×
Ad

ನಮ್ಮ ಕ್ಲಿನಿಕ್ ಮೂಲಕ ಮನೆ ಬಾಗಿಲಿಗೆ ಪ್ರಾಥಮಿಕ ಆರೋಗ್ಯ ಸೇವೆ: ಶಾಸಕ ಎಚ್. ಆರ್.ಗವಿಯಪ್ಪ

Update: 2025-08-31 22:56 IST

ವಿಜಯನಗರ (ಹೊಸಪೇಟೆ): ನಗರ ಪ್ರದೇಶದ ಬಡವರ ಮನೆ ಬಾಗಿಲಿಗೆ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸುವ ಸದುದ್ದೇಶದಿಂದ ‘ನಮ್ಮ ಕ್ಲಿನಿಕ್’ ಆರೋಗ್ಯ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.

ನಗರದ ಕಾರಿಗನೂರು ಹಾಗೂ ಟಿಬಿ ಡ್ಯಾಂನ 30ನೇ ವಾರ್ಡ್ ನಲ್ಲಿ ನೂತನ ನಮ್ಮ ಕ್ಲಿನಿಕ್ ಕೇಂದ್ರಗಳನ್ನು ಉದ್ಘಾಟಿಸಿ ಅವರು ಶುಕ್ರವಾರ ಸಂಜೆ ಮಾತನಾಡಿದರು. ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿಯಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಗಳು ದೊರೆಯುವ ನಿಟ್ಟಿನಲ್ಲಿ ಸರ್ಕಾರ ಆದ್ಯತೆ ನೀಡಲಾಗಿದೆ. ನಗರವಾಸಿಗಳು ಉತ್ತಮ ಆರೋಗ್ಯಕ್ಕಾಗಿ ನಮ್ಮ ಕ್ಲಿನಿಕ್ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಗುಣಮಟ್ಟದ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡಲು ಆರೋಗ್ಯ ಸಿಬ್ಬಂದಿಗಳು ಕರ್ತವ್ಯ ನಿರತರಾಗಿದ್ದಾರೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಲ್.ಆರ್.ಶಂಕರ್ ನಾಯ್ಕ್ ಮಾತನಾಡಿ, ಕೇಂದ್ರಗಳಲ್ಲಿ ನವಜಾತ ಶಿಶುವಿನ ಸಮಗ್ರ ಆರೋಗ್ಯ ಆರೈಕೆ ಮಾಡಲಾಗುತ್ತದೆ. ಸಾರ್ವತ್ರಿಕ ಲಸಿಕಾಕರಣ ಸೇವೆಗಳು ಹಾಗೂ ಕುಟುಂಬ ಕಲ್ಯಾಣ, ಗರ್ಭನಿರೋಧಕ ಸೇವೆಗಳು ಮತ್ತು ಇತರ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳು ಒದಗಿಸಲಾಗುತ್ತದೆ. ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಸಾಂಕ್ರಾಮಿಕ ಕ್ಷಯರೋಗ, ಕುಷ್ಠರೋಗ ಸೇರಿದಂತೆ ಇತರೆ ಮತ್ತು ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ದೀರ್ಘಾವಧಿ ಶ್ವಾಸಕೋಶ ಕಾಯಿಲೆ, ಕೀಲು ನೋವು ಮತ್ತು ಸಂಧಿವಾತ, ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್ ಇತರೆ ಕಾಯಿಲೆಗಳಿಗೆ ಸ್ಕ್ರೀನಿಂಗ್ ಸೇರಿ ತಡೆಗಟ್ಟುವಿಕೆ ಚಿಕಿತ್ಸೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ನೇತ್ರ ಚಿಕಿತ್ಸೆ, ಕಿವಿ, ಮೂಗು, ಗಂಟಲು ಚಿಕಿತ್ಸೆ ಆರೋಗ್ಯ ಸೇವೆಗಳನ್ನು ನೀಡಲಾಗುತ್ತದೆ. ಸುಟ್ಟ ಗಾಯಗಳು, ಅಪಘಾತ, ಇತರೆ ಗಾಯಗಳಿಗೆ ತುರ್ತು ಚಿಕಿತ್ಸೆ ಒಳಗೊಂಡಂತೆ ವಿವಿಧ ಆರೋಗ್ಯ ಸೇವೆಗಳನ್ನು ನೀಡಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ನಮ್ಮ ಕ್ಲಿನಿಕ್ ಕೇಂದ್ರದ ಸೌಲಭ್ಯಗಳನ್ನು ಪಡೆಯಬೇಕು ಮತ್ತು 30 ವರ್ಷ ದಾಟಿದ ಪ್ರತಿಯೊಬ್ಬರು ಪ್ರತಿ ವರ್ಷ ಒಂದು ಸಲ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

ಈ ವೇಳೆ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಬಿ.ಜಂಬಯ್ಯ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿಗಳು ಡಾ.ಭಾಸ್ಕರ್, ತಾಲೂಕು ವೈದ್ಯಾಧಿಕಾರಿ ಡಾ.ವಿನೋದ್ ಕುಮಾರ್, ನಮ್ಮ ಕ್ಲಿನಿಕ್ ವೈದ್ಯೆ ಡಾ.ಸುಧಾ, ಸ್ಥಳೀಯ ವಾರ್ಡಿನ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಆರೋಗ್ಯ ಸಿಬ್ಬಂದಿಗಳು ಮತ್ತು ನಮ್ಮ ಕ್ಲಿನಿಕ್ ಆರೋಗ್ಯ ಸಿಬ್ಬಂದಿ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News