×
Ad

ವಿಜಯನಗರ | ಮೀನಕೆರೆ ಗ್ರಾಮದಲ್ಲಿ ಶಿಲಾಯುಗ ಕಾಲದ ಅವಶೇಷ ಪತ್ತೆ

Update: 2025-10-01 19:07 IST

ವಿಜಯನಗರ : ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮೀನಕೆರೆ ಗ್ರಾಮದಲ್ಲಿ ಶಿಲಾಯುಗ ಕಾಲದ ಪುರಾವೆಗಳು ಪತ್ತೆಯಾಗಿವೆ.

ಹಗರಿ ನದಿಯ ದಂಡೆಯಲ್ಲಿರುವ ಈ ಗ್ರಾಮದಲ್ಲಿ, ಸೂಕ್ಷ್ಮ ಶಿಲಾಯುಗದ ಶಿಲಾ ಉಪಕರಣಗಳು, ನವಶಿಲಾಯುಗದ (ಕ್ರಿ.ಪೂ. 3000) ಉಜ್ಜಿ ನಯಗೊಳಿಸಿದ ಕೈಗೊಡಲಿ, ಮಡಿಕೆ ಚೂರುಗಳು ಹಾಗೂ ಬೃಹತ್ ಶಿಲಾಯುಗದ ಕುಟ್ಟುಚಿತ್ರಗಳನ್ನು ವಿಜಯನಗರ ತಿರುಗಾಟ ಸಂಶೋಧನಾ ತಂಡವು ಬೆಳಕಿಗೆ ತಂದಿದೆ.

ಮೀನಕೆರೆ ಗ್ರಾಮದ ನೈರುತ್ಯ ಭಾಗದ ಕೆಂಗಮಲೆಯಪ್ಪನವರ ಹೊಲದಲ್ಲಿ ಪತ್ತೆಯಾದ ಕುಟ್ಟುಚಿತ್ರಗಳಲ್ಲಿ ಗೂಳಿ ಮತ್ತು ಹಸುವಿನ ಪ್ರತಿರೂಪಗಳು ಪ್ರಮುಖವಾಗಿವೆ. ಹುಟ್ಟು ಕಲ್ಲುಬಂಡೆಗೆ ಚಪ್ಪಟೆಯಾಗಿ ಕುಟ್ಟಿದ ಗೂಳಿಯ ಚಿತ್ರ ಇಂದಿನ ಸೀಮೆಗೂಳಿಯನ್ನೇ ಹೋಲುತ್ತದೆ. ಅದರ ಪಕ್ಕದಲ್ಲೇ ಇನ್ನೊಂದು ಗುಂಡುಕಲ್ಲಿಗೆ ಕುಟ್ಟಿದ ಹಸುವಿನ ಚಿತ್ರವು ಸ್ಪಷ್ಟವಾಗಿ ಕಾಣುತ್ತದೆ.

ಈ ಕುಟ್ಟುಚಿತ್ರಗಳು 3 ಅಡಿ ಎತ್ತರ ಹಾಗೂ 3 ಅಡಿ ಉದ್ದ ಹೊಂದಿದ್ದು, ಗೂಳಿಯ ಕೊಂಬುಗಳು ಬಾಗಿಕೊಂಡಂತೆ ಹಾಗೂ ಕಾಲುಗಳು ನೆಟ್ಟಗೆ ನಿಂತಂತೆ ಚಿತ್ರಿಸಲಾಗಿದೆ. ಇದರಿಂದ ಕ್ರಿ.ಪೂ. ಕಾಲದಲ್ಲೇ ಗೂಳಿ ಮತ್ತು ಹಸುಗಳ ಪಾಲನೆ ನಡೆದಿತ್ತು ಎನ್ನುವ ಪುರಾವೆ ದೊರಕಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಡಾ. ಗೋವಿಂದ ತಿಳಿಸಿದ್ದಾರೆ.

ಇದರೊಂದಿಗೆ ಮೀನಕೆರೆ ಗ್ರಾಮದಲ್ಲಿ ಶಿಲಾಯುಗ ಕಾಲದಲ್ಲೇ ಮಾನವ ವಾಸವಿತ್ತು ಎಂಬುದಕ್ಕೆ ದೃಢವಾದ ಸಾಕ್ಷ್ಯಗಳು ಲಭ್ಯವಾಗಿವೆ. ಈ ಅಮೂಲ್ಯ ಕುಟ್ಟುಚಿತ್ರಗಳನ್ನು ಸಂರಕ್ಷಿಸಲು ಸ್ಥಳೀಯರಿಂದ ಒತ್ತಾಯ ವ್ಯಕ್ತವಾಗಿದೆ.

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News