ಶಕ್ತಿ ಯೋಜನೆ : ಹೊಸಪೇಟೆ ಕೆಕೆಎಸ್‌ಆರ್‌ಟಿಸಿಗೆ ಸರ್ಕಾರದಿಂದ 253.16 ಕೋಟಿ ರೂ. ಪಾವತಿ
ವಿಜಯನಗರ (ಹೊಸಪೇಟೆ) : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖವಾದ ಶಕ್ತಿ ಯೋಜನೆಯಿಂದ ವಿಜಯನಗರ ಜಿಲ್ಲೆಯ ಸಾರಿಗೆ ನಿಗಮಕ್ಕೆ ಹೆಚ್ಚಿನ ಆದಾಯ ವೃದ್ಧಿಯಾಗಿದೆ. ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆ ಸಾರಿಗೆ ಇಲಾಖೆಯನ್ನು ಬಲವರ್ಧನೆಗೊಳಿಸಿದೆ. ಯೋಜನೆ ಜಾರಿಯಾದ ಬಳಿಕ ಕೆಕೆಎಸ್‌ಆರ್‌ಟಿಸಿ ಹೊಸಪೇಟೆ ವಿಭಾಗದ ಬಸ್‌ಗಳಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಎಪ್ರೀಲ್‌ವರೆಗೆ 6.64 ಕೋಟಿ ಸಂಚರಿಸಿದ್ದಾರೆ.
2023 ಜೂನ್ 11 ರಂದು ಶಕ್ತಿ ಯೋಜನೆ ಜಾರಿಯಾಗಿದ್ದು, 2025 ರ ಎಪ್ರೀಲ್‌ವರೆಗೆ ವಿಜಯನಗರ ಜಿಲ್ಲೆಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹೊಸಪೇಟೆ ವಿಭಾಗದಲ್ಲಿ ಒಟ್ಟು 6.64 ಕೋಟಿ ಜನ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಈ ಪೈಕಿ 2.74 ಕೋಟಿ ಮಕ್ಕಳು, 6.36 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಇದರ ವೆಚ್ಚವಾಗಿ ಸರ್ಕಾರ ಕೆಕೆಎಸ್‌ಆರ್‌ಟಿಸಿಗೆ 253.16 ಕೋಟಿ ವೆಚ್ಚವನ್ನು ಭರಿಸಿದೆ.
ಶಕ್ತಿ ಯೋಜನೆಯಿಂದಾಗಿ ಉದ್ಯೋಗ ಸ್ಥಳಗಳಿಗೆ, ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರ, ಐತಿಹಾಸಿಕ ಸ್ಥಳಗಳು ಸೇರಿದಂತೆ ದೈನಂದಿನ ಕೆಲಸಕ್ಕೆ ಇನ್ನಿತರ ಕಡೆ ಪ್ರಯಾಣ ಬೆಳೆಸಲು ಶಕ್ತಿ ಯೋಜನೆ ಮಹಿಳೆಯರಿಗೆ ವರದಾನವಾಗಿದೆ. ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶವಿದೆ. ಇದರಿಂದ ಮಹಿಳೆಯರಿಗೆ ಪ್ರಯಾಣ ವೆಚ್ಚ ಉಳಿತಾಯವಾಗಿದ್ದರಿಂದ ವ್ಯಕ್ತಿಗತ ಖರ್ಚು ಕಡಿಮೆಯಾದಂತಾಗಿ ಜೀವನ ನಿರ್ವಹಣೆಗೆ ಅನುಕೂಲವಾಗಿದೆ. ಶಕ್ತಿ ಯೋಜನೆಯಿಂದ ವಿಶೇಷವಾಗಿ ಮಹಿಳಾ ಉದ್ಯೋಗಿಗಳಿಗೆ, ಸಣ್ಣ ಉದ್ದಿಮೆದಾರರಿಗೆ, ಕೆಲಸ ಮಾಡಲು ಬೇರೆ ಸ್ಥಳಗಳಿಗೆ ಹೋಗಿಬರುವ ಮಹಿಳೆಯರಿಗೆ ಸಹಾಯವಾಗಿದೆ.
ಶಕ್ತಿ ಯೋಜನೆ ಜಾರಿಯಾದ ಬಳಿಕ ಜಿಲ್ಲೆಯ ಪ್ರಸಿದ್ಧ ಐತಿಹಾಸಿಕ ಪ್ರವಾಸಿ ತಾಣ ಹಂಪಿ, ಧಾರ್ಮಿಕ ಕ್ಷೇತ್ರ ಕೊಟ್ಟೂರು, ಮೈಲಾರ ಸೇರಿ ಕೊಪ್ಪಳ ತಾಲೂಕಿನ ಹುಲಿಗಿ, ಅಂಜನಾದ್ರಿ ಬೆಟ್ಟ ಹಾಗೂ ವಿವಿಧ ದೇಗುಲಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭೇಟಿ ನೀಡಿದ್ದಾರೆ. ಶಕ್ತಿ ಯೋಜನೆಯಿಂದ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳು, ಜಾತ್ರಾ ಮಹೋತ್ಸವಗಳಲ್ಲಿ ವ್ಯಾಪಾರ ವಹಿವಾಟು ಬಲಗೊಂಡಿದೆ. ಪ್ರವಾಸೋದ್ಯಮ ಅವಲಂಬಿತ ಚಟುವಟಿಕೆಗಳಿಂದ ಉದ್ಯೋಗಗಳು ಸೃಷ್ಟಿಯಾಗಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಹಂಪಿ ವಿರೂಪಾಕ್ಷ ದೇಗುಲ, ಕೊಟ್ಟೂರಿನ ಕೊಟ್ಟೂರೇಶ್ವರ ದೇಗುಲಕ್ಕೆ ಅಮವಾಸೆ, ಹುಲಿಗಿ ದೇಗುಲ, ಗಾಳೆಮ್ಮ ದೇಗುಲಕ್ಕೆ ಹುಣ್ಣಿಮೆಗೆ ಧಾರ್ಮಿಕ ಕ್ಷೇತ್ರಗಳಲ್ಲಿ ಜನದಟ್ಟನೆ ಹೆಚ್ಚಾಗಿದೆ ಎಂದು ಕೆಕೆಎಸ್‌ಆರ್‌ಟಿಸಿ ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಹೀರಾ ತಿಳಿಸಿದ್ದಾರೆ.