2028ರವರೆಗೂ ಸಿದ್ದರಾಮಯ್ಯ ಅವರೇ ಸಿಎಂ : ಸಚಿವ ಝಮೀರ್ ಅಹ್ಮದ್
"ಸಿಎಂ ಸ್ಥಾನದಿಂದ ಅವರನ್ನು ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ"
ಹರಪನಹಳ್ಳಿ: ಮುಂಬರುವ 2028ರ ವಿಧಾನಸಭಾ ಚುನಾವಣೆಯವರೆಗೂ ಸಿದ್ದರಾಮಯ್ಯ ಅವರೇ ರಾಜ್ಯದ ಪೂರ್ಣ ಪ್ರಮಾಣದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಚಿವ ಝಮೀರ್ ಅಹ್ಮದ್ ಹೇಳಿದರು.
ತಾಲೂಕಿನ ತಾವರಗೊಂದಿ ಗ್ರಾಮದ ಬಳಿ ಎಂ.ಪಿ.ರವೀಂದ್ರ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಸಂಕ್ರಾಂತಿ ಔತಣಕೂಟದಲ್ಲಿ ಪಾಲ್ಗೊಂಡು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ. ಇತ್ತೀಚೆಗೆ ಮೈಸೂರಿನಲ್ಲಿ ರಾಹುಲ್ ಗಾಂಧಿಯವರನ್ನು ಸಿಎಂ ಮತ್ತು ಡಿಸಿಎಂ ಭೇಟಿಯಾಗಿರುವುದು ಕೇವಲ ಶಿಷ್ಟಾಚಾರದ ಭೇಟಿಯಷ್ಟೇ. ರಾಷ್ಟ್ರ ನಾಯಕರು ಬಂದಾಗ ರಾಜ್ಯ ನಾಯಕರು ಸ್ವಾಗತಿಸುವುದು ವಾಡಿಕೆ. ಅಲ್ಲಿ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿಯ ವಿರುದ್ಧ ಮುಖಂಡರೊಬ್ಬರು ನಡೆದುಕೊಂಡ ರೀತಿ ಬೇಸರ ತಂದಿದೆ ಎಂದು ಹೇಳಿದರು.
ಈ ಹಿಂದೆ ನವೆಂಬರ್‌ನಲ್ಲಿ ನಡೆಯುತ್ತಿದ್ದ ಹಂಪಿ ಉತ್ಸವವು ಕೊರೊನಾ ನಂತರ ದಿನಾಂಕ ಬದಲಾವಣೆ ಕಂಡಿದೆ. ಮುಂದಿನ ತಿಂಗಳು ಹಂಪಿ ಉತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುವುದು ಎಂದರು.
ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಕಳೆದ 8 ವರ್ಷಗಳಿಂದ ನಿರಂತರವಾಗಿ ಇಂತಹ ಔತಣಕೂಟಗಳ ಮೂಲಕ ಜನರೊಂದಿಗೆ ಬೆರೆತಿದ್ದಾರೆ. ದಿವಂಗತ ಎಂ.ಪಿ. ಪ್ರಕಾಶ್ ಹಾಗೂ ಎಂ.ಪಿ. ರವೀಂದ್ರ ಅವರ ಜನಪರ ಕಾಳಜಿಯೇ ಲತಾ ಮಲ್ಲಿಕಾರ್ಜುನ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಗೆಲ್ಲಲು ಸಹಕಾರಿಯಾಗಿದೆ ಎಂದು ಸಚಿವರು ಸ್ಮರಿಸಿದರು.
ಈ ಸಂದರ್ಭದಲ್ಲಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಹೊನ್ನಾಳಿ ಶಾಸಕ ಶಾಂತನಗೌಡ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಎಸ್.ಜಾಹ್ನವ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮೊಹಮ್ಮದ್ ಅಲಿ ಅಕ್ರಮ್ ಶಾ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಇಮಾನ್ ಜೀ, ವಕ್ಫ್ ಬೋರ್ಡ್ ಅಧಿಕಾರಿ ಅನ್ವರ್, ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ ಅಂಜಿನಪ್ಪ, ಗೌತಮ್ ಪ್ರಭು, ಈಡಿಗರ ನಾಗರಾಜ ಹುಲಿಕಟ್ಟೆ ಚಂದ್ರಪ್ಪ, ಮೈದುರು ರಾಮಪ್ಪ, ಸಲಾಂ ಸಾಬ್, ಸೇರಿದಂತೆ ಹಲವು ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.