×
Ad

ಸಿಜೆಐ ಬಿ.ಆರ್.ಗವಾಯಿ ಮೇಲೆ ಶೂ ಎಸೆತ ಪ್ರಕರಣ : ಎಸ್‌ಎಫ್‌ಐ ಖಂಡನೆ

Update: 2025-10-07 13:29 IST

ಶಿವರೆಡ್ಡಿ

ವಿಜಯನಗರ (ಹೊಸಪೇಟೆ) : ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರ ಮೇಲೆ ತೆರೆದ ನ್ಯಾಯಾಲಯದ ಕೋಣೆಯಲ್ಲೇ ಶೂ ಎಸೆದಿರುವ ಘಟನೆ ರಾಷ್ಟ್ರದ ನ್ಯಾಯಾಂಗ ಇತಿಹಾಸದಲ್ಲಿ ಅತ್ಯಂತ ಆಘಾತಕಾರಿ ಮತ್ತು ಶೋಚನೀಯ ಘಟನೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ವಿಜಯನಗರ ಜಿಲ್ಲಾ ಸಮಿತಿ ಖಂಡಿಸಿದೆ.

ಸನಾತನ ಧರ್ಮದ ಘೋಷಣೆಗಳನ್ನು ಕೂಗುತ್ತಾ ನ್ಯಾಯಾಂಗದ ಮೇಲೆ ಇಂತಹ ಹೀನ ಕೃತ್ಯ ಎಸಗಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಅವಮಾನವಾಗಿದೆ ಎಂದು ಎಸ್‌ಎಫ್‌ಐ ಪ್ರಕಟಣೆಯಲ್ಲಿ ತಿಳಿಸಿದೆ.

ಜಾತಿವಾದಿ, ಮನುವಾದಿ ಮತ್ತು ಕೋಮುವಾದಿ ವಿಚಾರಗಳನ್ನು ಉತ್ತೇಜಿಸುವ ಬಿಜೆಪಿ ಮುಖಂಡರ ಇತ್ತೀಚಿನ ಹೇಳಿಕೆಗಳು ಇಂತಹ ಅಸಹಿಷ್ಣು ಕೃತ್ಯಗಳಿಗೆ ಧೈರ್ಯ ತುಂಬುತ್ತಿವೆ ಎಂದು ಸಂಘಟನೆಯು ಆರೋಪಿಸಿದೆ.

ಈ ಘಟನೆ ಹಿಂದುತ್ವ ಪರ ಶಕ್ತಿಗಳು ಸಮಾಜದಲ್ಲಿ ಮನುವಾದಿ ಮತ್ತು ಕೋಮು ವಿಷವನ್ನು ಬಿತ್ತುತ್ತಿರುವುದಕ್ಕೆ ಮತ್ತೊಂದು ಸ್ಪಷ್ಟ ಉದಾಹರಣೆಯಾಗಿದೆ. ಇದು ಕೇವಲ ನ್ಯಾಯಮೂರ್ತಿ ಗವಾಯಿ ಅವರ ಮೇಲಿನ ದಾಳಿ ಅಲ್ಲ, ಸಂಪೂರ್ಣ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಅಪಮಾನವಾಗಿದೆ. ಕೇಂದ್ರ ಸರ್ಕಾರವು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಅಸಹಿಷ್ಣುತೆಯನ್ನು ಹರಡುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಎಫ್‌ಐ ಆಗ್ರಹಿಸಿದೆ.

ಸರ್ವೋಚ್ಚ ನ್ಯಾಯಾಲಯದ ಬಾರ್ ಅಸೋಸಿಯೇಷನ್‌ನಲ್ಲಿ ನೋಂದಾಯಿಸಿಕೊಂಡಿರುವ ಆರೋಪಿಯ ವಕಾಲತ್ತು ಸನ್ನದವನ್ನು ತಕ್ಷಣ ರದ್ದುಪಡಿಸಿ, ಆತನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಎಸ್‌ಎಫ್‌ಐ ವಿಜಯನಗರ ಘಟಕದ ಕಾರ್ಯದರ್ಶಿ ಶಿವರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News