸ್ಕರಿಸುವ ಪ್ರಶ್ನೆಯೇ ಇಲ್ಲ. ಸಮಾರಂಭಕ್ಕೆ ಹಾಜರಾಗದಿರುವುದು ವೈಯಕ್ತಿಕ ನಿರ್ಧಾರ ಮಾತ್ರ ಎಂದು ತಿಳಿಸಿದ್ದಾರೆ.

ಈ ವಿಷಯವನ್ನು ವಿಶ್ವವಿದ್ಯಾಲಯದ ಸಂಬಂಧಿಸಿದವರಿಗೆ ತಿಳಿಸಿದ್ದೇನೆ. ರಾಜ್ಯದ ನಾಗರಿಕರು ನನ್ನ ಈ ನಿರ್ಧಾರವನ್ನು ಮನಗಂಡು ಸ್ವೀಕರಿಸುವಂತೆ ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - Reshma

contributor

Similar News