ವಿಜಯನಗರ: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ NRI ಕೋಟ ಜಾರಿ ನಿರ್ಧಾರ ಕೈಬಿಡಲು ಆಗ್ರಹಿಸಿ ಧರಣಿ
ವಿಜಯನಗರ: ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ ಆರ್ ಐ ಕೋಟ ಜಾರಿ ಮಾಡುವ ನಿರ್ಧಾರವನ್ನು ಕೂಡಲೇ ಕೈ ಬಿಡಲು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಜೇಷನ್ ರವರ ನೇತೃತ್ವದಲ್ಲಿ ದಂಡಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ನಗರದ ತಾಲೂಕು ದಂಡಾಧಿಕಾರಿಗಳ ಕಚೇರಿಯ ಮುಂಭಾಗ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ಕರ್ನಾಟಕ ರಾಜ್ಯ ಸರ್ಕಾರವು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿ ಸೀಟಿಗೆ 25 ಲಕ್ಷ ರೂ. ಗಳ ದುಬಾರಿ ಶುಲ್ಕದೊಂದಿಗೆ 15% ಎನ್ ಆರ್ ಐ ಕೋಟವನ್ನು ಆರಂಭಿಸಲು ನಿರ್ಧರಿಸಿದೆ. ರಾಜ್ಯದ ಸರ್ಕಾರ ಈ ನಿರ್ಧಾರವನ್ನು ನಾವು ಧಿಕ್ಕರಿಸುತ್ತೇವೆ. ಈ ಅನ್ಯಾಯದ ಹೊರೆಯನ್ನು ಕಡಿಮೆ ಮಾಡುವ ಬದಲು, ಸರ್ಕಾರವು ವಿದ್ಯಾರ್ಥಿಗಳಿಂದ ಇನ್ನಷ್ಟು ಹಣವನ್ನು ವಸೂಲಿ ಮಾಡಲು ಪ್ರಯತ್ನಿಸುತ್ತಿದೆ. ಈ ಕ್ರಮವು ರಾಜ್ಯ ಸರ್ಕಾರದ ವಿದ್ಯಾರ್ಥಿ ವಿರೋಧಿ ಮತ್ತು ಜನವಿರೋಧಿ ಮನೋಭಾವವನ್ನು ಬಟಾಬಯಲಾಗಿಸಿದಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯಕೀಯ ಕಾಲೇಜುಗಳನ್ನು ಬಲಪಡಿಸಲು ರಾಜ್ಯ ಸರ್ಕಾರದಿಂದ ಅವಶ್ಯಕ ಹಣವನ್ನು ಮಂಜೂರು ಮಾಡುವ ಬದಲು, ಸರ್ಕಾರವು ಈ ಹೊರೆಯನ್ನು ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಮೇಲೆ ವರ್ಗಾಯಿಸುತ್ತಿದೆ. ಇಂತಹ ನೀತಿಗಳು ಸರ್ಕಾರಿ ಕಾಲೇಜುಗಳಲ್ಲಿ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುತ್ತಾ, ಸಂಪೂರ್ಣ ಖಾಸಗೀಕರಣಕ್ಕೆ ಎಡೆ ಮಾಡಿಕೊಡುತ್ತವೆ ಎಂದು ವಿದ್ಯಾರ್ಥಿ ರವಿಕಿರಣ್ ಜೆ,ಪಿ. ಅಭಿಪ್ರಾಯ ವ್ಯಕ್ತಪಡಿಸಿದರು
ಕರ್ನಾಟಕದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 12,447 ಬೋಧಕ ಹುದ್ದೆಗಳು ಖಾಲಿ ಇರುವ ಈ ಸಂಧರ್ಭದಲ್ಲಿ, ಸರ್ಕಾರವು ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಮೂಲಸೌಕರ್ಯವನ್ನು ಖಾತ್ರಿಪಡಿಸಲು ಆದ್ಯತೆ ನೀಡಬೇಕಿರುವುದು ಅತ್ಯಗತ್ಯವಾಗಿದೆ. ಸಂಪನ್ಮೂಲ ಕ್ರೋಢೀಕರಣದ ನೆಪದಲ್ಲಿ ಶ್ರೀಮಂತರಿಗೆ ಸೀಟುಗಳನ್ನು ಮಾರಾಟ ಮಾಡಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗದು. ಆದ್ದರಿಂದ ಸರ್ಕಾರಿ ಕಾಲೇಜುಗಳನ್ನು ಖಾಸಗಿ ಸಂಸ್ಥೆಗಳಂತೆ ಲಾಭಗಳಿಸುವ ಕೇಂದ್ರಗಳಾಗಿ ಪರಿವರ್ತಿಸುವ ಅಪಾಯಕಾರಿ ಹೆಜ್ಜೆಯಾದ ಈ ನಿರ್ಧಾರವನ್ನು ಕೂಡಲೇ ಕೈಬಿಡಬೇಕೆಂದು ಎಐಡಿಎಸ್‌ಓ ಸದಸ್ಯೆ ಉಮಾದೇವಿ ರವರು ಪ್ರತಿಕ್ರಿಯೆ ನೀಡಿದರು.