ಹೊಸಪೇಟೆಯಲ್ಲಿ ನಡೆಯಲಿರುವ ಸಾಧನಾ ಸಮಾವೇಶಕ್ಕೆ ಎರಡು ಲಕ್ಷ ಜನ ಸೇರುವ ನಿರೀಕ್ಷೆ: ಸಚಿವ ಝಮೀರ್ ಅಹ್ಮದ್ ಖಾನ್
ವಿಜಯನಗರ(ಹೊಸಪೇಟೆ): ಸರಕಾರ ಯಶಸ್ವಿ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ನಡೆಯಲಿರುವ ಸರ್ಕಾರದ ಸಾಧನಾ ಸಮಾವೇಶಕ್ಕೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯಸಭಾ ನಾಯಕರು ಹಾಗೂ ಐಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಮುಖ್ಯಮಂತ್ರಿಗ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಆಗಮಿಸಲಿದ್ದಾರೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಝಮೀರ್ ಅಹ್ಮದ್ ಖಾನ್ ಹೇಳಿದರು.
ಮಂಗಳವಾರ ನಗರದ ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ವೇದಿಕೆ ನಿರ್ಮಾಣ ಪರಿಶೀಲಿಸಿ ಬಳಿಕ ಮಾತನಾಡಿದರು. ಮೇ.20 ರಂದು ಹೊಸಪೇಟೆಯಲ್ಲಿ ನಡೆಯುವ ಸರ್ಕಾರದ ಸಾಧನಾ ಸಮಾವೇಶದಲ್ಲಿ 1 ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ಸಮರ್ಪಣಾ ಸಮಾವೇಶ ಮಾಡಲಾಗುವುದು. ಸಮಾರಂಭದ ಸಕಲ ಸಿದ್ಧತೆಗೆ ತಯಾರಿ ನಡೆಸಲಾಗಿದೆ. ವಿಜಯನಗರ ಜಿಲ್ಲೆಯ ಮೇಲೆ ಸಿಎಂ ಸಿದ್ದರಾಮಯ್ಯರಿಗೆ ವಿಶೇಷ ಕಾಳಜಿ ಇದೆ. ಈ ಭಾಗದ ಎಲ್ಲಾ ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಲಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ವೇದಿಕೆ ಸೇರಿದಂತೆ ಆಗಮಿಸುವ ಜನತೆಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸರ್ಕಾರದ ಸಾಧನಾ ಸಮಾವೇಶಕ್ಕೆ ಸಂಪುಟದ ಎಲ್ಲಾ ಸಚಿವರು, ಸಂಸದರು, ಶಾಸಕರು ಸೇರಿದಂತೆ ಅನೇಕ ಮುಖಂಡರು ಆಗಮಿಸುತ್ತಿದ್ದಾರೆ ಎಂದರು.
ಈ ವೇಳೆ ಸಂಸದ ಇ. ತುಕಾರಾಂ, ಶಾಸಕರಾದ ಹೆಚ್.ಆರ್.ಗವಿಯಪ್ಪ, ಶಾಸಕ ಜೆ.ಗಣೇಶ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ, ಹುಡಾ ಅಧ್ಯಕ್ಷ ಹೆಚ್.ಎನ್.ಎಫ್ ಅಧ್ಯಕ್ಷ ಇಮಾಮ್ ನಿಯಾಜಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಪಂ ಸಿಇಒ ನೋಂಗ್ಜಾಯ್ ಮುಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶ್ರೀಹರಿಬಾಬು.ಬಿ.ಎಲ್ ಇದ್ದರು.